ನಾಳೆಯಿಂದ ಹೊಸ ಜೀವನ ದೇಶಾದ್ಯಂತ ಅನ್​ಲಾಕ್-1; ದೇಗುಲ, ಮಾಲ್, ಹೋಟೆಲ್ ಓಪನ್

front page 1
Published on

ಬೆಂಗಳೂರು: ಆರ್ಥಿಕತೆ ಚೇತರಿಕೆಯ ಜತೆ ಜತೆಯಲ್ಲೇ ಕರೊನಾ ವಿರುದ್ಧದ ಹೋರಾಟ ಮುಂದುವರಿಸುವ ಸಂಕಲ್ಪವಾಗಿ ಲಾಕ್​ಡೌನ್ ನಿಯಮವನ್ನು ಬಹುತೇಕ ಸಡಿಲಿಸಿ ಕೇಂದ್ರ ಸರ್ಕಾರ ಘೋಷಿಸಿದ್ದ ಅನ್​ಲಾಕ್ -1 ಸೋಮವಾರದಿಂದ (ಜೂ.8) ದೇಶಾದ್ಯಂತ ಜಾರಿಗೆ ಬರಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಕಡ್ಡಾಯದಂತಹ ಷರತ್ತುಗಳನ್ವಯ ದೇವಸ್ಥಾನ, ಶಾಪಿಂಗ್ ಮಾಲ್, ಹೋಟೆಲ್ ಹಾಗೂ ರೆಸ್ಟೋರೆಂಟ್​ಗಳ ವಹಿವಾಟು ಪುನರಾರಂಭಗೊಳ್ಳುವುದರಿಂದ ಈ ಕ್ಷೇತ್ರಗಳನ್ನೇ ನಂಬಿಕೊಂಡಿದ್ದ ಕೋಟ್ಯಂತರ ಕುಟುಂಬಗಳಿಗೆ ಮೂರು ತಿಂಗಳ ಬಳಿಕ ಹೊಸ ಜೀವನ ಶುರುವಾಗಲಿದೆ.

ಲಾಕ್​ಡೌನ್ 4.0 ಮುಕ್ತಾಯದ ಬಳಿಕ ಕೈಗಾರಿಕೆಗಳ ವಹಿವಾಟು, ಕೆಎಸ್ಸಾರ್ಟಿಸಿ, ಬಿಎಂಟಿಸಿ, ಆಟೋ, ಟ್ಯಾಕ್ಸಿ, ರೈಲು ಸೇವೆ ಆರಂಭಿಸಲಾಗಿತ್ತು. ಇದೀಗ ದೇವಸ್ಥಾನ, ಹೋಟೆಲ್, ಮಾಲ್ ಹಾಗೂ ರೆಸ್ಟೋರೆಂಟ್​ಗಳು ಬಾಗಿಲು ತೆರೆಯಲಿವೆ. ಶಾಲಾ-ಕಾಲೇಜು, ಸಿನಿಮಾ ಥಿಯೇಟರ್, ಈಜುಕೊಳ, ಜಿಮ್ ಕೇಂದ್ರ, ಅಂತಾರಾಷ್ಟ್ರೀಯ ವಿಮಾನ ಯಾನ ಆರಂಭಕ್ಕೆ ಇನ್ನೂ ಮುಹೂರ್ತ ನಿಗದಿಯಾಗಿಲ್ಲ. ಕರೊನಾ ಪ್ರಕರಣಗಳ ಸಂಖ್ಯೆ ಏರುತ್ತಿರುವ ಆತಂಕದ ನಡುವೆಯೇ ರಾಜ್ಯ ಸರ್ಕಾರ ಕೇಂದ್ರದ ಮಾರ್ಗಸೂಚಿ ಆನ್ವಯ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಕರೊನಾ ಹರಡುವಿಕೆ ನಿಯಂತ್ರಣಕ್ಕಾಗಿ ರೂಪಿಸಿರುವ ನಿಯಮಗಳ ಸೂಕ್ತ ಪಾಲನೆಗಾಗಿ ಗ್ರಾಹಕರನ್ನು ಎಚ್ಚರಿಸುವ ಫಲಕಗಳನ್ನು ರಾಜ್ಯದೆಲ್ಲೆಡೆ ಅಳವಡಿಸಲಾಗಿದೆ.

ಮಾರ್ಗಸೂಚಿ ಬಳಕೆ ಕಡ್ಡಾಯ: ರಾಜ್ಯದಲ್ಲಿ ಹೋಟೆಲ್, ರೆಸ್ಟೋರೆಂಟ್ ತೆರೆಯಲು ನಿಗದಿ ಪಡಿಸಲಾಗಿರುಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಹಾಗೂ ಕೆಲವು ತೊಡಕುಗಳ ನಿವಾರಣೆ ಕುರಿತು ಪ್ರವಾಸೋದ್ಯಮ ಹಾಗೂ ಸಾರಿಗೆ ಇಲಾಖೆ ಮತ್ತು ವಿವಿಧ ಭಾಗೀದಾರರ ಜತೆಗೆ ಚರ್ಚೆ ನಡೆಸಿದರು. ಬಸ್ ಮಾಲೀಕರ ಸಂಘ, ಹೋಟೆಲ್ ಮಾಲೀಕರ ಸಂಘ ಹಾಗೂ ಟ್ಯಾಕ್ಸಿ ಮಾಲಿಕರ ಸಂಘಗಳ ನಿಯೋಗವು ಸರ್ಕಾರದ ಮುಂದೆ ಕೆಲ ಬೇಡಿಕೆ ಇಟ್ಟಿದ್ದು, ಅವರ ಬೇಡಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದರು.

ಸ್ಪರ್ಶವಿಲ್ಲ ದರ್ಶನ ಮಾತ್ರ * ಸಾಮಾಜಿಕ ಅಂತರ ಕಾಯ್ದುಕೊಳ್ಳಲು ರೇಲಿಂಗ್ ವ್ಯವಸ್ಥೆ, 2 ಮೀಟರ್​ಗೆ ಪಟ್ಟಿ, ದ್ವಾರದಲ್ಲೇ ಭಕ್ತರ ಕೈಗೆ ಸ್ಯಾನಿಟೈಸರ್, ದೇಹ ಉಷ್ಣಾಂಶ ಪರೀಕ್ಷೆ * ಮಾಸ್ಕ ಧರಿಸಿದವರಿಗಷ್ಟೇ ಪ್ರವೇಶ, ಜ್ವರ ಸೇರಿ ಇತರ ರೋಗಲಕ್ಷಣ ಇದ್ದರೆ ನೋ ಎಂಟ್ರಿ * ತೀರ್ಥ ಕ್ಷೇತ್ರಗಳಲ್ಲಿ ಭಕ್ತರಿಗೆ ತಂಗಲು ವಸತಿ ವ್ಯವಸ್ಥೆ ಇಲ್ಲ, ಸೋಂಕು ಹೆಚ್ಚಿರುವ ಕಡೆ ದರ್ಶನ ಭಾಗ್ಯವಿಲ್ಲ * ತೀರ್ಥ, ಪ್ರಸಾದ, ಅರ್ಚನೆ ಸೇವೆ ಇರಲ್ಲ, ದೀಪ ಆರತಿ ಬೆಳಗುವಂತಿಲ್ಲ, ಭಕ್ತರು ಹೂ, ಹಣ್ಣು, ಕಾಯಿ ಏನನ್ನೂ ತರದೆ ಬರಿಗೈಲಿ ಬರಬೇಕು ಹೋಟೆಲ್​ನಲ್ಲೂ ಅಂತರ * ಸದ್ಯಕ್ಕೆ ಟೇಬಲ್ ಸರ್ವೀಸ್ ಇರಲ್ಲ, ಸೆಲ್ಪ್ ಸರ್ವೀಸ್, ಪಾರ್ಸಲ್​ಗಷ್ಟೇ ಅವಕಾಶ * ಪ್ರತಿ ಟೇಬಲ್​ಗಳಿಗೆ ಫೈಬರ್ ಗ್ಲಾಸ್ ಅಳವಡಿಕೆ, ಇಬ್ಬರು ಕುಳಿತುಕೊಳ್ಳಲು ಅವಕಾಶ * ಅಡುಗೆ ಸಿಬ್ಬಂದಿ ಮಾಸ್ಕ್, ಗ್ಲೌಸ್ ಹಾಗೂ ತಲೆಗೆ ಕ್ಯಾಪ್ ಧರಿಸುವುದು ಕಡ್ಡಾಯ * ಪ್ರತಿ ಗ್ರಾಹಕ ಕುಳಿತು ಹೋದ ನಂತರ ಟೇಬಲ್​ಗೆ ಸೋಂಕುನಿವಾರಕ ದ್ರಾವಣ ಸಿಂಪಡಣೆ * ಪ್ರವೇಶ ದ್ವಾರದಲ್ಲೇ ಥರ್ಮಲ್ ಸ್ಕ್ರೀನಿಂಗ್​ಗೆ ಒಳಪಡಿಸಿ ಸ್ಯಾನಿಟೈಸರ್ ನೀಡುವುದು ಕಡ್ಡಾಯ * ಮಾಸ್ಕ್ ಇದ್ದವರಿಗೆ ಮಾತ್ರ ಪ್ರವೇಶ. ಬಳಸಿ ಬಿಸಾಡುವ ವಸ್ತುಗಳಿಗೆ ಆದ್ಯತೆ * ಆಹಾರ ನೀಡುವ ಪ್ರತಿ ತಟ್ಟೆಗಳಿಗೆ ಬಾಳೆ ಎಲೆ, ಪೇಪರ್ ಕಪ್, ಮರದ ಸ್ಪೂನ್ ಕಡ್ಡಾಯ * ಕುಡಿಯುವ ನೀರು, ಜ್ಯೂಸ್ , ಕಾಫಿ , ಟೀ, ಹಾಲು ನೀಡಲು ಪೇಪರ್ ಲೋಟ

ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮೊದಲಿನಿಂದ ಇದೆ. ದೊಡ್ಡ ಹೋಟೆಲ್​ಗಳಲ್ಲಿ ಡಿಶ್​ವಾಷ್ ಯಂತ್ರಗಳು ಇರುವುದರಿಂದ ಸ್ಟರಲೈಜ್ ಮಾಡಿದ ತಟ್ಟೆ, ಪ್ಲೇಟ್ ಹಾಗೂ ಲೋಟ ನೀಡಲಾಗುವುದು. ಗ್ರಾಹಕರಿಗೆ ಯಾವುದೇ ರೀತಿಯ ಸಮಸ್ಯೆ ಆಗದ ರೀತಿಯಲ್ಲಿ ಸ್ವಚ್ಛತೆಯೊಂದಿಗೆ ಅಗತ್ಯ ಜಾಗ್ರತೆ ವಹಿಸಲಾಗಿದೆ. | ಬಿ. ಚಂದ್ರಶೇಖರ್, ಅಧ್ಯಕ್ಷ, ಹೋಟೆಲ್ ಮತ್ತು ರೆಸ್ಟೋರೆಂಟ್​ಗಳ ಸಂಘ ಕೇವಲ ಮಾರಾಟ ಮಳಿಗೆಗಳು ಮಾತ್ರ ತೆರೆಯಲಿದ್ದು, ಸಿನಿಮಾ ಥಿಯೇಟರ್ ಹಾಗೂ ಮಕ್ಕಳ ಮನರಂಜನಾ ವಲಯಗಳು ಈಗಲೇ ಆರಂಭವಾಗುವುದಿಲ್ಲ. ಗ್ರಾಹಕರು ನಿಯಮ ಪಾಲಿಸುವ ಮೂಲಕ ಸಹಕರಿಸಬೇಕು. | ಗಜೇಂದ್ರ ಸಿಂಗ್ ರಾಥೋಡ್, ಹಿರಿಯ ನಿರ್ದೇಶಕ, ಫೀನಿಕ್ಸ್ ಮಾರ್ಕೆಟ್ ಸಿಟಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ತೀರ್ಥ, ಪ್ರಸಾದ, ಅನ್ನಸಂತರ್ಪಣೆ ಇರುವುದಿಲ್ಲ. ನಿಂಬೆ ಹಣ್ಣಿನ ದೀಪ, ಬೆಲ್ಲದ ದೀಪ, ತುಪ್ಪದ ದೀಪ ಸೇರಿದಂತೆ ಇತ್ಯಾದಿ ಆರತಿ ಬೆಳಗಲು ಅವಕಾಶ ಇರುವುದಿಲ್ಲ. | ನಿಂಗಯ್ಯ ಕಾರ್ಯನಿರ್ವಾಹಕ ಅಧಿಕಾರಿ, ಬನಶಂಕರಿ ದೇವಾಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net