

ಬೆಂಗಳೂರು: ಉದ್ಯಮಿ ಮನೆಯಲ್ಲಿ ಕೆಲಸಕ್ಕಿದ್ದ ನೇಪಾಳ ಮೂಲದ ದಂಪತಿ ಉಂಡ ಮನೆಗೆ ಕನ್ನ ಹಾಕಿದ್ದು, ಸುಮಾರು ೧.೭೦ ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಎಚ್‌ಎಎಲ್‌ನ ಶಾಸಿ ನಗರದ ಉದ್ಯಮಿ ಹಾಗೂ ರಾಜಕಾರಣಿ ರಮೇಶ್‌ಬಾಬು ಎಂಬುವರ ಮನೆಯಲ್ಲಿ ಈ ಕಳವು ನಡೆದಿದ್ದು, ಅವರ ಮನೆಯಲ್ಲಿ ಕೆಲಸಕ್ಕಿದ್ದ ರಾಜ್ ಹಾಗೂ ದೀಪಾ ದಂಪತಿಯು ೨ ಕೆ.ಜಿ. ಚಿನ್ನಾಭರಣ, ೧೦ ಲಕ್ಷ ರೂ. ನಗದು ಮತ್ತು ಪರವಾನಗಿ ಹೊಂದಿದ್ದ ಪಿಸ್ತೂಲ್ ಕಳವು ಮಾಡಿದ್ದಾರೆ. ರಮೇಶ್‌ಬಾಬು, ಬಿಜೆಪಿಯಲ್ಲಿ ಸಕ್ರಿಯರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಮೇಶ್‌ಬಾಬು ಅವರ ಮನೆಯಲ್ಲಿ ಸೆಕ್ಯೂರಿಟಿ ಹಾಗೂ ಮನೆ ಕೆಲಸಕ್ಕೆ ೩ ತಿಂಗಳ ಹಿಂದೆಯಷ್ಟೇ ರಾಜ್ ಮತ್ತು ದೀಪಾ ದಂಪತಿಯನ್ನು ನೇಮಿಸಿಕೊಳ್ಳಲಾಗಿತ್ತು. ರಮೇಶ್‌ಬಾಬು ಅವರು ರಾಜ್ ದಂಪತಿಯನ್ನು ಮನೆಯಲ್ಲಿ ಬಿಟ್ಟು ಮೇ ೨೭ರಂದು ಕುಟುಂಬ ಸಮೇತ ತಿರುಪತಿಗೆ ಹೋಗಿದ್ದರು. ತಿರುಪತಿಯಲ್ಲಿದ್ದ ರಮೇಶ್‌ಬಾಬು ಅವರು ಮೇ ೨೮ರಂದು ಬೆಳಗಿನ ಜಾವ ತಮ್ಮ ಮೊಬೈಲ್ ಮೂಲಕ ಪರಿಶೀಲಿಸಿದಾಗ ಮನೆಯ ಸಿ.ಸಿ. ಕ್ಯಾಮರಾಗಳು ಆ್ ಆಗಿರುವುದು ಗೊತ್ತಾಗಿತ್ತು. ಕ್ಯಾಮರಾಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಿರಬಹುದೆಂದು ಅವರು ಭಾವಿಸಿದ್ದರು.
ಮೇ ೨೯ರಂದು ಬೆಳಗ್ಗೆ ಪಕ್ಕದ ಮನೆಯವರು ರಮೇಶ್‌ಬಾಬು ಅವರಿಗೆ ಕರೆ ಮಾಡಿ, ನಿಮ್ಮ ಮನೆಯಲ್ಲಿ ಯಾರೂ ಇಲ್ಲ ಎಂದು ತಿಳಿಸಿದ್ದರು. ಇದರಿಂದ ಅನುಮಾನಗೊಂಡ ರಮೇಶ್‌ಬಾಬು, ತಮ್ಮ ಸಂಬಂಧಿಕರನ್ನು ಮನೆಯ ಬಳಿ ಕಳುಹಿಸಿ ಪರಿಶೀಲನೆ ಮಾಡಿಸಿದಾಗ ಕಳವು ನಡೆದಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಂಬಿಕೆ ದ್ರೋಹ ಮಾಡಿದ ದಂಪತಿ:
ರಾಜ್ ದಂಪತಿಯು ರಮೇಶ್‌ಬಾಬು ಅವರ ಮನೆಯ ಔಟ್‌ಹೌಸ್‌ನಲ್ಲಿ ಇದ್ದರು. ಕುಟುಂಬದ ನಂಬಿಕೆ ಗಳಿಸಿದ್ದ ರಾಜ್ ದಂಪತಿಯನ್ನು ನಂಬಿ ರಮೇಶ್‌ಬಾಬು ಅವರು ಕುಟುಂಬ ಸದಸ್ಯರೊಂದಿಗೆ ತಿರುಪತಿಗೆ ಹೋಗಿದ್ದರು. ಇದೇ ಸರಿಯಾದ ಸಮಯವೆಂದು ರಾಜ್ ದಂಪತಿಯು ಮತ್ತಿಬ್ಬರು ಆರೋಪಿಗಳ ಜತೆ ಸೇರಿ ಮೇ ೨೭ರಂದು ರಾತ್ರಿ ರಮೇಶ್‌ಬಾಬುರ ಮನೆಯ ಮುಂಬಾಗಿಲು ಮತ್ತು ಬೆಡ್‌ರೂಂನ ಬಾಗಿಲು ಮುರಿದು ಒಳ ನುಗ್ಗಿ, ಅಲ್ಮೇರಾದಲ್ಲಿದ್ದ ೨ ಕೆ.ಜಿ. ಚಿನ್ನಾಭರಣ, ೧೦ ಲಕ್ಷ ರೂ. ನಗದು ಮತ್ತು ಪಿಸ್ತೂಲ್ ಕಳವು ಮಾಡಿ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಕೃತ್ಯದ ನಂತರ ಬಾಡಿಗೆ ಕಾರು ಬುಕ್ ಮಾಡಿಕೊಂಡಿದ್ದಾರೆ. ಬಳಿಕ ಮನೆ ಬಳಿ ಬಂದ ಕಾರಿನಲ್ಲಿ ಚಿನ್ನಭರಣ, ಹಣದ ಬ್ಯಾಗ್ ತುಂಬಿಕೊಂಡು ಕಾಲ್ಕಿತ್ತಿದ್ದಾರೆ. ಈ ದೃಶ್ಯವು ರಮೇಶ್‌ಬಾಬುರ ಮನೆಯ ಅಕ್ಕಪಕ್ಕದ ಮನೆಗಳ ಸಿ.ಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ರಾಜ್ ದಂಪತಿಯು ಕಳ್ಳತನ ಮಾಡುವ ಉದ್ದೇಶಕ್ಕಾಗಿ ರಮೇಶ್‌ಬಾಬುರ ಮನೆಯ ಸಿ.ಸಿ ಕ್ಯಾಮರಾಗಳನ್ನು ಆ್ ಮಾಡಿ ಕೈಚಳಕ ತೋರಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿದ್ದು, ಸಿಬ್ಬಂದಿಯು ಆರೋಪಿಗಳ ಜಾಡು ಹಿಡಿದು ನೇಪಾಳಕ್ಕೆ ಹೋಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.