ಮೈಕ್ರೋ ಫೈನಾನ್ಸ್ ಕಂಪನಿಗಳ ನಿಯಂತ್ರಣಕ್ಕೆ ಹೊಸ ಕಾಯ್ದೆ: ಸಿದ್ದರಾಮಯ್ಯ ಮಾಹಿತಿ | Also urge union govt

CM Siddaramaiah
Published on

ಬೆಂಗಳೂರು: ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾಲ ಪಡೆದವರ ಹಿತರಕ್ಷಣೆ, ಕಿರು ಸಾಲ ನೀಡುವ ಸಂಸ್ಥೆಗಳ ನಿಯಂತ್ರಣಕ್ಕಾಗಿ ಹೊಸ ಕಠಿಣ ಕಾನೂನು ಸುಗ್ರೀವಾಜ್ಞೆ ಮೂಲಕ ಶೀಘ್ರವೇ ಜಾರಿಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದರು.

ಮೈಕ್ರೋ ಫೈನಾನ್ಸ್ ಕಂಪನಿಗಳ ಕಾರ್ಯಾಚರಣೆ ಮತ್ತದರ ಪರಿಣಾಮ ಕುರಿತು ಸಿಎಂ ಗೃಹ ಕಚೇರಿ ’ಕೃಷ್ಣಾ’ದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ಎರಡು ಪ್ರತ್ಯೇಕ ಜಂಟಿ ಸಭೆಗಳು ಶನಿವಾರ ನಡೆದವು. ನಂತರ ಮಾಧ್ಯಮಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ನಿರ್ಧಾರಗಳನ್ನು ವಿವರಿಸಿದರು.

ಸಾಲಗಾರರ ಹಿತರಕ್ಷಣೆ, ಮೈಕ್ರೋ ಫೈನಾನ್ಸ್ ಕಂಪನಿಗಳು, ಅನಧಿಕೃತ ಲೇವಾದೇವಿಗಾರರ ಮೇಲೆ ನಿಯಂತ್ರಣವಿಡಲು ಹೊಸ ಕಠಿಣ ಕಾಯ್ದೆಯನ್ನು ಕೂಡಲೇ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗುವುದು ಎಂದರು.

ಕಟ್ಟುನಿಟ್ಟಿನ ಸೂಚನೆ

ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲ ವಸೂಲಿ ಕಿರುಕುಳ, ಜನರ ತಾಪತ್ರಯದ ಕುರಿತು ವರದಿಗಳು ಬಂದ ಹಿನ್ನೆಲೆಯಲ್ಲಿ ಸಭೆ ನಡೆಸಿ ಸರ್ಕಾರದ ನಿಲುವು ತಿಳಿಸಿ, ಆರ್‌ಬಿಐ ಮಾರ್ಗಸೂಚಿ ಪಾಲಿಸಲು ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಸಾಲ ಕೊಡುವುದು, ವಸೂಲಿ ಮಾಡುವುದು ಸರಿ. ಆದರೆ ಕಿರುಕುಳ, ಬಲಾತ್ಕಾರ ಸಹಿಸಲ್ಲ. ಹೆಚ್ಚಿನ ಬಡ್ಡಿ ವಸೂಲಿಗೂ ಅವಕಾಶವಿಲ್ಲ. ಈ ವಿಚಾರದಲ್ಲಿ ಅನಧಿಕೃತ ಕಂಪನಿಗಳದೇ ಸಮಸ್ಯೆಯಾಗಿದ್ದು, ಪ್ರಕರಣಗಳು ಗಮನಕ್ಕೆ ಬಂದರೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ ಎಂದರು.

ಆರ್‌ಬಿಐ ನಿಯಮದ ಪ್ರಕಾರ ಒಂದು ಕುಟುಂಬಕ್ಕೆ 20 ಸಾವಿರ ರೂ.ಗಳವರೆಗೆ ಸಾಲ ನೀಡಲು, ಶೇ.17.07ರಷ್ಟು ಬಡ್ಡಿ ವಿಧಿಸಲು ಅವಕಾಶವಿದೆ. ಆದರೆ ಅನಧಿಕೃತ ಸಂಸ್ಥೆಗಳು ಮಿತಿಮೀರಿದ ಸಾಲ ನೀಡಿದ್ದು, ಒಬ್ಬರಿಗೆ ಬೇರೆ ಬೇರೆ ಕಂಪನಿಗಳಿಂದ ಸಾಲ, ಶೇ.24 ರಿಂದ 28ರಷ್ಟು ಬಡ್ಡಿ ವಸೂಲಿ ಮಾಡಿದ ದೂರುಗಳು ಗಮನಕ್ಕೆ ಬಂದಿವೆ.

ಸಾಲದ ವ್ಯವಹಾರ ಅಬಾಧಿತ

ನೋಂದಾಯಿಸಿಕೊಂಡ ಅಧಿಕೃತ ಮೈಕ್ರೋ ಫೈನಾನ್ಸ್  ಕಂಪನಿಗಳು ಸಾಲ ಕೊಡುವುದು ಇಲ್ಲವೇ ವಸೂಲಿ ಮಾಡುವುದನ್ನು ನಿಲ್ಲಿಸುವುದಿಲ್ಲ. ಎಲ್ಲರೂ ಬ್ಯಾಂಕ್‌ಗಳಿಗೆ ಹೋಗಿ ಸಾಲ ಪಡೆಯಲಾಗದು, ಪರ್ಯಾಯ ಆರ್ಥಿಕತೆ ರೂಪದಲ್ಲಿ ಅಧಿಕೃತ ಸಾಲ ವ್ಯವಸ್ಥೆ ಅನುಕೂಲಕರವಾಗಿದೆ.

ಮೈಕ್ರೋ ಫೈನಾನ್ಸ್ ಕಂಪನಿಗಳು ಆರ್‌ಬಿಐ ನಿಯಮಗಳಂತೆ ಸಾಲ ನೀಡಿ, ಬಡ್ಡಿ ದರ ವಿಧಿಸಬೇಕು. ನಿಯಮದ ಪ್ರಕಾರ ಉದಾಹರಣೆಗೆ ಒಬ್ಬರಿಗೆ ನಾಲ್ಕು ಸಾವಿರ ರೂ. ಸಾಲ ನೀಡಿದ್ದರೆ ಬಡ್ಡಿ ಮೊತ್ತ ಎರಡು ಸಾವಿರ ರೂ. ಮೀರುವಂತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕೇಂದ್ರ ಸರ್ಕಾರಕ್ಕೆ ಒತ್ತಾಯ

ಅನಧಿಕೃತ ಲೇವಾದೇವಿ ಚಟುವಟಿಕೆಗಳು ನಿಷೇಧ ಕುರಿತು ಕೇಂದ್ರ ಸರ್ಕಾರ ಕರಡು ಸಿದ್ಧಪಡಿಸಿದೆ. ಕೂಡಲೇ ಹೊಸ ಕಾಯ್ದೆ ಜಾರಿಗೆ ತರಬೇಕು ಎಂದು ಕೇಂದ್ರಕ್ಕೆ ಪತ್ರ ಬರೆದು ಒತ್ತಾಯಿಸಲಾಗುವುದು.

ರಾಜ್ಯದಲ್ಲಿ ಅನಧಿಕೃತ ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲ ವಸೂಲಿ ಉಪಟಳ, ಮೂರನೇ ವ್ಯಕ್ತಿಗಳ ಬಳಕೆ, ದಬ್ಬಾಳಿಕೆ, ಆತ್ಮಹತ್ಯೆ, ಊರು ತೊರೆದವರು, ಬಡವರು, ಕೆಳ ಮಧ್ಯಮವರ್ಗದ ಜನರು ಇಂತಹ ಸಂಕಷ್ಟದ ಸುಳಿಗೆ ಸಿಲುಕಿರುವುದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net