ಸಂಪುಟಕ್ಕೆ ಹೊಸ ರೂಪ

Modi
Published on

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಚಿವ ಸಂಪುಟವನ್ನು ಬುಧವಾರ ಪುನಾರಚಿಸಿದ್ದಾರೆ. ಎನ್​ಡಿಎ ಮೈತ್ರಿಕೂಟ 2019ರಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರದಲ್ಲಿ ನಡೆಯುತ್ತಿರುವ ಮೊದಲ ಸಂಪುಟ ಪುನಾರಚನೆಯಾದ ಹಿನ್ನೆಲೆಯಲ್ಲಿ ಯಾರು ಮಂತ್ರಿಮಂಡಳ ಸೇರಬಹುದು, ಯಾರು ಹೊರಬೀಳಬಹುದು ಎಂಬೆಲ್ಲ ಕುತೂಹಲಗಳು ಮೂಡಿದ್ದವು. ಇದಕ್ಕೂ ಮುನ್ನ ಖುದ್ದು ಪ್ರಧಾನಿ ಮೋದಿ ಸಾಕಷ್ಟು ಕಸರತ್ತು ನಡೆಸಿದ್ದರು; ಆಯಾ ಸಚಿವರನ್ನು ಕರೆಸಿಕೊಂಡು ಇಲಾಖೆಗಳ ಕಾರ್ಯಸಾಧನೆ ಬಗ್ಗೆ ಮಾಹಿತಿ ಕಲೆಹಾಕಿದ್ದರು. ಜತೆಗೆ, ಗೃಹ ಸಚಿವ ಅಮಿತ್​ ಷಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮುಂತಾದ ಪ್ರಮುಖರ ಜತೆಗೆ ವಿಸತ ಸಮಾಲೋಚನೆ ನಡೆಸಿದ್ದರು. ಕರೊನಾ ಎರಡನೆಯ ಅಲೆ ವಿಷಯದಲ್ಲಿ ಸರ್ಕಾರಕ್ಕೆ ಒಂದಷ್ಟು ದಿಢೀರ್​ ಸವಾಲುಗಳು ಎದುರಾಗಿ, ಒಟ್ಟಾರೆ ನಿರ್ವಹಣೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ನಕಾರಾತ್ಮಕ ಅಭಿಪ್ರಾಯಗಳು ಸಹ ಅಲ್ಲಲ್ಲಿ ಒಡಮೂಡಿದ್ದರಿಂದ, ಸರ್ಕಾರದ ಇಮೇಜ್​ವರ್ಧನೆ ದೃಷ್ಟಿಯಿಂದ ಕೂಡ ಇಂಥದೊಂದು ನಡೆ ಅಗತ್ಯವಾಗಿತ್ತು ಎಂಬ ವಿಶ್ಲೇಷಣೆ ಸಹ ಕೇಳಿಬಂದಿದೆ. ಇದಲ್ಲದೆ, ಏರುತ್ತಿರುವ ತೈಲ ಬೆಲೆ, ದಿನಬಳಕೆ ವಸ್ತುಗಳ ದರ ಹೆಚ್ಚಳ ಮುಂತಾದ ಸಂಗತಿಗಳು ಸಹ ಇವೆ. ಶಿವಸೇನೆ, ಅಕಾಲಿದಳದಂತಹ ಮಿತ್ರರು ದೂರವಾಗಿದ್ದರಿಂದ ಆ ಕೋಟಾದಲ್ಲಿಯೂ ಮಂತ್ರಿ ಸ್ಥಾನ ಉಳಿದಿತ್ತು. ಹೀಗಾಗಿ, ಒಟ್ಟಾರೆಯಾಗಿ ಸರ್ಕಾರದ ವರ್ಚಸ್ಸನ್ನು ಮೇಲೆತ್ತುವಂತಹ ಕ್ರಮ ಅತ್ಯಗತ್ಯವಾಗಿತ್ತು. ಜಾತಿ& ಪ್ರದೇಶ ಲೆಕ್ಕಾಚಾರ, ವಯಸ್ಸು, ಆಯಾಯ ಕ್ಷೇತ್ರದಲ್ಲಿನ ಕಾರ್ಯಚಟುವಟಿಕೆ ಮುಂತಾದ ಸಂಗತಿಗಳನ್ನು ಸೂಕ್ಷ$್ಮವಾಗಿ ಗಮನಿಸಿ ಸಚಿವ ಸ್ಥಾನದ ಜವಾಬ್ದಾರಿ ವಹಿಸಲಾಗಿದೆಯೆಂಬುದು ಸ್ಪಷ್ಟ. ಮಹಿಳೆಯರಿಗೆ ಮತ್ತು ವಿವಿಧ ವೃತ್ತಿಪರರಿಗೂ ಮನ್ನಣೆ ನೀಡಲಾಗಿದೆ. ಕರ್ನಾಟಕದಿಂದ ನಾಲ್ವರು ಸಂಸದರು ಹೊಸದಾಗಿ ಮಂತ್ರಿ ಸ್ಥಾನ ಪಡೆದಿದ್ದಾರೆ.


ಕರೊನಾ ಮೊದಲನೆಯ ಮತ್ತು ಎರಡನೆಯ ಅಲೆಯಿಂದಾಗಿ ವಿಶ್ವದ ಎಲ್ಲ ದೇಶಗಳು ಅಪಾರ ಕಷ್ಟನಷ್ಟ ಅನುಭವಿಸಿವೆ. ಇದರಿಂದಾಗಿ, ವೈದ್ಯಕಿಯ ವ್ಯವಸ್ಥೆಯ ಸುಧಾರಣೆ ಮತ್ತು ಜನರ ಆರೋಗ್ಯ ಕಾಳಜಿಯತ್ತ ಸರ್ಕಾರಗಳು ಹೆಚ್ಚು ಗಮನ ಕೊಟ್ಟು, ಅಪಾರ ಹಣ ವ್ಯಯಿಸಬೇಕಾಗಿ ಬಂದಿದೆ. ಹೀಗಾಗಿ, ಬೇರೆ ಅಭಿವೃದ್ಧಿ ಕಾಮಗಾರಿಗಳಿಗೆ ಹಣದ ಲಭ್ಯತೆ ತಗ್ಗಿದೆ. ಹಾಗೇ, ತೆರಿಗೆ ಸಂಗ್ರಹಣೆ ಕೂಡ ಇಳಿದು, ಸರ್ಕಾರಗಳ ಆದಾಯ ಕಡಿಮೆಯಾಗಿದೆ. ಹೀಗಾಗಿ ಆಡಳಿತದ ಉನ್ನತ ಸ್ಥಾನದಲ್ಲಿರುವವರು ಹೊಸ ಬಗೆಯ ಸವಾಲುಗಳನ್ನು ಎದುರಿಸಬೇಕಾಗಿ ಬಂದಿದೆ. ಈ ವಾಸ್ತವವನ್ನು ಅರ್ಥಮಾಡಿಕೊಂಡು, ತಮಗೆ ವಹಿಸಿದ ಇಲಾಖೆಯಲ್ಲಿ ಹೊಸತನವನ್ನು ತರುವ ಉತ್ಸಾಹ ಮತ್ತು ಆವಿಷ್ಕಾರಿ ಗುಣವನ್ನು ನೂತನ ಸಚಿವರು ಪ್ರದರ್ಶಿಸಬೇಕಾದುದು ಅಪೇಕ್ಷಣಿಯ. ಹಾಗೇ, ಪ್ರಧಾನಿ ಮೋದಿಯವರ ನಿರೀೆ ಕೂಡ ದೊಡ್ಡದಿದ್ದು, ಸಂಪುಟ ಸಹೋದ್ಯೋಗಿಗಳಿಂದ ವೇಗದ ಕಾರ್ಯನಿರ್ವಹಣೆಯನ್ನು ಅವರು ಬಯಸುತ್ತಾರೆ. ಅದಕ್ಕೆ ತಕ್ಕಂತೆ ನಡೆದುಕೊಂಡು, ಹೊಣೆಗಾರಿಕೆ ವಹಿಸಿದ್ದಕ್ಕೆ ನ್ಯಾಯ ಒದಗಿಸುವ ಬದ್ಧತೆಯನ್ನು ಸಚಿವರು ತೋರಬೇಕಾಗುತ್ತದೆ. ಈ ಸವಾಲನ್ನು ಅವಕಾಶವಾಗಿ ಪರಿವರ್ತಿಸಿಕೊಂಡು ಯಾವ ರೀತಿ ಕಾರ್ಯಸಾಧನೆ ಮಾಡುತ್ತಾರೆಂಬುದನ್ನು ಕಾದುನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net