ಹೊಸ ಕೋವಿಡ್ ರೂಪಾಂತರಿಗಳಾದ NB.1.8.1, LF.7 ಭಾರತದಲ್ಲಿ ಪತ್ತೆ: ಇವು ಅಪಾಯಕಾರಿಯೇ? ಇಲ್ಲಿದೆ ಮಾಹಿತಿ... Covid-19

Covid-19
Published on

Covid-19 : ಹೋದೆಯಾ ಪಿಶಾಚಿ ಅಂದರೆ ಬಂತು ಗವಾಕ್ಷೀಲಿ ಎನ್ನುವಂತೆ ಭಾರತದಲ್ಲಿ ಮತ್ತೆ ಕರೊನಾ ವೈರಸ್​ ಪ್ರಕರಣಗಳು ಹೆಚ್ಚಾಗುತ್ತಿವೆ. ಓಮಿಕ್ರಾನ್ ವಂಶಾವಳಿಯ ಭಾಗವಾಗಿರುವ NB.1.8.1 ಮತ್ತು LF.7 ಎಂಬ ಹೊಸ ಉಪ-ರೂಪಾಂತರಿಗಳು ಪತ್ತೆಯಾಗಿದ್ದು, ದೇಶದ ವಿವಿಧ ಭಾಗಗಳಲ್ಲಿ ಉಲ್ಪಣಗೊಳ್ಳುತ್ತಿವೆ.

ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ಮಾಹಿತಿಯ ಪ್ರಕಾರ, ಏಪ್ರಿಲ್‌ನಲ್ಲಿ ತಮಿಳುನಾಡಿನಲ್ಲಿ NB.1.8.1 ನ ಒಂದು ಪ್ರಕರಣ ಕಂಡುಬಂದಿದ್ದರೆ, ಮೇ ತಿಂಗಳಲ್ಲಿ ಗುಜರಾತ್‌ನಲ್ಲಿ LF.7 ನ ನಾಲ್ಕು ಪ್ರಕರಣಗಳು ವರದಿಯಾಗಿವೆ. ಈ ಪಟ್ಟಿಗೆ ಇತ್ತೀಚೆಗೆ ಸೇರ್ಪಡೆಗೊಂಡವರು ಉತ್ತರ ಪ್ರದೇಶದ ನೋಯ್ಡಾದ 55 ವರ್ಷದ ಮಹಿಳೆ. ಅವರಿಗೆ ಕೋವಿಡ್ -19 ಸೋಂಕು ದೃಢಪಟ್ಟಿದ್ದು, ಇದು ಜಿಲ್ಲೆಯಲ್ಲಿ ಪ್ರಸ್ತುತ ಪ್ರಕರಣಗಳ ಸಂಖ್ಯೆಯಲ್ಲಿ ದೃಢಪಟ್ಟ ಮೊದಲ ಪ್ರಕರಣವಾಗಿದೆ. ಇತ್ತೀಚೆಗೆ ರೈಲಿನಲ್ಲಿ ಪ್ರಯಾಣಿಸಿದ್ದ ಮಹಿಳೆ ಪ್ರಸ್ತುತ ಮನೆಯಲ್ಲಿಯೇ ಕ್ವಾರಂಟೈನ್​ನಲ್ಲಿದ್ದಾರೆ. ಇನ್ನು ಅವರ ನಿಕಟ ಸಂಪರ್ಕದಲ್ಲಿದ್ದವರಿಗೆ ಸೋಂಕು ತಗುಲಿಲ್ಲ ಎಂದು ವರದಿಯಾಗಿದೆ. ಈ ವಿಚಾರವನ್ನು ಗೌತಮ್ ಬುದ್ಧ ನಗರದ ಮುಖ್ಯ ವೈದ್ಯಾಧಿಕಾರಿ ಡಾ. ನರೇಂದ್ರ ಕುಮಾರ್ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ಹೆಚ್ಚು ಹಾನಿಕಾರಕವಲ್ಲ

ಇದೇ ಸಂದರ್ಭದಲ್ಲಿ ರಿಷಿಕೇಶ್‌ನಲ್ಲಿರುವ ಏಮ್ಸ್​ನಲ್ಲಿ ಮೂರು ಮಂದಿಯಲ್ಲಿ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಅವರಲ್ಲಿ ಒಬ್ಬರನ್ನು ಡಿಸ್ಚಾರ್ಜ್​ ಮಾಡಲಾಗಿದ್ದು, ಉಳಿದ ಇಬ್ಬರನ್ನು ಇನ್ನೂ ವೀಕ್ಷಣೆಯಲ್ಲಿ ಇರಿಸಲಾಗಿದೆ. ರಿಷಿಕೇಶ್‌ನ ಏಮ್ಸ್​ ನಿರ್ದೇಶಕಿ ಡಾ. ಮೀನು ಸಿಂಗ್ ಪ್ರಕಾರ, ಪ್ರಸ್ತುತ ರೂಪಾಂತರವು ಹೆಚ್ಚು ಹಾನಿಕಾರಕವಲ್ಲ, ಆದರೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ, ವಿಶೇಷವಾಗಿ ಕಾಯಿಲೆಗಳಿಂದ ಬಳಲುತ್ತಿರುವ ಜನರು ಎಚ್ಚರದಿಂದ ಇರುವಂತೆ ಹೇಳಲಾಗಿದೆ.

NB.1.8.1 ಮತ್ತು LF.7 ಎಂದರೇನು? ಅವು ಹೆಚ್ಚು ಹರಡಬಲ್ಲವೇ?

NB.1.8.1 ಮತ್ತು LF.7 ಎರಡೂ JN.1 ರೂಪಾಂತರದ ಉಪ-ವಂಶಾವಳಿಗಳಾಗಿವೆ. ಇದು ಭಾರತದಲ್ಲಿ ಅತ್ಯಂತ ಪ್ರಬಲವಾದ ತಳಿಯಾಗಿ ಉಳಿದಿದ್ದು, ಎಲ್ಲ ಅನುಕ್ರಮ ಮಾದರಿಗಳಲ್ಲಿ 53% ರಷ್ಟಿದೆ. ಈ ಉಪ-ರೂಪಾಂತರಿಗಳನ್ನು ವಿಶ್ವ ಆರೋಗ್ಯ ಸಂಸ್ಥೆ (WHO) 'ಮೇಲ್ವಿಚಾರಣೆಯಲ್ಲಿರುವ ರೂಪಾಂತರಿಗಳು' ಎಂದು ಪರಿಗಣಿಸಿ ಮೇಲ್ವಿಚಾರಣೆ ಮಾಡುತ್ತಿದೆ. ಇವು ವೈರಸ್ ನಡವಳಿಕೆಯ ಮೇಲೆ ಪ್ರಭಾವ ಬೀರುವ ರೂಪಾಂತರಗಳನ್ನು ಹೊಂದಿವೆ. ಆದರೆ, ಹೊಸ ರೂಪಾಂತರಿಗಳನ್ನು ಇನ್ನೂ ಅಪಾಯಕಾರಿ ರೂಪಾಂತರಿಗಳು ಎಂದು ವರ್ಗೀಕರಿಸಿಲ್ಲ. ಆರಂಭಿಕ ಹಂತಗಳಲ್ಲಿನ ಅಧ್ಯಯನಗಳು ಮತ್ತು ತಜ್ಞರ ಮೌಲ್ಯಮಾಪನಗಳು ಈ ಉಪ-ರೂಪಾಂತರಿಗಳು ಹೆಚ್ಚು ಹರಡುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಹಿಂದಿನ ತಳಿಗಳಿಗೆ ಹೋಲಿಸಿದರೆ ರೋಗನಿರೋಧಕ ರಕ್ಷಣೆಯನ್ನು ತಪ್ಪಿಸುವ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿವೆ ಎಂದು ಸೂಚಿಸುತ್ತವೆ.

ಉದಾಹರಣೆಗೆ, NB.1.8.1 ರೂಪಾಂತರಿಯು A435S, V445H ಮತ್ತು T478I ಎಂದು ಕರೆಯಲ್ಪಡುವ ಗಮನಾರ್ಹ ಸ್ಪೈಕ್ ಪ್ರೋಟೀನ್ ರೂಪಾಂತರಗಳನ್ನು ಹೊಂದಿದ್ದು, ಇದು ಅದರ ಸಾಂಕ್ರಾಮಿಕತೆ ಮತ್ತು ರೋಗನಿರೋಧಕ ತಪ್ಪಿಸಿಕೊಳ್ಳುವ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ಇನ್ನು JN.1 ವಂಶಾವಳಿಯು ಸ್ವತಃ L455S ರೂಪಾಂತರವನ್ನು ಹೊಂದಿದೆ, ಇದು ಹಿಂದಿನ ರೂಪಾಂತರಗಳಿಗಿಂತ 1.5 ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿಸುತ್ತದೆ ಎಂದು ಅಂದಾಜಿಸಲಾಗಿದೆ. ಈ ಗುಣಲಕ್ಷಣಗಳ ಹೊರತಾಗಿಯೂ, ಈ ಉಪ ರೂಪಾಂತರಿಗಳಿಂದ ಉಂಟಾಗುವ ಅನಾರೋಗ್ಯದ ತೀವ್ರತೆಯು ಕಡಿಮೆ ಇರುತ್ತದೆ ಎಂದು ಕೋಲ್ಕತದ CMRI ಆಸ್ಪತ್ರೆಯ ಸಲಹೆಗಾರ, ಶ್ವಾಸಕೋಶಶಾಸ್ತ್ರಜ್ಞ ಡಾ. ಅರುಪ್ ಹಾಲ್ಡರ್ ಇಂಡಿಯಾ ಟುಡೇಗೆ ಹೇಳಿದ್ದಾರೆ.

ಚಿಂತಿಸಬೇಕೇ?

ಮೇ 19ರ ಹೊತ್ತಿಗೆ, ಭಾರತದಲ್ಲಿ 257 ಸಕ್ರಿಯ ಕೋವಿಡ್ -19 ಪ್ರಕರಣಗಳಿವೆ. ಕಳೆದ ವಾರದಲ್ಲಿ ದೆಹಲಿಯಲ್ಲಿ ಕೋವಿಡ್ -19 ಪ್ರಕರಣಗಳು 100 ದಾಟಿವೆ. ಇನ್ನು ಕೇರಳದಲ್ಲಿ 400 ಹಾಗೂ ದೇಶಾದ್ಯಂತ 750 ಹೊಸ ಪ್ರಕರಣಗಳು ದಾಖಲಾಗಿವೆ. ಕೇರಳ, ಮಹಾರಾಷ್ಟ್ರ ಮತ್ತು ತಮಿಳುನಾಡು ಮುಂತಾದ ರಾಜ್ಯಗಳು ಹಾಟ್‌ಸ್ಪಾಟ್‌ಗಳಾಗಿ ಹೊರಹೊಮ್ಮಿವೆ. ಮುಂಬೈ, ಪುಣೆ ಮತ್ತು ಥಾಣೆಯಂತಹ ನಗರಗಳು ಹೆಚ್ಚಿನ ಪ್ರಕರಣಗಳನ್ನು ವರದಿ ಮಾಡಿವೆ. ಹೆಚ್ಚುತ್ತಿರುವ ಸಂಖ್ಯೆಗಳನ್ನು ಗಮನದಲ್ಲಿಟ್ಟುಕೊಂಡು ದೆಹಲಿಯು ಆಸ್ಪತ್ರೆಗಳಿಗೆ ಹಾಸಿಗೆಗಳು, ಆಮ್ಲಜನಕ, ಔಷಧಿಗಳು ಮತ್ತು ಲಸಿಕೆಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಲಹೆಗಳನ್ನು ನೀಡಲಾಗಿದೆ. ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ಆಂತರಿಕ ಔಷಧದ ಹಿರಿಯ ಸಲಹೆಗಾರ ಡಾ. ಸುರಂಜಿತ್ ಚಟರ್ಜಿ ಅವರು ANIಗೆ ಮಾಹಿತಿ ನೀಡಿದ್ದು, ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಹೊಸ ರೂಪಾಂತರಿಗಳಿಗೆ ನಿರ್ದಿಷ್ಟ ಲಸಿಕೆಗಳು ಭಾರತದಲ್ಲಿ ಇನ್ನೂ ಲಭ್ಯವಿಲ್ಲದಿದ್ದರೂ, ಅಸ್ತಿತ್ವದಲ್ಲಿರುವ ಬೂಸ್ಟರ್‌ಗಳು ಇನ್ನೂ ಬಲವಾದ ರಕ್ಷಣೆ ನೀಡಬಲ್ಲವು. ಈ ಬೂಸ್ಟರ್‌ಗಳು ರೋಗಲಕ್ಷಣದ ಸೋಂಕಿನ ಅಪಾಯವನ್ನು 50% ರಷ್ಟು ಮತ್ತು ತೀವ್ರ ರೋಗದ ಅಪಾಯವನ್ನು 80% ರಷ್ಟು ಕಡಿಮೆ ಮಾಡಬಹುದು ಎಂದು ಡಾ. ಹಾಲ್ಡರ್ ಹೇಳಿದ್ದಾರೆ. ಹೆಚ್ಚಿನ ಅಪಾಯದ ವ್ಯಕ್ತಿಗಳು ತಕ್ಷಣವೇ ಬೂಸ್ಟರ್​ ಡೋಸ್​ ಪಡೆಯುವುದು, ಜನದಟ್ಟಣೆಯ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಮುಂದುವರಿಸುವುದು ಮತ್ತು ಮೂಲಭೂತ ನೈರ್ಮಲ್ಯ ಅಭ್ಯಾಸಗಳನ್ನು ಅನುಸರಿಸುವುದು ಬಹಳ ಮುಖ್ಯ ಎಂದು ಡಾ. ಹಾಲ್ಡರ್ ಸಲಹೆ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net