

ನವದೆಹಲಿ: ಮತ್ತೊಮ್ಮೆ ದೆಹಲಿ ಮುಖ್ಯಮಂತ್ರಿಯಾಗುತ್ತಿರುವ ಆಪ್ನ ಅರವಿಂದ ಕೇಜ್ರಿವಾಲ್ ಅವರು ತಮ್ಮ ಪ್ರಮಾಣವಚನ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ನಂತರ ಕೇಜ್ರಿವಾಲ್ ಅವರ ಮೂರನೇ ಪ್ರಮಾಣವಚನ ಸಮಾರಂಭದಲ್ಲಿ ಯಾವುದೇ ಮುಖ್ಯಮಂತ್ರಿ ಅಥವಾ ಇತರ ರಾಜ್ಯಗಳ ರಾಜಕೀಯ ಮುಖಂಡರನ್ನು ಆಹ್ವಾನಿಸುವುದಿಲ್ಲ ಎಂದು ಆಪ್ ಹೇಳಿಕೊಂಡಿತ್ತು.
ದೆಹಲಿಯ ಹೃದಯ ಭಾಗದಲ್ಲಿರುವ ರಾಮಲೀಲಾ ಮೈದಾನದಲ್ಲಿ ಭಾನುವಾರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಮೂರು ದಿನಗಳ ಹಿಂದೆ ಬಂದ ಚುನಾವಣೆ ಫಲಿತಾಂಶದಲ್ಲಿ ಆಪ್ ಪಕ್ಷವು ದೆಹಲಿಯ 70 ಸ್ಥಾನಗಳಲ್ಲಿ 62 ಸ್ಥಾನ ತನ್ನದಾಗಿಸಿಕೊಂಡಿತ್ತು.
ಪ್ರಮಾಣ ವಚನ ಸಮಾರಂಭಕ್ಕೆ ದೆಹಲಿಯಲ್ಲಿರುವ ಪ್ರತಿಯೊಬ್ಬರಿಗೂ ಆಹ್ವಾನವಿದೆ ಎಂದು ಮನೀಶ್ ಸಿಸೋಡಿಯಾ ಹೇಳಿದ್ದರು. ಫಲಿತಾಂಶ ಪ್ರಕಟವಾದ ದಿನ ಅರವಿಂದ ಕೇಜ್ರಿವಾಲ್ ಅವರು "ದೆಹಲಿ ನಿವಾಸಿಗಳೇ ನೀವು ಅದ್ಭುತವನ್ನೇ ಮಾಡಿದ್ದೀರಿ, ಐ ಲವ್ ಯು" ಎಂದಿದ್ದರು.
ಅರವಿಂದ ಕೇಜ್ರಿವಾಲ್ ಅವರು ತಮ್ಮ ಹಳೇ ತಂಡದೊಂದಿಗೆ ಹೊಸ ಅಧ್ಯಾಯ ಆರಂಭಿಸಲಿದ್ದಾರೆ. ಮೂಲಗಳ ಪ್ರಕಾರ ಯಾವ ಹೊಸಬರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದಿಲ್ಲ. ಆದರೆ, ಹೊಸ ಮುಖಗಳಾದ ಆತಿಷ್ ಮತ್ತು ರಾಘವ್ ಚಡ್ಡಾ ಅವರಿಗೆ ಅವಕಾಶ ಸಿಕ್ಕರೂ ಆಶ್ಚರ್ಯವಿಲ್ಲ ಎಂಬುದು ಸದ್ಯ ದೆಹಲಿಯಲ್ಲಿ ನಡೆಯುತ್ತಿರುವ ರಾಜಕೀಯ ಚರ್ಚೆ. (ಏಜೆನ್ಸೀಸ್)