

Benjamin Netanyahu: ನ್ಯೂಯಾರ್ಕ್ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಅಧಿವೇಶನದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಭಾಷಣ ಮಾಡಲು ಪ್ರಾರಂಭಿಸುತ್ತಿದ್ದಂತೆ ಸಭಾಂಗಣದಲ್ಲಿದ್ದ ಇತರೆ ಹಲವು ದೇಶಗಳ ಪ್ರತಿನಿಧಿಗಳು ಪ್ಯಾಲೆಸ್ಟೈನ್ನ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸಿ ಸಾಮೂಹಿಕವಾಗಿ ಹೊರ ನಡೆದ ಘಟನೆ ಶುಕ್ರವಾರ (ಸೆ. 26) ನಡೆದಿದೆ.
ಸಾಮೂಹಿಕ ಹೊರ ನಡೆದ ಬಳಿಕ ಕೆಲವು ಪ್ರತಿನಿಧಿಗಳಿದ್ದ ಸಭೆಯಲ್ಲಿ ಭಾಷಣ ಮಾಡಿರುವ ನೇತನ್ಯಾಹು, ಗಾಜಾ ಮೇಲಿನ ಇಸ್ರೇಲ್ ಯುದ್ಧವನ್ನು ಮುಂದುವರೆಸುವುದಾಗಿ ಘೋಷಣೆ ಮಾಡಿದರು. ಹಮಾಸ್ ಉಗ್ರರ ವಿರುದ್ಧದ ಇಸ್ರೇಲ್ ತನ್ನ ಕೆಲಸವನ್ನು ಮುಗಿಸಲಿದೆ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಇದೇ ವೇಳೆ ಇಲ್ಲಿನ ನನ್ನ ಭಾಷಣವನ್ನು ಹಮಾಸ್ ಉಗ್ರರ ಹಿಡಿತದಲ್ಲಿ ಒತ್ತೆಯಾಳುಗಳಾಗಿರುವ ಇಸ್ರೇಲಿಗಳಿಗೆ ಕೇಳುವಂತೆ ಗಾಜಾದಲ್ಲಿ ಧ್ವನಿವರ್ಧಕಗಳ ಮೂಲಕ ತಮ್ಮ ಭಾಷಣವನ್ನು ಪ್ರಸಾರ ಮಾಡಲಾಗುತ್ತಿದೆ ಹೇಳಿದರು. ನಾವು ನಿಮ್ಮನ್ನು ಒಂದು ಕ್ಷಣವೂ ಮರೆತಿಲ್ಲ, ಇಸ್ರೇಲ್ ಜನರು ನಿಮ್ಮೊಂದಿಗಿದ್ದಾರೆ ಎಂದು ಒತ್ತೆಯಾಳುಗಳಿಗೆ ಭರವಸೆ ನೀಡಿದರು.
ಹಮಾಸ್ ಉಗ್ರರಿಗೆ ಎಚ್ಚರಿಕೆ ನೀಡಿದ ಅವರು, ನಿಮ್ಮ ತೋಳುಗಳಲ್ಲಿರುವ ಬಂದೂಕುಗಳನ್ನು ಕೆಳಗೆ ಇರಿಸಿ. ನನ್ನ ಜನರನ್ನು ಅವರ ದೇಶಕ್ಕೆ ಹೋಗಲು ಬಿಡಿ. ನೀವು ಹೀಗೆ ಮಾಡಿದ್ರೆ ಬುದುಕುತ್ತೀರಿ, ನೀವು ಹಾಗೆ ಮಾಡದಿದ್ದರೆ, ಇಸ್ರೇಲ್ ನಿಮ್ಮನ್ನು ಬೇಟೆಯಾಡುತ್ತದೆ. ಪಾಶ್ಚಾತ್ಯ ನಾಯಕರು ನಿಮ್ಮ ಒತ್ತಡಕ್ಕೆ ಮಣಿದಿರಬಹುದು.ಆದರೆ ಇಸ್ರೇಲ್ ಮಣಿಯುವುದಿಲ್ಲ ಎಂದರು.
ಪ್ಯಾಲೆಸ್ಟೈನ್ ಅನ್ನು ದೇಶವನ್ನಾಗಿ ಗುರುತಿಸಿದ ಪಾಶ್ಚಾತ್ಯ ದೇಶಗಳನ್ನು ಟೀಕಿಸಿದ ಅವರು, ಈ ನಿರ್ಧಾರ ಅವಮಾನಕರ. ಯಹೂದಿಗಳ ವಿರುದ್ಧ ಮುಗ್ದ ಜನರನ್ನು ಭಯೋತ್ಪಾದನೆಗೆ ಪ್ರೋತ್ಸಾಹಿಸುತ್ತದೆ ಎಂದು ಕಿಡಿಕಾರಿದರು. (ಏಜೆನ್ಸೀಸ್)