

ನವದೆಹಲಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸಂಬಂಧ ಎದ್ದಿದ್ದ ಊಹಾಪೋಹಗಳಿಗೆ ತೆರೆಬಿದ್ದಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಷಾ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಎಲ್ಲವೂ ಸುಸೂತ್ರವಾಗಿ ನಡೆದಿದ್ದು, ಡಿಸೆಂಬರ್ 05ರಂದು ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರಕ್ಕೆ ಅಸ್ಥಿತ್ವಕ್ಕೆ ಬರಲಿದೆ ಎಂದು ಎನ್ಸಿಪಿ ನಾಯಕ ಅಜಿತ್ ಪವಾರ್ (Ajit Pawar) ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಗೃಹಸಚಿವ ಅಮಿತ್ ಷಾ ಜೊತೆಗಿನ ಸಭೆ ಬಳಿಕ ಮಾತನಾಡಿದ ಅಜಿತ್ ಪವಾರ್ (Ajit Pawar), ಬಿಜೆಪಿಗೆ ಮುಖ್ಯಮಂತ್ರಿ ಹುದ್ದೆ, ಶಿವಸೇನೆಯ ಶಿಂಧೆ ಮತ್ತು ನಮ್ಮ ಪಕ್ಷಕ್ಕೆ ತಲಾ ಒಂದೊಂದು ಡಿಸಿಎಂ ಹುದ್ದೆ ಸಿಗಲಿದೆ. ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ವಿಚಾರವೂ ಸ್ವಲ್ಪ ದಿನಗಳಲ್ಲಿ ಬಹಿರಂಗವಾಗಲಿದೆ. ಯಾವ ಪಕ್ಷಕ್ಕೆ ಎಷ್ಟು ಸಚಿವ ಸ್ಥಾನ ನೀಡಲಾಗುತ್ತದೆ ಎಂಬುದು ಸದ್ಯದಲ್ಲಿಯೇ ತಿಳಿಯಲಿದೆ ಎಂದು ಅಜಿತ್ ಪವಾರ್ (Ajit Pawar) ಹೇಳಿದ್ದಾರೆ.
ಬಿಜೆಪಿಯ ಹಿರಿಯ ನಾಯಕರೊಬ್ಬರು ಡಿಸೆಂಬರ್ 05ರಂದು ಮುಂಬೈನ ಅಜಾದ್ ಮೈದಾನದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಅಜಿತ್ ಪವಾರ್ ಅಮಿತ್ ಷಾ ಜೊತೆಗಿನ ಸಭೆಯ ಪ್ರಮುಖ ಅಂಶಗಳ ಬಗ್ಗೆ ಮಾತನಾಡಿದ್ದು, ಸಿಎಂ ಯಾರಾಗಲಿದ್ದಾರೆ ಎಂಬ ವಿಚಾರದ ಬಗ್ಗೆ ಈವರೆಗೂ ಸ್ಪಷ್ಟ ಚಿತ್ರಣ ಹೊರಬಿದ್ದಿಲ್ಲ.