Naveen Sajju - ಹೊಸ ಚಿತ್ರಕ್ಕೆ ನವೀನ್​ ಸಜ್ಜು

ನವೀನ್ ಸಜ್ಜು
ನವೀನ್ ಸಜ್ಜು
Published on
Naveen Sajju -
ರಾಜ್ಯಪ್ರಶಸ್ತಿ ವಿಜೇತ ಗಾಯಕ ನವೀನ್​ ಸಜ್ಜು ನಾಯಕನಾಗಿ ನಟಿಸಿರುವ ಮೊದಲ ಸಿನಿಮಾ "ಲೋ ನವೀನ' ಇದೇ ಮೇ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಅವರ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಕೆಲ ದಿನಗಳ ಹಿಂದಷ್ಟೇ "ಲೋ ನವೀನ' 50 ದಿನಗಳನ್ನು ಪೂರೈಸಿದ್ದು, ಆ ಖುಷಿಯ ಜತೆಗೆ ಸೋಮವಾರ (ಜು. 27) ಹುಟ್ಟುಹಬ್ಬದ ಸಂಭ್ರಮದಲ್ಲಿ ಅವರು ನಟಿಸುತ್ತಿರುವ ಹೊಸ ಸಿನಿಮಾ ಘೋಷಣೆಯಾಗಿದೆ. "ಸೀಜರ್​' ಮತ್ತು "ಹಂಟರ್​' ಚಿತ್ರಗಳನ್ನು ನಿರ್ದೇಶಿಸಿರುವ ವಿನಯ್​ ಕೃಷ್ಣ ಈ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದು, ಶ್ರೀರಂಗ ಕಂಬೈನ್ಸ್​ ಬ್ಯಾನರ್​ನಲ್ಲಿ ಉದಯ್​ ಕುಮಾರ್​ ಎಸ್​.ಟಿ. ಮತ್ತು ಅರುಣ್​ ಕುಮಾರ್​ ಸಿ. ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಸದ್ಯ ಚಿತ್ರತಂಡ ಟೈಟಲ್​ ಗುಟ್ಟಾಗಿಟ್ಟಿದ್ದು, ಆಷಾಢದ ಬಳಿಕ ಶೂಟಿಂಗ್​ ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ. ಚಿತ್ರದ ಬಗ್ಗೆ ನಿರ್ದೇಶಕ ವಿನಯ್​ ಕೃಷ್ಣ, "ನಿರಂಜನ್​ ಸುಧೀಂದ್ರ ಅವರು ನಾಯಕನಾಗಿರುವ "ಹಂಟರ್​' ಸದ್ಯ ರಿಲೀಸ್​ಗೆ ರೆಡಿಯಿದೆ. ಆ ಬಳಿಕ ಒಂದು ಕಥೆ ಮಾಡಿಕೊಂಡಿದ್ದೆ. ಅದಕ್ಕೆ ನಾಯಕನನ್ನಾಗಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಅಂತ ಗೊಂದಲದಲ್ಲಿದ್ದೆ. ಅದೇ ಸಮಯದಲ್ಲಿ "ಲೋ ನವೀನ' ಬಿಡುಗಡೆಯಾಯಿತು. ಅದರಲ್ಲಿ ನವೀನ್​ ಸಜ್ಜು ಅವರ ನಟನೆ ನೋಡಿದೆ. ಇಷ್ಟವಾಯಿತು. ಜತೆಗೆ ನನ್ನ ಕಥೆಗೆ ಇವರು ಹೊಂದುತ್ತಾರೆ ಅಂತನ್ನಿಸಿ, ಅವರ ಜತೆ ಮಾತನಾಡಿದೆ. ಅವರೂ ಒಪ್ಪಿದರು. ಇದೀಗ ಅವರ ಹುಟ್ಟುಹಬ್ಬದಂದು ಘೋಷಿಸಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ. ಇನ್ನು ನವೀನ್​ ಸಜ್ಜು, ಇದಲ್ಲದೇ "ಕೆಮಿಸ್ಟ್ರಿ ಆಫ್​ ಕರಿಯಪ್ಪ', "ಲವ್​ ಯು ಮುದ್ದು' ಖ್ಯಾತಿಯ ಕುಮಾರ್​ ನಿರ್ದೇಶನದ "ಮ್ಯಾನ್ಷನ್​ ಹೌಸ್​ ಮುತ್ತು' ಹಾಗೂ ಇನ್ನೂ ಹೆಸರಿಡದ ಇನ್ನೊಂದು ಸಿನಿಮಾದಲ್ಲಿ ನಟಿಸಿದ್ದು, ಇದೇ ವರ್ಷ ಈ ಎರಡು ಚಿತ್ರಗಳೂ ರಿಲೀಸ್​ ಆಗುವ ನಿರೀಕ್ಷೆಯಿದೆ.
ಕೋಟ್​:
ಇದೊಂದು ರೊಮ್ಯಾಂಟಿಕ್​ ಆ್ಯಕ್ಷನ್​ ಥ್ರಿಲ್ಲರ್​ ಜಾನರ್​ ಚಿತ್ರ. ಹೀಗಾಗಿ ನವೀನ್​ ಅವರನ್ನು ಹೊಸ ಅವತಾರದಲ್ಲಿ ನೋಡಬಹುದು. ಅವರಿಗೆ ಆ್ಯಕ್ಷನ್​ ಮತ್ತು ಸ್ಟಂಟ್​ ತರಬೇತಿ ಪಡೆಯಲು ತಿಳಿಸಿದ್ದೇನೆ. ಅವರು ಸಿದ್ಧತೆ ನಡೆಸುತ್ತಿದ್ದಾರೆ. ಬೆಂಗಳೂರು, ಮೈಸೂರು. ಕೇರಳ, ಪಾಂಡಿಚೆರಿ ಸೇರಿ ವಿವಿಧೆಡೆ ಮೂರು ಅಥವಾ ನಾಲ್ಕು ಶೆಡ್ಯೂಲ್​ಗಳಲ್ಲಿ ಶೂಟಿಂಗ್​ ನಡೆಸಲು ಪ್ಲಾ$್ಯನ್​ ಮಾಡಿಕೊಂಡಿದ್ದೇವೆ. ಮುಂದಿನ ಸಂಕ್ರಾಂತಿ ಅಥವಾ ಶಿವರಾತ್ರಿ ಹಬ್ಬಕ್ಕೆ ರಿಲೀಸ್​ ಮಾಡುವ ಆಲೋಚನೆಯಿದೆ.
- ವಿನಯ್​ ಕೃಷ್ಣ, ನಿರ್ದೇಶಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net