ವಿಜಯವಾಣಿ ಸಂಪಾದಕೀಯ| ಪ್ರಗತಿಗೆ ಹೊಸ ವೇಗ

PM Modi
Published on

ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಸ್ಟ್ 15ರ ಸ್ವಾತಂತ್ರೊ್ಯೕತ್ಸವ ಭಾಷಣದಲ್ಲಿ ಪ್ರಕಟಿಸಿದ ‘ಪಿಎಂ ಗತಿ ಶಕ್ತಿ’ ಯೋಜನೆಗೆ ಬುಧವಾರ ಚಾಲನೆ ನೀಡಿದ್ದಾರೆ. ಮೂಲಸೌಕರ್ಯಕ್ಕೆ ಸಂಬಂಧಿಸಿದ ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡುವುದು, ಅಡೆತಡೆಗಳನ್ನು ನಿವಾರಿಸುವುದು ಮತ್ತು ಸಂಬಂಧಿತ ವಿಭಾಗಗಳು ಒಟ್ಟಾಗಿ ಕಾರ್ಯನಿರ್ವಹಿಸುವುದು ಈ ಯೋಜನೆಯ ಉದ್ದೇಶ. ನಮ್ಮಲ್ಲಿ ಮೂಲಸೌಕರ್ಯ ವಿಸ್ತರಣೆಯ ಹಲವು ಯೋಜನೆಗಳೇನೋ ಕೈಗೊಳ್ಳಲಾಗುತ್ತದೆ. ಆದರೆ, ಅವು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳ್ಳದೆ, ವೆಚ್ಚ ಹೆಚ್ಚುತ್ತಲೇ ಸಾಗುತ್ತವೆ. ಜತೆಗೆ, ಸರ್ಕಾರಿ ಕಾಮಗಾರಿ ಎಂದರೆ ಜನರಲ್ಲಿ ಕಡಿಮೆ ಗುಣಮಟ್ಟ ಎಂಬ ಭಾವನೆಯೂ ಇದೆ. ಆದರೆ, ‘21ನೇ ಶತಮಾನದಲ್ಲಿ ಭಾರತ ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುತ್ತಿದ್ದು, ಗುಣಮಟ್ಟದಿಂದ ಕೂಡಿರುತ್ತದೆ’ ಎಂದು ಪ್ರಧಾನಿ ಹೇಳಿರುವುದು ಗಮನಾರ್ಹ.

100 ಲಕ್ಷ ಕೋಟಿ ರೂ. ವೆಚ್ಚದ ‘ಗತಿ ಶಕ್ತಿ’ ಯೋಜನೆ ಸಮರ್ಪಕವಾಗಿ ಅನುಷ್ಠಾನವಾದಲ್ಲಿ ಮೂಲಸೌಕರ್ಯದ ವಿಷಯದಲ್ಲಿ ಬಹುದೊಡ್ಡ ಸುಧಾರಣೆಯನ್ನು ಕಾಣುವುದರಲ್ಲಿ ಅನುಮಾನವಿಲ್ಲ. ರಸ್ತೆ ಮತ್ತು ಹೆದ್ದಾರಿ, ರೈಲ್ವೆ, ವಿಮಾನ, ಪೆಟ್ರೋಲಿಯಂ ಮತ್ತು ಇಂಧನ, ದೂರಸಂಪರ್ಕ, ಕೈಗಾರಿಕಾ ಪಾರ್ಕ್​ಗಳನ್ನು ನಿರ್ವಿುಸುವ ವಿಭಾಗ ಸೇರಿದಂತೆ 16 ಸಚಿವಾಲಯಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಪರಸ್ಪರ ಬೆಸೆಯಲಾಗುತ್ತದೆ. ಅಂದರೆ, ಈ ಎಲ್ಲ ಸಚಿವಾಲಯಗಳಿಗೆ ಸಂಬಂಧಿಸಿದ ಯೋಜನೆಗಳು ವಿಳಂಬವಿಲ್ಲದೆ, ಗುಣಮಟ್ಟದ ಕಾಮಗಾರಿಯೊಂದಿಗೆ ಪೂರ್ಣಗೊಳಿಸಲು ಪರಸ್ಪರ ಸಮನ್ವಯ ಮತ್ತು ಸಹಕಾರ ಏರ್ಪಡಲಿದೆ. ಆಯಾ ಸಚಿವಾಲಯಗಳ ಪ್ರತ್ಯೇಕ ಅನುಮತಿ, ಇತರ ತಾಂತ್ರಿಕ ಗೊಂದಲಗಳಿಗೆ ಇಲ್ಲಿ ಆಸ್ಪದವಿರುವುದಿಲ್ಲ. ಮುಖ್ಯವಾಗಿ, ಒಂದು ಯೋಜನೆ ಬಹುಆಯಾಮದಿಂದ ಹಲವು ರಂಗಗಳಿಗೆ ಮತ್ತು ಜನಸಾಮಾನ್ಯರಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗುತ್ತಿದೆ.

90 ಜವಳಿ ಕ್ಲಸ್ಟರ್ ಅಥವಾ ಮೆಗಾ ಜವಳಿ ಪಾರ್ಕ್, 25 ಸಾವಿರ ಎಕರೆ ಪ್ರದೇಶದಲ್ಲಿ 11 ಕೈಗಾರಿಕಾ ಕಾರಿಡಾರ್ ಸ್ಥಾಪನೆ, 109 ಫಾರ್ವ ಕ್ಲಸ್ಟರ್, ರಕ್ಷಣಾ ಕ್ಷೇತ್ರದಲ್ಲಿ 1.7 ಲಕ್ಷ ಕೋಟಿ ರೂಪಾಯಿಯ ಹೂಡಿಕೆ, ‘ಒಂದು ನಗರ, ಒಂದು ಗ್ರಿಡ್’ ಉದ್ದೇಶ ಈಡೇರಲು 35 ಸಾವಿರ ಕಿ.ಮೀ. ಪ್ರದೇಶದಲ್ಲಿ ಗ್ಯಾಸ್ ಪೈಪ್​ಲೈನ್ ಅಳವಡಿಕೆ, ರೈಲ್ವೆಗೆ ಸಂಬಂಧಿಸಿದ ಮೂಲಸೌಕರ್ಯ ವಿಸ್ತರಣೆ ಸೇರಿದಂತೆ ಹಲವು ಯೋಜನೆಗಳು ‘ಗತಿ ಶಕ್ತಿ’ಯ ಭಾಗವಾಗಿವೆ. ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ 200ಕ್ಕಿಂತ ಅಧಿಕ ವಿಮಾನನಿಲ್ದಾಣಗಳು, ಹೆಲಿಪ್ಯಾಡ್ ನಿರ್ವಣಗೊಳ್ಳಲಿವೆ. ಈ ಎಲ್ಲ ಯೋಜನೆಗಳ ಮೂಲಕ ಉದ್ಯೋಗಸೃಷ್ಟಿ ಪ್ರಕ್ರಿಯೆಗೂ ವೇಗ ಸಿಗಲಿದ್ದು, ಸಾರಿಗೆ ಮತ್ತು ಸರಕು ಸಾಗಾಣಿಕೆ ವೆಚ್ಚ ತಗ್ಗಲಿದೆ. ಉತ್ತಮ ಆಶಯವುಳ್ಳ ಇಂಥ ಯೋಜನೆಗಳ ಜಾರಿಯೂ ಪ್ರಬಲ ಇಚ್ಛಾಶಕ್ತಿಯಿಂದ ನಡೆಯಬೇಕು ಮತ್ತು ಜನಸಾಮಾನ್ಯರವರೆಗೂ ಅದರ ಲಾಭ ತಲುಪಬೇಕು. ಉದ್ಯೋಗಸೃಷ್ಟಿ ಸೇರಿದಂತೆ ಜನರ ಜೀವನಸ್ತರ ಎತ್ತರಿಸಲು ಪೂರಕವಾಗಿ ಪರಿಣಮಿಸಬೇಕು. ಆಗಲೇ ಇಂಥ ಆಶಯಗಳು ನಿಜವಾದ ಅರ್ಥದಲ್ಲಿ ಗುರಿ ಸಾಧಿಸಲು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net