ಆರೋಪದಿಂದ ಖುಲಾಸೆಯಾಗಿದ್ರೂ ರೌಡಿಶೀಟ್; ಹೈಕೋರ್ಟ್ ಏಕಸದಸ್ಯ ಪೀಠದ ಮಹತ್ವದ ತೀರ್ಪು

High_CourtKarntaka11
Published on

ಬೆಂಗಳೂರು: ವ್ಯಕ್ತಿಯೊಬ್ಬ ಅಪರಾಧ ಪ್ರಕರಣಗಳ ಆರೋಪದಿಂದ ಖುಲಾಸೆಯಾಗಿದ್ದರೂ ಆತನ ವಿರುದ್ಧ ರೌಡಿಶೀಟ್ ತೆರೆಯುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಲ್ಲ. ಪ್ರಕರಣದಿಂದ ಖುಲಾಸೆಯಾದರೂ ಗುಪ್ತಚರ ವರದಿ ಹಾಗೂ ನಿಖರ ಮಾಹಿತಿ ಹೊಂದಿದ್ದರೆ ಅಂಥವರನ್ನು ರೌಡಿ ಪಟ್ಟಿಗೆ ಸೇರಿಸಬಹುದು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಪರಾಧ ಪ್ರಕರಣಗಳಲ್ಲಿ ಆರೋಪ ಮುಕ್ತರಾಗಿದ್ದರೂ ಪೊಲೀಸರು ರೌಡಿಶೀಟ್ ತೆಗೆದಿದ್ದಾರೆ. ಖುಲಾಸೆಯಾದ ನಂತರವೂ ರೌಡಿಶೀಟ್ ತೆಗೆಯುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಆಕ್ಷೇಪಿಸಿ ನಾಗರಾಜು ಅಲಿಯಾಸ್ ಬಾಂಬ್ ನಾಗ ಮತ್ತವರ ಮೂವರು ಮಕ್ಕಳು, ರಾಕೇಶ್ ಮಲ್ಲಿ ಸೇರಿ ಒಟ್ಟು 19 ಮಂದಿ

ಹೈಕೋರ್ಟ್​ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಈ ಎಲ್ಲ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಶುಕ್ರವಾರ ಪ್ರಕಟಿಸಿದ್ದು, ರೌಡಿಶೀಟ್ ತೆಗೆಯಲು ಪೊಲೀಸ್ ಇಲಾಖೆ ಹೊರಡಿಸಿದ್ದ ಆದೇಶ ರದ್ದುಪಡಿಸಬೇಕು ಎಂಬ ಅರ್ಜಿದಾರರ ಮನವಿ ತಿರಸ್ಕರಿಸಿದೆ. ಪ್ರಕರಣದಲ್ಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಪರ ಸರ್ಕಾರಿ ಅಭಿಯೋಜಕ ವಿನೋದ್ ಕುಮಾರ್ ವಾದ ಮಂಡಿಸಿದ್ದರು. ವಕೀಲ ಶ್ರೀಧರ್ ಪ್ರಭು ಅಮಿಕಸ್ ಕ್ಯೂರಿಯಾಗಿ (ಕೋರ್ಟ್ ಸಹಾಯಕರು) ವಾದ ಮಂಡಿಸಿದ್ದರು.

ಮೂಲಭೂತ ಹಕ್ಕಿನ ಉಲ್ಲಂಘನೆಯಲ್ಲ: ಅಪರಾಧ ಪ್ರಕರಣಗಳ ಆರೋಪದಿಂದ ಖುಲಾಸೆಯಾಗಿದ್ದರೂ ರೌಡಿಶೀಟ್ ಆರಂಭಿಸುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ. ರೌಡಿಯಾಗಿದ್ದರೆ ಅವರು ಮುಂದೆಯೂ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವ ಸಾಧ್ಯತೆಯಿರುತ್ತದೆ. ಆದ್ದರಿಂದ, ಖುಲಾಸೆಯಾಗಿದ್ದಾರೆ ಎಂಬ ಮಾತ್ರಕ್ಕೆ ರೌಡಿಶೀಟ್​ನಿಂದ ಹೆಸರು ತೆಗೆಯುವಂತಿಲ್ಲ. ಮುಖ್ಯವಾಗಿ ರೌಡಿಶೀಟ್ ಆರಂಭಿಸುವುದು ರೌಡಿಗಳ ಚುಟುವಟಿಕೆ ಮೇಲೆ ನಿಗಾ ಇಡುವ ಕಾರಣಕ್ಕೆ. ಆದ್ದರಿಂದ, ಇದು ನ್ಯಾಯಸಮ್ಮತ ನಿರ್ಬಂಧವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ವ್ಯಕ್ತಿ ವಿರುದ್ಧ ಎಫ್​ಐಆರ್ ದಾಖಲಾಗದಿದ್ದರೂ ಹಾಗೂ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗದಿದ್ದರೂ ರೌಡಿಶೀಟ್ ತೆಗೆಯಬಹುದು ಎಂದು ಹೇಳಿದೆ.

ಮಾರ್ಗಸೂಚಿ ರಚನೆ: ಒಬ್ಬ ಅಪರಾಧಿಕ ವ್ಯಕ್ತಿಯನ್ನು ರೌಡಿ ಶೀಟರ್ ಎಂದು ಹೆಸರಿಸುವ ಹಾಗೂ ಅಂತಹ ಇತಿಹಾಸ ಹೊಂದಿರುವವರನ್ನು ರೌಡಿ ಪಟ್ಟಿಯಿಂದ ಕೈಬಿಡಬೇಕೆಂಬ ಕೋರಿಕೆಗಳ ಬಗ್ಗೆ ಶಾಸಕಾಂಗ ವಿಸõತ ಕಾನೂನು ರಚಿಸಬೇಕು ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ವಿಸ್ತೃತ ಕಾನೂನು ರೂಪಿಸುವವರೆಗೆ ಅಪರಾಧ ಚುಟವಟಿಕೆಯಲ್ಲಿ ಸಕ್ರಿಯಾಗಿರುವ ರೌಡಿಗಳ ವಿರುದ್ಧ ರೌಡಿಶೀಟ್ ತೆಗೆಯುವ ವಿಚಾರದಲ್ಲಿ ಪೊಲೀಸ್ ಇಲಾಖೆ ಅನುಸರಿಸಬೇಕಾದ ನಿಯಮಗಳ ಕುರಿತು ಕೆಲ ಮಾರ್ಗಸೂಚಿಗಳನ್ನು ರಚಿಸಿದೆ. ಜತೆಗೆ, ನಾಗರಿಕ ಸಮಾಜದಲ್ಲಿ ರೌಡಿ ಚಟುವಟಿಕೆಗೆ ಅವಕಾಶವಿರಬಾರದು. ಅದನ್ನು ನಿಯಂತ್ರಿಸಲು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.

ಮಾರ್ಗಸೂಚಿಗಳೇನು?

  • ಅಪರಾಧ ಪ್ರಕರಣದಿಂದ ಖುಲಾಸೆಯಾದರೂ ಗುಪ್ತಚರ ವರದಿ ಹಾಗೂ ನಿಖರ ಮಾಹಿತಿ ಹೊಂದಿದ್ದರೆ ರೌಡಿಶೀಟ್ ತೆರೆಯಬಹುದು.
  • ರೌಡಿಶೀಟ್ ತೆರಯುವ ಮುನ್ನ ಸಂಬಂಧಪಟ್ಟ ವ್ಯಕ್ತಿಗೆ ನೋಟಿಸ್ ನೀಡಿ ಮಾಹಿತಿ ಕೊಡಬೇಕು.
  • ರೌಡಿಶೀಟ್ ಹಾಕದಂತೆ ಮನವಿ ಸಲ್ಲಿಸಲು ಆ ವ್ಯಕ್ತಿಗೆ ಅವಕಾಶ.
  • ರೌಡಿಶೀಟ್ ಹಾಕುವಾಗ ಸಕಾರಣ ನೀಡಿ ಲಿಖಿತ ಆದೇಶ.
  • ಪ್ರತಿ ವರ್ಷ ರೌಡಿಶೀಟ್ ಮರು ಪರಿಶೀಲನೆ. ಈ ವೇಳೆಯೂ ಸಕಾರಣಗಳೊಂದಿಗೆ ಸಮಗ್ರವಾದ ಲಿಖಿತ ಆದೇಶ ಹೊರಡಿಸಬೇಕು.
  • ರೌಡಿಶೀಟ್ ತೆರೆದ ನಂತರ ಅದನ್ನು ಪ್ರಶ್ನಿಸಿ ಪೊಲೀಸ್ ದೂರು ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net