ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿ, ಜಾಗತಿಕ ಯೋಚನೆ ಶ್ಲಾಘನೀಯ; ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರಾ

Modi 27 Jan 20
Published on

ನವದೆಹಲಿ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು "ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ದೂರದೃಷ್ಟಿ" ಮತ್ತು "ಜಾಗತಿಕವಾಗಿ ಯೋಚಿಸಿ, ಸ್ಥಳೀಯವಾಗಿ ವರ್ತಿಸುವ ಬಹುಮುಖ ಪ್ರತಿಭೆ" ಎಂದು ಬಣ್ಣಿಸಿದರು.

ಸುಪ್ರೀಂಕೋರ್ಟ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನ 2020 ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಳಕೆಯಲ್ಲಿಲ್ಲದ 1,500 ಕಾನೂನುಗಳನ್ನು ರದ್ದುಪಡಿಸಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಮೆಚ್ಚುಗೆ ಸೂಚಿಸಿದರು.

ಪ್ರಧಾನಿ ಮೋದಿ ಉಸ್ತುವಾರಿಯಲ್ಲಿ ಭಾರತವು ಅಂತಾರಾಷ್ಟ್ರೀಯ ಸಮುದಾಯದ ಜವಾಬ್ದಾರಿಯುತ ಮತ್ತು ಅತ್ಯಂತ ಸ್ನೇಹಪರ ಸದಸ್ಯವಾಗಿದೆ ಎಂದು ನ್ಯಾಯಮೂರ್ತಿ ಮಿಶ್ರಾ ಅಭಿಪ್ರಾಯಪಟ್ಟರು.

ಸಮ್ಮೇಳನ ಉದ್ಘಾಟಿಸಿದ್ದಕ್ಕಾಗಿ ಪ್ರಧಾನಾಮಂತ್ರಿಗೆ ಕೃತಜ್ಞತೆ ಸಲ್ಲಿಸಿದ, ಮಿಶ್ರಾ ಅವರು, ನರೇಂದ್ರ ಮೋದಿ ಅವರ ಸ್ಫೂರ್ತಿದಾಯಕ ಭಾಷಣಕ್ಕಾಗಿ ಧನ್ಯವಾದ ಹೇಳಿದರು.

ವಿಶ್ವದಲ್ಲೇ ಭಾರತ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶ. ಇಂತಹ ದೊಡ್ಡ ದೇಶದಲ್ಲಿ ಪ್ರಜಾಪ್ರಭುತ್ವವವು ಇಷ್ಟು ಯಶಸ್ವಿಯಾಗಿರುವುದಕ್ಕೆ ಎಲ್ಲರೂ ಆಶ್ಚರ್ಯ ಪಡುತ್ತಾರೆ. ಭಾರತ ಜವಾಬ್ದಾರಿಯುತ ರಾಷ್ಟ್ರವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಉಸ್ತುವಾರಿಯಲ್ಲಿ ಭಾರತವು ಅಂತಾರಾಷ್ಟ್ರೀಯ ಸಮುದಾಯದ ಜವಾಬ್ದಾರಿಯುತ ಮತ್ತು ಅತ್ಯಂತ ಸ್ನೇಹಪರ ಸದಸ್ಯವಾಗಿದೆ ಎಂದು ಶ್ಲಾಘಿಸಿದರು.

ನ್ಯಾಯಾಂಗ ವ್ಯವಸ್ಥೆ ಪ್ರಜಾಪ್ರಭುತ್ವದ ಬೆನ್ನೆಲುಬಾಗಿದೆ. ಅದರಂತೆ ಶಾಸಕಾಂಗವು ಹೃದಯ ಮತ್ತು ಕಾರ್ಯಕಾರಿ ಮೆದುಳು. ರಾಜ್ಯದ ಈ ಮೂರು ಅಂಗಗಳು ಸ್ವತಂತ್ರವಾಗಿ ಕೆಲಸ ಮಾಡುವುದರಿಂದ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದರು.

ದೆಹಲಿಯಲ್ಲಿ ಆರಂಭಗೊಂಡಿರುವ ಅಂತಾರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನ 2020ರಲ್ಲಿ ಅಂದಾಜು 29 ದೇಶಗಳಿಂದ ಆಗಮಿಸಿರುವ ನ್ಯಾಯಮೂರ್ತಿಗಳು ಭಾಗವಹಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net