ಆಸ್ತಿ ವಿಚಾರಕ್ಕೆ ಚಿಕ್ಕಪ್ಪನಿಂದಲೇ ಅಣ್ಣನ ಮಗನ ಕೊಲೆ

14 ವರ್ಷದ ಹಿಂದೆ ತಂದೆ-ತಾಯಿ ಕಳೆದುಕೊಂಡಿದ್ದ ಬಾಲಕ, ನಕಲಿ ಸಹಿ ಮಾಡಿ ಆಸ್ತಿ ಮಾರಾಟ ಮಾಡಿದ್ದ ಆರೋಪಿ
Crime
Crime
Published on: 

ಬೆಂಗಳೂರು: ಹದಿನಾಲ್ಕು ವರ್ಷದ ಹಿಂದೆ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥವಾಗಿದ್ದ 15 ವರ್ಷದ ಬಾಲಕ ಚಿಕ್ಕಪ್ಪನ ಆಸರೆಯಲ್ಲಿದ್ದ. ಆದರೆ, ಆಸ್ತಿ ವಿಚಾರಕ್ಕೆ ಚಿಕ್ಕಪ್ಪನೇ ಅಣ್ಣನ ಮಗನನ್ನು ಹೊಂಚು ಹಾಕಿ ಕೊಲೆ ಮಾಡಿರುವುದು ಸೋಲದೇವನಹಳ್ಳಿಯ ಇಂದಿರಾ ಕಾಲನಿಯಲ್ಲಿ ಮಂಗಳವಾರ ನಡೆದಿದೆ.

10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಕೃಷ್ಣ (15) ಕೊಲೆಯಾದ ಬಾಲಕ. ಆರೋಪಿ ಮೋಹನ್ ಎಂಬಾತನನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮೋಹನ್ ಆಸರೆಯಲ್ಲಿ ಸಹೋದರ ಮುನಿರಾಜು ಅವರ ಮಕ್ಕಳು ಯಶವಂತ್ ಹಾಗೂ ಕೃಷ್ಣ ಇದ್ದರು.

ದೊಡ್ಡಮಗ ಯಶವಂತ ಕೂಲಿ ಕೆಲಸ ಮಾಡಿಕೊಂಡಿದ್ದ. ಕೃಷ್ಣ ಸಮೀಪದ ಐವರಕಂಡಪುರ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ತಾಯಿ ಶರ್ಮಿಳಾ 14 ವರ್ಷದ ಹಿಂದೆ ಗಂಡ ಹಾಗೂ ಮಕ್ಕಳನ್ನು ಬಿಟ್ಟು ಹೋಗಿದ್ದಳು. ತಂದೆ ಮುನಿರಾಜು ಅದೇ ಕೊರಗಿನಲ್ಲಿ 12 ವರ್ಷಗಳ ಹಿಂದೆ ತೀರಿಕೊಂಡಿದ್ದರು. ಮುನಿರಾಜುಗೆ ಸಹೋದರಿ ಪುಷ್ಪ ಹಾಗೂ ಮೋಹನ್ ತಮ್ಮ ಇದ್ದರು.

ಮೃತ ಬಾಲಕ ಕೃಷ್ಣನ ತಂದೆ ಮುನಿರಾಜುಗೆ ದೇವನಹಳ್ಳಿಯ ಕುಂದಾಣ ಸಮೀಪ 1 ಎಕರೆ ಪಿತ್ರಾರ್ಜಿತ ಕೃಷಿ ಜಮೀನು ಇತ್ತು. ಕಳೆದ ವರ್ಷ ಆ ಜಮೀನನ್ನು ಮೋಹನ್ ಅವರ ಅಕ್ಕ ಪುಷ್ಪ ಹಾಗೂ ಅಣ್ಣನ ಮಕ್ಕಳು ಕೃಷ್ಣ, ಯಶವಂತಗೆ ಗೊತ್ತಾಗದೆ ನಕಲಿ ಸಹಿ ಮಾಡಿ ಯಲಹಂಕದ ಜಿ.ಕೆ.ಬಿಲ್ಡರ್ಸ್ ಅವರಿಗೆ ಮಾರಾಟ ಮಾಡಿದ್ದ. ಈ ಕುರಿತು ಸಹೋದರಿ ಪುಷ್ಪ ಅವರು ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಮೋಹನ್ ವಿರುದ್ಧ ದೂರು ನೀಡಿದ್ದರು. ಇದೇ ವೇಳೆ ಜಮೀನು ಖರೀದಿಸಿದ್ದ ಬಿಲ್ಡರ್ಸ್ ಅವರಿಗೆ ಗೊತ್ತಾಗಿತ್ತು. ಪುಷ್ಪ ಹಾಗೂ ಮುನಿರಾಜು ಅವರಿಗೆ ಬರಬೇಕಾಗಿದ್ದ ಹಣವನ್ನು ನೇರವಾಗಿ ಅವರ ಖಾತೆಗೆ ವರ್ಗಾಯಿಸಿದ್ದರು. ಇದರಿಂದ ಕೋಪಗೊಂಡಿದ್ದ ಮೋಹನ್ ಅಣ್ಣನ ಮಕ್ಕಳ ಜತೆ ಆಗಾಗ ಗಲಾಟೆ ಮಾಡುತ್ತಿದ್ದನು.

ನಿನ್ನೆ ದಿನ ರಾತ್ರಿ 10 ಗಂಟೆ ಸುಮಾರಿಗೆ ಮೋಹನ್ ಕೃಷ್ಣ, ಯಶವಂತ ಇದ್ದ ಮನೆಗೆ ಹೋಗಿ ಬಂದಿದ್ದ. ಮರುದಿನ ಬೆಳಗ್ಗೆ ಮಂಗಳವಾರ ಕೃಷ್ಣ ರಕ್ತದ ಮಡುವಿನಲ್ಲಿ ಕೊಣೆಯಲ್ಲಿ ಬಿದ್ದಿದ್ದನು. ವಿಷಯ ತಿಳಿದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆರೋಪಿ ಮೋಹನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ವಾಯುವ್ಯ ವಿಭಾಗದ ಡಿಸಿಪಿ ಡಿ.ಎಲ್.ನಾಗೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net