

| ಮಂಜು ಬನವಾಸೆ ಹಾಸನ
ಶಿರಾಡಿಘಾಟ್ನಲ್ಲಿ ತಾಂತ್ರಿಕ ಅದ್ಭುತವೆನ್ನಿಸುವ ಸುರಂಗ ಮಾರ್ಗ ನಿರ್ವಣವಾಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದ ಜನರಿಗೆ ಹಾಲಿ ರಸ್ತೆಯನ್ನು ಚತುಷ್ಪಥವಾಗಿ ವಿಸ್ತರಣೆ ಮಾಡುವ ಯೋಜನೆಗೆ ಕೇಂದ್ರ ಸಾರಿಗೆ ಇಲಾಖೆ ಹಸಿರು ನಿಶಾನೆ ತೋರಿಸಿರುವುದು ಗೊಂದಲ ಮೂಡಿಸಿದೆ.
ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದಿಂದ 1200 ಕೋಟಿ ರೂಪಾಯಿ ವೆಚ್ಚದಲ್ಲಿ ಶಿರಾಡಿಘಾಟ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75 ಅನ್ನು ಚತುಷ್ಪಥವಾಗಿ ವಿಸ್ತರಿಸಿ ಕಾಂಕ್ರಿಟೀಕರಣ ಮಾಡುವುದಾಗಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಅದಕ್ಕೆ ಅಗತ್ಯವಿರುವ ಎಲ್ಲ ಸಹಕಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಭರವಸೆ ನೀಡಿದ್ದಾರೆ.
ಶಿರಾಡಿಘಾಟ್ ವೈಶಿಷ್ಟ್ಯಗಳು: ರಾಷ್ಟ್ರೀಯ ಹೆದ್ದಾರಿ 75 ನೆಲಮಂಗಲದ ಹತ್ತಿರ ರಾ.ಹೆ. 4ರ ಕಿಮೀ 29ರಲ್ಲಿ ಪ್ರಾರಂಭವಾಗಿ ಮಂಗಳೂರಿನಲ್ಲಿ 352ನೇ ಕಿ.ಮೀ.ನಲ್ಲಿ ಮುಕ್ತಾಯವಾಗುತ್ತದೆ. ಬಂದರು ನಗರಿಯನ್ನು ರಾಜ್ಯ ರಾಜಧಾನಿಗೆ ಸಂರ್ಪಸುವ ಹೆಚ್ಚು ವಿಶಾಲವಾದ ಹಾಗೂ ಸಮೀಪದ ಮಾರ್ಗ ಇದೊಂದೇ ಆಗಿದೆ. ಇಂತಹ ಪ್ರಮುಖ ಹೆದ್ದಾರಿಯಲ್ಲಿ ನಿರ್ವಹಣೆ, ರಸ್ತೆ ನಿರ್ಮಾಣ ಎರಡೂ ಅತ್ಯಂತ ಕ್ಲಿಷ್ಟವಾಗಿರುವ ಭಾಗವೇ 26 ಕಿ.ಮೀ. ವ್ಯಾಪ್ತಿ ಹೊಂದಿರುವ ಶಿರಾಡಿಘಾಟ್. ಬೆಂಗಳೂರಿನಿಂದ ಬಿ.ಸಿ.ರೋಡ್ವರೆಗಿನ ರಸ್ತೆಮಾರ್ಗ ಎನ್ಎಚ್ಎಐ ಉಸ್ತುವಾರಿಯಲ್ಲಿದ್ದರೆ, ಮಧ್ಯದಲ್ಲಿ ಶಿರಾಡಿಘಾಟ್ ವ್ಯಾಪ್ತಿಯ 26 ಕಿಮೀ ಮಾತ್ರವೇ ರಾಷ್ಟ್ರೀಯ ಹೆದ್ದಾರಿಗಳ ಇಲಾಖೆಗೆ ಒಳಪಡುತ್ತದೆ. ಈ ರಸ್ತೆಯನ್ನು 2014ರಿಂದ 2 ಹಂತಗಳಲ್ಲಿ ಕಾಂಕ್ರೀಟೀಕರಣ ಮಾಡುವ ಜತೆಗೆ, ರಸ್ತೆಯನ್ನು 9 ಮೀ. ಅಗಲವಾಗಿ ವಿಸ್ತರಿಸಲಾಗಿದೆ.
ಈ ಹೆದ್ದಾರಿ 237ನೇ ಕಿ.ಮೀ.ನಿಂದ 263ನೇ ಕಿ.ಮೀ.ವರೆಗೆ ಪಶ್ಚಿಮಘಟ್ಟದ ಶಿರಾಡಿಘಾಟ್ನಲ್ಲಿ ಹಾದುಹೋಗುತ್ತದೆ. ಈ ಭಾಗದಲ್ಲಿ ವಾರ್ಷಿಕ ಸರಾಸರಿ 6000 ರಿಂದ 7000 ಮಿಮೀ ಮಳೆ ಸುರಿಯುತ್ತದೆ. ದಟ್ಟವಾದ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ರಸ್ತೆ ಮೊನಚಾದ ತಿರುವು, ಕಡಿದಾದ ಕಣಿವೆಗಳಿಂದ ಕೂಡಿದೆ. ಈ ಭಾಗದ ಸರಾಸರಿ ವಾಹನ ಸಂಚಾರದ ಸಾಂದ್ರತೆ ಪಿಸಿಯು (ಪ್ಯಾಸೆಂಜರ್ ಕಾರ್ ಯೂನಿಟ್ ಅಂದರೆ, ನಾಲ್ವರು ಪ್ರಯಾಣಿಸುವ ಒಂದು ವಾಹನವನ್ನು ಒಂದು ಯೂನಿಟ್ ಎಂದು ಪರಿಗಣಿಸಲಾಗುತ್ತದೆ) 23000 ಆಗಿದ್ದು, ಮಳೆಗಾಲದಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗುವುದರ ಪರಿಣಾಮ, ರಸ್ತೆಯ ಸಾಮರ್ಥ್ಯ ಶಿಥಿಲಗೊಳ್ಳುತ್ತದೆ ಹಾಗೂ ಭಾರಿ ಪ್ರಮಾಣದ ವಾಹನಗಳು ಚಲಿಸುವುದರಿಂದ ರಸ್ತೆಯ ಮೇಲ್ಪದರ ಆಗಾಗ್ಗೆ ಹಾಳಾಗುತ್ತದೆ. ಇದರಿಂದ ರಸ್ತೆಯ ವಾರ್ಷಿಕ ನಿರ್ವಹಣೆ ವೆಚ್ಚವೂ ಹೆಚ್ಚಾಗುತ್ತಿತ್ತು. ಹಲವು ದಶಕಗಳಿಂದ ಮಳೆಗಾಲದಲ್ಲಿ ರಸ್ತೆ ಹಾಳಾಗುತ್ತಿದ್ದರಿಂದ ಶಾಶ್ವತ ಪರಿಹಾರವಾಗಿ ರಸ್ತೆಯನ್ನು ಕಾಂಕ್ರೀಟೀಕರಣ ಮಾಡಲಾಯಿತು.
ಶಿರಾಡಿ ಸುರಂಗ ಮಾರ್ಗದಿಂದ ಭೂಮೇಲ್ಮೈ ಹಾಗೂ ಕಾಡುಪ್ರಾಣಿಗಳ ಓಡಾಟಕ್ಕೆ ತೊಂದರೆಯಾಗುತ್ತಿರಲಿಲ್ಲ. ಈಗಾಗಲೇ ಬಿಸಿಲೆ, ಚಾರ್ವಡಿ, ಶಿರಾಡಿ, ರೈಲು ಮಾರ್ಗಗಳಿಂದ ಹಾನಿಯಾಗಿರುವ ಪಶ್ಚಿಮಘಟ್ಟಕ್ಕೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಯೋಜನೆಯಿಂದ ಭಾರಿ ತೊಂದರೆಯಾಗಲಿದೆ. ವನ್ಯಜೀವಿಗಳ ಆವಾಸಕ್ಕೆ ಧಕ್ಕೆಯಾಗಲಿದೆ. ಭೂ ಕುಸಿತದಂಥ ಭಾರಿ ವಿಪತ್ತುಗಳಿಗೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ. | ಎಚ್.ಎ.ಕಿಶೋರಕುಮಾರ್ ಪಶ್ಚಿಮಘಟ್ಟ ಹೋರಾಟ ಸಮಿತಿ ಅಧ್ಯಕ್ಷ
ತಪ್ಪದ ಭೂಕುಸಿತ: ಶಿರಾಡಿಘಾಟ್ ವ್ಯಾಪ್ತಿಯ ರಸ್ತೆಯನ್ನು ಕಾಂಕ್ರೀಟೀಕರಣ ಮಾಡಿದ ನಂತರ ರಸ್ತೆ ಗುಂಡಿ ಬಿದ್ದು ಹಾಳಾಗುವ ಸಮಸ್ಯೆಯಿಂದ ಮುಕ್ತಿ ದೊರಕಿದರೂ 2018ರಿಂದ 14 ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿ ರಸ್ತೆಯಲ್ಲಿ ಸುರಕ್ಷಿತ ಸಂಚಾರಕ್ಕೆ ಧಕ್ಕೆಯುಂಟಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ತಾತ್ಕಾಲಿಕ ತೇಪೆ ಕೆಲಸ ಮುಗಿಸಿ ಮೂರು ವರ್ಷಗಳಿಂದ ಅದೇ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.
ಕೇಂದ್ರ ಸರ್ಕಾರ ಈಗ ಘೊಷಿಸಿರುವ ಶಿರಾಡಿಘಾಟ್ ರಸ್ತೆ ವಿಸ್ತರಣೆ ಯೋಜನೆ ತಾಂತ್ರಿಕವಾಗಿ ಸವಾಲಿನ ಕೆಲಸವೆನ್ನುವುದು ನಿಜವಾದರೂ ಅದು ಪೂರ್ಣಗೊಂಡರೆ ಬೆಂಗಳೂರು-ಮಂಗಳೂರು ನಡುವಿನ ಪ್ರಯಾಣದ ಅವಧಿಯೂ ಗಮನಾರ್ಹವಾಗಿ ಇಳಿಕೆಯಾಗಲಿದೆ. ಸದ್ಯ ಬೆಂಗಳೂರಿನಿಂದ ಹಾಸನವರೆಗೂ ಚತುಷ್ಪಥ ಡಾಂಬರು ರಸ್ತೆಯಿದ್ದು, ಹಾಸನದಿಂದ ಬಿ.ಸಿ.ರೋಡ್ವರೆಗೆ ಕಾಂಕ್ರೀಟ್ ಚತುಷ್ಪಥ ರಸ್ತೆ ನಿರ್ಮಾಣ ಯೋಜನೆ ಜಾರಿಯಲ್ಲಿದೆ. ಆಮೆವೇಗದಲ್ಲಿ ಸಾಗುತ್ತಿರುವ ಈ ಯೋಜನೆಯಲ್ಲಿ ಶಿರಾಡಿಘಾಟ್ ವ್ಯಾಪ್ತಿಯ 26 ಕಿಮೀಗಳನ್ನು ಹೊರಗಿಡಲಾಗಿತ್ತು. ಹೀಗಾಗಿ ಹಾಸನ-ಬಿ.ಸಿ.ರೋಡ್ ನಡುವಿನ ವಾಹನಗಳ ಸಂಚಾರದ ವೇಗ ಹೆಚ್ಚಿದರೂ ಘಾಟ್ ರಸ್ತೆಯಲ್ಲಿ ವಾಹನಗಳ ವೇಗ ತಗ್ಗಿಸುವುದು ಅನಿವಾರ್ಯ. ಸದ್ಯ ವಾಹನಗಳು ಈ ವ್ಯಾಪ್ತಿ ದಾಟಲು 50-70 ನಿಮಿಷಗಳ ಸಮಯ ತೆಗೆದುಕೊಳ್ಳುತ್ತಿವೆ. ಚತುಷ್ಪಥ ರಸ್ತೆ ನಿರ್ವಣವಾದರೆ ಗಂಟೆಗೆ 80 ಕಿಮೀ ವೇಗದಲ್ಲಿ ವಾಹನ ಸಂಚಾರಕ್ಕೆ ಅವಕಾಶವಾಗಲಿದೆ. ಆದರೆ ರಸ್ತೆಯ ಒಂದು ಬದಿಯಲ್ಲಿ ಪ್ರಪಾತ, ಅಡ್ಡಹೊಳೆ, ಕಾಡುಮನೆ ಹೊಳೆ, ಕೆಂಪುಹೊಳೆಗಳು, ಇನ್ನೊಂದು ಬದಿಯಲ್ಲಿ ಪಶ್ಚಿಮಘಟ್ಟದ ಬೃಹತ್ ಬೆಟ್ಟಗಳಿದ್ದು ಈಗ ಅದನ್ನು ಚತುಷ್ಪಥವಾಗಿ ವಿಸ್ತರಿಸುವುದಾದರೆ ಯೋಜನೆ ರೂಪಿಸುವವರು ಬೆಟ್ಟ ಕತ್ತರಿಸುವ ಮಾರ್ಗವನ್ನು ಹಿಡಿಯುತ್ತಾರೋ ಅಥವಾ ರಸ್ತೆ ಎಡ ಬದಿಯ ಪ್ರಪಾತಗಳಿಗೆ ಮಣ್ಣು ತುಂಬಿ, ರಸ್ತೆ ಪಕ್ಕದಲ್ಲೇ ಹಾದು ಹೋಗುವ ನದಿಗಳಿಗೆ ಮೇಲ್ಸೇತುವೆ ನಿರ್ವಿುಸುವ ಆಲೋಚನೆ ಮಾಡುತ್ತಾರೋ ಎನ್ನುವುದು ಕುತೂಹಲ ಮೂಡಿಸಿದೆ. ಈಗಾಗಲೇ ಶಿರಾಡಿಘಾಟ್ ವ್ಯಾಪ್ತಿಯಲ್ಲಿ 2018ರಲ್ಲಿ ಭಯಾನಕ ಭೂ ಕುಸಿತಗಳನ್ನು ಕಂಡಿರುವ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ವಾರ್ಷಿಕ 7000 ಮಿಮೀ ಮಳೆ ಬೀಳುವ, ಬೃಹತ್ ಪರ್ವತಗಳಿಂದ ಜಲಧಾರೆ ಸುರಿಯುವ ಕಲ್ಲುಬಂಟೆ, ಗುಡ್ಡಗಳನ್ನು ಕತ್ತರಿಸುವ ಗೋಜಿಗೆ ಹೋಗುತ್ತದೆಯೇ? ಯೋಜನೆ ಕಾರ್ಯಸಾಧುತ್ವದ ವರದಿ ಏನು ಹೇಳಬಹುದು ಎನ್ನುವುದು ಕುತೂಹಲ ಮೂಡಿಸಿದೆ.
ಶಿರಾಡಿಘಾಟ್ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆ ಮಾಡಲು ಅಗತ್ಯ ಸ್ಥಳ ಲಭ್ಯವಿಲ್ಲದ ಕಾರಣಕ್ಕಾಗಿಯೇ 2008ರಲ್ಲಿಯೇ 23.57 ಕಿಮೀ ಉದ್ದದ ಸುರಂಗ ಮಾರ್ಗ ನಿರ್ವಿುಸಲು ಜಪಾನ್ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಲಾಯಿತು. 1015 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗೆ ಜೈಕಾದಿಂದ ಸಾಲ ಪಡೆಯಲು ಉದ್ದೇಶಿಸಲಾಗಿತ್ತು. ಆದರೆ ನಂತರದಲ್ಲಿ ತೆರೆಮರೆಗೆ ಸರಿದಿದ್ದ ಈ ಯೋಜನೆ ಜಾರಿಗೆ 2018ರಲ್ಲಿ ಒಪ್ಪಿಗೆ ಸೂಚಿಸಿದ ಕೇಂದ್ರ ಸರ್ಕಾರ, ಎನ್ಎಚ್ಎಐ ಮೂಲಕ ಭಾರತಮಾಲಾ ಯೋಜನೆಯಡಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ಪರಿಷ್ಕೃತ ಯೋಜನೆ ಜಾರಿಗೆ ಅನುಮತಿಸಿತು. ಅಡ್ಡಹೊಳೆ, ಗುಂಡ್ಯ, ಯಡಕುಮರಿ, ಕಡಗರವಳ್ಳಿ, ಮಾರನಹಳ್ಳಿ ಸೇರಿದಂತೆ ಹತ್ತು ಕಡೆ ಸೇತುವೆ ನಿರ್ವಿುಸಿ, 6 ಸುರಂಗಗಳನ್ನು ಹೊಂದಿರುವ ಮಾದರಿ ಯೋಜನೆಯನ್ನು ರೂಪಿಸಲಾಗಿತ್ತು. ಅಗತ್ಯವಿದ್ದ ಭೂಮಿಯನ್ನೂ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ಈಗ ಹಾಲಿ ರಸ್ತೆಯನ್ನೇ ಚತುಷ್ಪಥವಾಗಿ ವಿಸ್ತರಿಸುವ ಯೋಜನೆ ಘೊಷಣೆ ಆಗಿದ್ದು, ಸುರಂಗ ಮಾರ್ಗದ ಕಾರ್ಯಸಾಧುತ್ವ ಅಧ್ಯಯನಕ್ಕೆ ಸಚಿವ ಗಡ್ಕರಿ ಸೂಚನೆ ನೀಡಿರುವುದು ಆ ಯೋಜನೆ ಕೈಬಿಡುವ ಸಾಧ್ಯತೆ ಗೋಚರಿಸುತ್ತಿದೆ.