

ಶಿವಮೊಗ್ಗ: ತಾಲೂಕಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಆರು ಹೊಸ ಅತಿಥಿಗಳ ಆಗಮನವಾಗಿದೆ. ಈ ಬಾರಿ ಆಗಮಿಸಿರುವುದು ಅಪರೂಪದ ಪ್ರಾಣಿಗಳು. ಬೆಂಗಾಲ್ ಟೈಗರ್ ಹಾಗೂ ಏಷಿಯಾಟಿಕ್ ಸಿಂಹಗಳು ಕೆಲವೇ ದಿನಗಳಲ್ಲಿ ಸಫಾರಿಯಲ್ಲಿ ಕಾಣಿಸಿಕೊಂಡು ಪ್ರವಾಸಿಗರ ಕಣ್ಮನ ಸೆಳೆಯಲಿವೆ. ಇದೇ ಮೊದಲ ಬಾರಿಗೆ ಬಿಳಿ ಹುಲಿ ಶಿವಮೊಗ್ಗ ಸಫಾರಿ ಸೇರಿದಂತಾಗಿದೆ.
ಮಂಗಳವಾರ ತಡರಾತ್ರಿ ಇಂದೋರ್‌ನ ಕಮಲಾ ನೆಹರು ಪ್ರಾಣಿ ಸಂಗ್ರಹಾಲಯ ಹಾಗೂ ಮಹಾರಾಷ್ಟ್ರದ ಔರಂಗಾಬಾದ್, ಸಿದ್ದಾರ್ಥ ಗಾರ್ಡನ್ ಮೃಗಾಲಯದಿಂದ ಒಂದು ಬಿಳಿ ಹುಲಿ, ಮೂರು ರಾಯಲ್ ಬೆಂಗಾಲ್ ಟೈಗರ್‌ಗಳು ಹಾಗೂ ಎರಡು ಏಷಿಯಾಟಿಕ್ ಲಯನ್‌ಗಳು ಆಗಮಿಸಲಿವೆ.
ಔರಂಗಾಬಾದ್ ಮೃಗಾಲಯದಿಂದ ವಿಕ್ರಂ ಹೆಸರಿನ ಎರಡು ವರ್ಷದ ಬಿಳಿ ಹುಲಿ, ಎರಡು ವರ್ಷದ ಶ್ರಾವಣಿ ಹಾಗೂ ಐದು ವರ್ಷದ ರೋಹಿಣಿ ಎಂಬ ರಾಯಲ್ ಬೆಂಗಾಲ್ ಹುಲಿಗಳು ಈಗ ಸಫಾರಿಯ ಕ್ರಾಲ್ ಸೇರಿವೆ. ಇಂದೋರ್ ಪ್ರಾಣಿ ಸಂಗ್ರಹಲಾಯದಿಂದ ಬಂದಿರುವ ಎರಡು ಏಷಿಯಾಟಿಕ್ ಲಯನ್‌ಗಳ ಪೈಕಿ ಎರಡು ವರ್ಷದ ಶಿವ ಹಾಗೂ ಸಾರಾ ಪ್ರಮುಖ ಆಕರ್ಷಣೆಯಾಗಲಿವೆ. ಇವುಗಳ ಜತೆಗೆ ಭದ್ರಾ ಎಂಬ ಮೂರು ವರ್ಷ ರಾಯಲ್ ಬೆಂಗಾಲ್ ಟೈಗರ್ ಕೂಡಾ ಆಗಮಿಸಿದೆ.
ದೆಹಲಿಯ ಕೇಂದ್ರೀಯ ಮೃಗಾಲಯದ ಒಪ್ಪಿಗೆ ಮೇರೆಗೆ ಪರಸ್ಪರ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಹೊಸ ಪ್ರಾಣಿಗಳ ಆಗಮನವಾಗಿದೆ. ಈಗ ಬಂದಿರುವ ಪ್ರಾಣಿಗಳಿಗೆ ಬದಲಾಗಿ ತ್ಯಾವರೆಕೊಪ್ಪ ಮೃಗಾಲಯದಿಂದ ಔರಂಗಾಬಾದ್‌ಗೆ ಒಂದು ಕರಡಿ, ಎರಡು ಸಿಂಹ ಹಾಗೂ ಎರಡು ನರಿಗಳನ್ನು ಕಳಿಸಲಾಗಿತ್ತು. ಇಂದೋರ್‌ಗೆ ನಾಲ್ಕು ಕಾಡುಕೋಣ ಹಾಗೂ ನಾಲ್ಕು ಆಸ್ಟ್ರಿಚ್‌ಗಳನ್ನು ಕಳಿಸಿಕೊಡಲಾಗಿತ್ತು.