

ನವದೆಹಲಿ: ಅನ್ಲಾಕ್-3ರಲ್ಲಿ ಜಿಮ್ ಮತ್ತು ಯೋಗ ಕೇಂದ್ರಗಳನ್ನು ಬುಧವಾರದಿಂದ (ಆ.5) ಪುನರಾರಂಭಿಸಲು ಅನುಮತಿ ನೀಡಿದ್ದ ಕೇಂದ್ರ ಸರ್ಕಾರ ಅದಕ್ಕಾಗಿ ಮಾರ್ಗಸೂಚಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಕಂಟೇನ್ಮೆಂಟ್ ವಲಯದಲ್ಲಿನ ಜಿಮ್ ಮತ್ತು ಯೋಗ ಕೇಂದ್ರಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ.
ಕನಿಷ್ಠ 6 ಅಡಿಯ ದೈಹಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯವಾದರೂ ಉಸಿರಾಟದ ಸಮಸ್ಯೆ ಇದ್ದವರಿಗೆ ವಿನಾಯಿತಿ ನೀಡಲಾಗಿದೆ. 65 ವರ್ಷಕ್ಕಿಂತ ಮೇಲ್ಪಟ್ಟವರು, ಕಾಯಿಲೆಗಳಿಂದ ಬಳಲುತ್ತಿರುವವರು, ಗರ್ಭಿಣಿಯರು ಮತ್ತು 10 ವರ್ಷದೊಳಗಿನ ಮಕ್ಕಳಿಗೆ ಜಿಮ್ಳಿಗೆ ಬರದಂತೆ ಸಲಹೆ ನೀಡಲಾಗಿದೆ.
ಜಿಮ್ ಯೋಗ ಕೇಂದ್ರಗಳಿಗೆ ತೆರಳುವವರ ಮೊಬೈಲ್ಗಳಲ್ಲಿ ಆರೋಗ್ಯಸೇತು ಆಪ್ ಹೊಂದಿರುವುದು ಕಡ್ಡಾಯ. ವ್ಯಾಯಾಮದ ಸ್ಥಳಗಳಲ್ಲಿ ಪ್ರತಿಯೊಬ್ಬರಿಗೆ ಕನಿಷ್ಠ ನಾಲ್ಕು ಮೀಟರ್ ಜಾಗವಿರಬೇಕು. ಸಾಧ್ಯವಾದರೆ ಹೊರಾಂಗಣದಲ್ಲಿ ತರಬೇತಿ ನೀಡಬೇಕು. ಜತೆಗೆ ಕೋಣೆಗಳ ಹವಾನಿಯಂತ್ರಕಗಳ ತಾಪಮಾನ 24 ರಿಂದ 30 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿರಬೇಕು ಮತ್ತು ಸಾಧ್ಯವಾದಷ್ಟು ಶುದ್ಧ ಗಾಳಿ ಇರುವಂತೆ ನೋಡಿಕೊಳ್ಳಬೇಕು ಎಂದು ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ.
ಹೆಚ್ಚು ಜನ ಸೇರುವುದನ್ನು ತಡೆಗಟ್ಟಲು ಪ್ರತಿ ಬ್ಯಾಚ್ಗಳ ಅವಧಿಯ ನಡುವೆ 15 ರಿಂದ 30 ನಿಮಿಷ ಸಮಯದ ಮಿತಿ ಇಡಬೇಕು. ವ್ಯಾಯಾಮ ಕೋಣೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಒಂದು ಬ್ಯಾಚ್ನಲ್ಲಿರಬೇಕಾದ ಜನರ ಸಂಖ್ಯೆಯನ್ನು ನಿರ್ಧರಿಸಬೇಕು ಎಂದೂ ತಿಳಿಸಲಾಗಿದೆ.
ಕರೊನಾ ಸಾಮಾನ್ಯ ಜ್ವರವೇ?: ಕರೊನಾ ಬಗ್ಗೆ ಜಗತ್ತು ಆತಂಕಕ್ಕೀಡಾಗಿರುವ ನಡುವೆಯೇ ಕೆಲ ವೈದ್ಯರು ಇದು ಇಷ್ಟೊಂದು ಭಯ ಪಡಬೇಕಾದ ಮಹಾಮಾರಿ ವೈರಸ್ ಅಲ್ಲ, ಸಾಮಾನ್ಯ ಜ್ವರ ಎಂದು ಪ್ರತಿಪಾದಿಸುತ್ತಿದ್ದಾರೆ. ಕರೊನಾ ಸಾಮಾನ್ಯ ಜ್ವರದ ವರ್ಗಕ್ಕೆ ಸೇರಿದ್ದಾಗಿದೆ. ಅದರಲ್ಲಿ ಹೊಸದಾದ ಮಾತೇನಿಲ್ಲ. ಜನರು ಆಸ್ಪತ್ರೆಗೆ ಹೋದ ಬಳಿಕ ಸಾಯುತ್ತಿದ್ದಾರೆ. ಅಸಲಿಗೆ ಕರೊನಾಗೆ ಸದ್ಯ ನೀಡಲಾಗುತ್ತಿರುವ ಚಿಕಿತ್ಸಾ ವಿಧಾನವೇ ಪ್ರಯೋಗಿಕವಾದದ್ದು, ಇದನ್ನು ಪ್ರಾಣಿಗಳಿಗೆ ನೀಡಿದರೆ ಅವೂ ಸಾಯುತ್ತಿದ್ದವು. ಇದೀಗ ಮನುಷ್ಯರಿಗೆ ನೀಡಿದ್ದೇವೆ. ಅವರಲ್ಲಿ ಕೆಲವರು ಸಾಯುತ್ತಿದ್ದಾರೆ ಎಂದು ಡಾ. ಬಿಸ್ವರೂಪ್ ರಾಯ್ ತಿಳಿಸಿದ್ದಾರೆ. ಈಗಾಗಲೇ ಎಲ್ಲೆಲ್ಲಿ ಟೆಸ್ಟ್ ಮಾಡಲಾದ ಕಡೆಯಲ್ಲಿ ಸಾಕಷ್ಟು ಗೊಂದಲಗಳಾಗಿವೆ. ಹೀಗಾಗಿ ಟೆಸ್ಟ್ ಮಾಡಿಸಬೇಡಿ. ಕರೊನಾ ಭೀಕರ ವೈರಸ್ ಅಲ್ಲ. ನಮ್ಮ ದೇಹದಲ್ಲೇ ಹಲವಾರು ರೀತಿಯ ವೈರಸ್ ಇವೆ. ಅದರಲ್ಲಿ ಕರೊನಾ ಕೂಡ ಒಂದು.
ಕರೊನಾಗೆ 165 ಲಸಿಕೆ: ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ ಜಾಗತಿಕವಾಗಿ ಕರೊನಾ ವಿರುದ್ಧ ಕನಿಷ್ಠ 165 ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇನ್ನೂ ಹೆಚ್ಚಿನ ಲಸಿಕೆಗಳಿದ್ದು, ಅವುಗಳಿನ್ನೂ ಆರಂಭಿಕ ಹಂತಗಳಲ್ಲಿವೆ ಮತ್ತು ಡಬ್ಲು್ಯಎಚ್ಒನಿಂದ ಪಟ್ಟಿ ಮಾಡಲಾಗಿಲ್ಲ ಎಂದು ತಿಳಿದುಬಂದಿದೆ. ಈಗ ಪಟ್ಟಿ ಮಾಡಲಾಗಿರುವ ಲಸಿಕೆಗಳೆಲ್ಲ ಕನಿಷ್ಠ ಪ್ರಾಯೋಗಿಕ ಪ್ರಯೋಗಗಳ ಹಂತವನ್ನು ಪ್ರವೇಶಿಸಿವೆ. ಅವುಗಳಲ್ಲಿ ಕೆಲವು ಮಾನವ ಪ್ರಯೋಗಗಳ ಅಂತಿಮ ಹಂತದಲ್ಲಿದೆ.
ಜುಬಿ-ಆರ್ ಇಂಜೆಕ್ಷನ್ ಬಿಡುಗಡೆ: ಜುಬಿಲೆಂಟ್ ಲೈಫ್ ಸೈನ್ಸಸ್ ಲಿಮಿಟೆಡ್ನ ಅಂಗಸಂಸ್ಥೆ ಜುಬಿಲೆಂಟ್ ಜೆನೆರಿಕ್ಸ್ ಲಿಮಿಟೆಡ್ (ಜುಬಿಲೆಂಟ್) ಕರೊನಾ ಸೋಂಕಿತರ ಚಿಕಿತ್ಸೆಗಾಗಿ ಜುಬಿ-ಆರ್ ಹೆಸರಿನ ರೆಮ್ಡಿಸಿವಿರ್ ಇಂಜೆಕ್ಷನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. 100 ಮಿಲಿ ಗ್ರಾಂನ ಒಂದು ಇಂಜಕ್ಷನ್ಗೆ -ಠಿ; 4,700 ಬೆಲೆ ನಿಗದಿಪಡಿಸಲಾಗಿದ್ದು, ಭಾರತದಲ್ಲಿ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿರುವ ಸುಮಾರು 1 ಸಾವಿರ ಆಸ್ಪತ್ರೆಗಳಿಗೆ ಇದನ್ನು ಪೂರೈಕೆ ಮಾಡಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿರುವವರು, ಕರೊನಾ ವಿರುದ್ಧ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ಅರೆವೈದ್ಯಕೀಯ ಸಿಬ್ಬಂದಿಗೆ ಔಷಧ ಲಭ್ಯವಾಗುವಂತೆ ಮಾಡಲು ಜುಬಿಲೆಂಟ್ ತನ್ನ ಎನ್ಜಿಒದ ಮೂಲಕ ಹಲವು ಕಾರ್ಯಕ್ರಮ ಪ್ರಾರಂಭಿಸುತ್ತಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಸೋಂಕಿತರ ಚಿಕಿತ್ಸೆಗಾಗಿ ಬಳಸಲು ಯುಎಸ್ಎಫ್ಡಿಎ ಇಂದ ತುರ್ತು ಬಳಕೆಯ ಅನುಮತಿ ಪಡೆದ ಏಕೈಕ ಔಷಧ ರೆಮ್ಡಿಸಿವಿರ್ ಆಗಿದೆ. ಭಾರತದಲ್ಲಿ ತುರ್ತು ಬಳಕೆಗಾಗಿ ಜುಬಿ-ಆರ್ ಇಂಜಕ್ಷನ್ ಅನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಜುಬಿಲೆಂಟ್ ಸಂಸ್ಥೆಗೆ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ (ಡಿಸಿಜಿಐ) ಜುಲೈ 20ರಂದು ಅನುಮೋದನೆ ನೀಡಿತ್ತು.