ಎಐಸಿಸಿಗೆ ಹೊಸ ಅಧ್ಯಕ್ಷ? ಶೀಘ್ರದಲ್ಲೇ ಸಭೆ ನಡೆಸಲು ಸಿದ್ಧತೆ

Rahul Gandhi
Published on

ನವದೆಹಲಿ: ಎಐಸಿಸಿಗೆ ಹೊಸ ಅಧ್ಯಕ್ಷರ ನೇಮಕ ಮಾಡುವ ಪ್ರಕ್ರಿಯೆ ವಿಳಂಬ ಆಗುತ್ತಿರುವ ಬೆನ್ನಲ್ಲೇ ಮತ್ತೊಮ್ಮೆ ರಾಹುಲ್ ಗಾಂಧಿಯವರೇ ಅಧ್ಯಕ್ಷರಾಗಲಿ ಎಂಬ ಒತ್ತಾಯವೂ ಆ ಪಕ್ಷದ ಮುಖಂಡರಲ್ಲಿ ಹೆಚ್ಚಾಗಿದೆ. ಹಾಗೇ ರಾಹುಲ್​ ಗಾಂಧಿಯವರೂ ಅದನ್ನು ನಿರಾಕರಿಸುತ್ತಿದ್ದಾರೆ.

ಇದೀಗ ಎಐಸಿಸಿಗೆ ಹೊಸ ಅಧ್ಯಕ್ಷರ ನೇಮಕ ಮಾಡುವ ಸಂಬಂಧ ಸಭೆಯನ್ನು ಕರೆಯಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಚುನಾಯಿತರಾಗಲು ಅರ್ಹತೆ ಇರುವವರ ಪಟ್ಟಿಯನ್ನು ಕಳಿಸಲು ಎಐಸಿಸಿ, ಎಲ್ಲ ರಾಜ್ಯಗಳ ಕಾಂಗ್ರೆಸ್ ಘಟಕಕ್ಕೆ ಸೂಚನೆ ನೀಡಿದೆ.

ಎಐಸಿಸಿಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಶೀಘ್ರವೇ ಸಭೆ ಕರೆಯಲಾಗುವುದು. ಸಭೆಯ ದಿನಾಂಕ ಮತ್ತು ಸ್ಥಳವನ್ನು ಅಂತಿಮಗೊಳಿಸಿ, ಆದಷ್ಟು ಬೇಗ ಕಳಿಸಲಾಗುತ್ತದೆ ಎಂದು ಎಲ್ಲ ರಾಜ್ಯದ ಘಟಕಗಳಿಗೆ ಮಧುಸೂಧನ್​ ಮಿಸ್ತ್ರಿ ನೇತೃತ್ವದ ಕಾಂಗ್ರೆಸ್​ ಚುನಾವಣಾ ಪ್ರಾಧಿಕಾರ ಸಂದೇಶ ಕಳಿಸಿದೆ.

ಮುಂದಿನ ತಿಂಗಳು ಅಥವಾ 2021ರ ಪ್ರಾರಂಭದಲ್ಲಿ ಕಾಂಗ್ರೆಸ್​ನ ಈ ಸಭೆ ನಡೆಯಲಿದೆ. ರಾಹುಲ್ ಗಾಂಧಿಯವರನ್ನೇ ಮರಳಿ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net