ಹೈದರಾಬಾದ್​ ಪಶು ವೈದ್ಯೆ ಹತ್ಯೆ ಪ್ರಕರಣ; ಎನ್​ಕೌಂಟರ್​ ನಡೆಸಿದ ಪೊಲೀಸರ ವಿರುದ್ಧ ಎಫ್​ಐಆರ್​ ದಾಖಲಿಸಲು, ಕುಟುಂಬಗಳಿಗೆ ಪರಿಹಾರ ನೀಡಲು ಸುಪ್ರೀಂ ನಕಾರ

TELANGANA
Published on

ನವದೆಹಲಿ: ತೆಲಂಗಾಣದ ಪಶುವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎನ್​​ಕೌಂಟರ್​ ಮಾಡಿದ ಪೊಲೀಸರ ವಿರುದ್ಧ ಎಫ್​ಐಆರ್​ ದಾಖಲಿಸಲು ಮತ್ತು ಮೃತಪಟ್ಟವರಿಗೆ ಪರಿಹಾರ ನೀಡಲು ಸುಪ್ರೀಂಕೋರ್ಟ್​ ನಿರಾಕರಿಸಿದೆ.

ಎನ್​ಕೌಂಟರ್​ನಲ್ಲಿ ಮೃತ ಪಟ್ಟವರ ಕುಟುಂಬಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ, ಅರ್ಜಿ ಸಲ್ಲಿಸಿದ ಕುಟುಂಬಗಳು ಮೂವರು ಸದಸ್ಯರಿರುವ ವಿಚಾರಣಾ ಆಯೋಗವನ್ನು ಸಂಪರ್ಕಿಸಲು ತಿಳಿಸಿತು.

ಆಯೋಗ ಎನ್​ಕೌಂಟರ್​ ಬಗ್ಗೆ ತನಿಖೆ ನಡೆಸುತ್ತಿದ್ದು ವರದಿ ಸಲ್ಲಿಸುವ ಮುನ್ನ ಸಂಪರ್ಕಿಸಿ. ನಿಮ್ಮ ಬಳಿ ಇರುವ ದಾಖಲೆಯನ್ನು ಆಯೋಗಕ್ಕೆ ನೀಡಿ ಎಂದು ತಿಳಿಸಿತು.

ಆಯೋಗ ವರದಿ ಸಲ್ಲಿಸಿದ ನಂತರ ಪರಿಹಾರದ ಬಗ್ಗೆ ಅರ್ಜಿ ಸಲ್ಲಿಸಿ. ಈ ಸ್ಥಿತಿಯಲ್ಲಿ ನಿಮ್ಮ ಅರ್ಜಿಯನ್ನು ಪರಿಗಣಿಸಲು ಬರುವಂತಿಲ್ಲ ಎಂದ ಪೀಠ, ಅರ್ಜಿ ಹಿಂಪಡೆಯಲು ಸೂಚಿಸಿತು.

ಸುಪ್ರೀಂಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಎನ್​ಕೌಂಟರ್​ನಲ್ಲಿ ಮೃತ ಪಟ್ಟ ನಾಲ್ಕು ಕುಟುಂಬಗಳ ಸದಸ್ಯರು 50 ಲಕ್ಷ ರೂಪಾಯಿ ಪರಿಹಾರ ನೀಡಲು ಮನವಿ ಮಾಡಿದ್ದರು. ನಮ್ಮ ಮಕ್ಕಳನ್ನು ಕಾನೂನು ಉಲ್ಲಂಘಿಸಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು.

ರಂಗಾರೆಡ್ಡಿ ಜಿಲ್ಲೆಯ ಶಾದ್‌ನಗರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 44ರ ಬಳಿಯ ಚತನ್‌ಪಲ್ಲಿ ಸೇತುವೆ ಬಳಿ ನಾಲ್ವರು ಆರೋಪಿಗಳು ಪಶುವೈದ್ಯೆಯ ಮೇಲೆ ಅತ್ಯಾಚಾರ ಮಾಡಿ, ಆಕೆಯ ದೇಹವನ್ನು ಸುಟ್ಟಿದ್ದರು. ಮೃತದೇಹ ನ.28ರಂದು ಪತ್ತೆಯಾಗಿತ್ತು. ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಡಿಸೆಂಬರ್​ 6ರಂದು ಪೊಲೀಸರು ಎನ್​ಕೌಂಟರ್​ ಮಾಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net