ಖಾಲಿ ಸೈಟ್ ನಿರ್ವಹಣೆಗೆ ಹೊಸ ಕಾಯ್ದೆ

dkshiva
Published on

ಬೆಂಗಳೂರು: ಖಾಲಿ ಸೈಟ್‌ಗಳ ನಿರ್ವಹಣೆಗೆ ಕಾಯ್ದೆ ರೂಪಿಸಲು ನಿರ್ಧರಿಸಿರುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಎಸ್. ಕೇಶವ ಪ್ರಸಾದ್, ಬೆಂಗಳೂರಿನ ಕಸ ವಿಲೇವಾರಿ ಮತ್ತು ಕಸದ ಸೆಸ್ ವಿಚಾರವಾಗಿ ಕೇಳಿದ ಪ್ರಶ್ನೆಗೆ ಡಿಕೆಶಿ ಉತ್ತರಿಸಿದರು. ಖಾಲಿ ಸೈಟ್‌ಗಳಿಗೆ ಕಾಂಪೌಂಡ್ ಕಟ್ಟಿ ಕಸ ಎಸೆಯದಂತೆ ನಿರ್ವಹಣೆ ಮಾಡಬೇಕು.

ಇಲ್ಲವಾದರೆ ಅಕ್ಕಪಕ್ಕದವರು ಬಂದು ಕಸ ಎಸೆದುಹೋಗುತ್ತಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಾಗ ಅರಮನೆ ರಸ್ತೆಯಲ್ಲಿ ಹಸಿರು ಪರದೆ ಕಟ್ಟಬೇಕಾಯಿತು. ಅದಕ್ಕಾಗಿ ಖಾಲಿ ಸೈಟ್‌ಗಳ ನಿರ್ವಹಣೆಗೆ ಹೊಸ ಕಾಯ್ದೆ ರೂಪಿಸುವುದಾಗಿ ತಿಳಿಸಿದರು.

ಕಸ ವಿಲೇವಾರಿಗೆ ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ 33 ಪ್ಯಾಕೇಜ್ಗಳಾಗಿ ವಿಂಗಡಿಸಿ ಟೆಂಡರ್ ಕರೆಯಲಾಗಿದೆ.

4 ಜಾಗಗಳಲ್ಲಿ ತ್ಯಾಜ್ಯದಿಂದ ಗ್ಯಾಸ್, ವಿದ್ಯುತ್ ಉತ್ಪಾದಿಸುವ ಯೋಜನೆ ರೂಪಿಸಲಾಗಿದೆ. ಕಸ ವಿಲೇವಾರಿಗೆ ನೈಸ್ ಸಂಸ್ಥೆಗೆ ಸೇರಿದ ಜಾಗ ಪಡೆಯಲಾಗಿದೆ. ದೊಡ್ಡಬಳ್ಳಾಪುರ ಬಳಿಯ ಜಾಗಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಬಾಕಿಯಿತ್ತು. ಕ್ಯಾಬಿನೆಟ್ ಅನುಮತಿ ಪಡೆದು ಮುಂದುವರಿದಿದ್ದೇವೆ. ಕಸ ವಿಲೇವಾರಿಗೆಂದು ಆಧುನಿಕ ತಂತ್ರಜ್ಞಾನದ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಇದನ್ನು ಗುತ್ತಿಗೆ ಆಧಾರದ ಮೇಲೆ ನಿರ್ವಹಣೆ ಮಾಡಬೇಕು ಎನ್ನುವ ಆಲೋಚನೆಯಿದೆ ಎಂದರು.

2016ರಲ್ಲಿ ಕೇಂದ್ರ ಸರ್ಕಾರದ ಘನತ್ಯಾಜ್ಯ ನಿರ್ವಹಣಾ ನಿಯಮದ ಪ್ರಕಾರ ನೂತನ ಆದೇಶ ನೀಡಿತು. 2020ರಲ್ಲಿ ಕೇಂದ್ರ ಸರ್ಕಾರ ಕಳುಹಿಸಿದ ಕಸ ಸಂಗ್ರಹ ದರಪಟ್ಟಿಯನ್ನು ಬಿಜೆಪಿ ಸರ್ಕಾರ ಸ್ವೀಕರಿಸಿದೆ. ಅದರ ಪ್ರಕಾರ 5 ಕೆ.ಜಿ.ಗೆ 500 ರೂ., 10 ಕೆ.ಜಿ.ಗೆ ,400 ರೂ., 25 ಕೆ.ಜಿ.ಗೆ 3,400 ರೂ., ಶುಲ್ಕ ವಿಧಿಸಬೇಕು. ಆದರೆ, ದುಬಾರಿ ಎಂದು ತಿಳಿದು ಕೇವಲ ಶೇ.25 ಸಂಗ್ರಹ ಮಾಡುತ್ತಿದ್ದೇವೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net