ನೇಪಾಳ ಸಚಿವ ಸಂಪುಟ ವಿಸರ್ಜಿಸಿದ ಪ್ರಧಾನಿ ಕೆ.ಪಿ.ಶರ್ಮಾ ಒಲಿ; ಏಪ್ರಿಲ್​ನಲ್ಲಿ ಚುನಾವಣೆ

kp sharma oli
Published on

ಕಾಠ್ಮಂಡು: ಸಚಿವ ಸಂಪುಟವನ್ನು ವಿಸರ್ಜಿಸುವ ಪ್ರಧಾನ ಮಂತ್ರಿ ಕೆ.ಪಿ.ಶರ್ಮಾ ಒಲಿ ಅವರ ತೀರ್ಮಾನವನ್ನು ನೇಪಾಳದ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅಂಗೀಕರಿಸಿದ್ದಾರೆ. ಪ್ರಧಾನ ಮಂತ್ರಿ ಕೆ.ಪಿ.ಶರ್ಮಾ ಒಲಿ ಅವರು ಭಾನುವಾರ ಬೆಳಗ್ಗೆ ತುರ್ತು ಸಚಿವ ಸಂಪುಟ ಸಭೆ ನಡೆಸಿದ್ದು, ಬಳಿಕ ಈ ತೀರ್ಮಾನವನ್ನು ಪ್ರಕಟಿಸಿದ್ದಾರೆ. ಇದರಂತೆ, ಹೊಸ ಸರ್ಕಾರದ ಆಯ್ಕೆಗಾಗಿ ಏಪ್ರಿಲ್ 30 ಮತ್ತು ಮೇ 10 ರೊಳಗೆ ಚುನಾವಣೆ ನಡೆಯಲಿದೆ.

ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅವರು ನೇಪಾಳದ ಸಂವಿಧಾನದ ಅನುಚ್ಚೇಧ 76, ವಿಧಿ 1 ಮತ್ತು 7, ಅನುಚ್ಚೇಧ 85 ರ ಪ್ರಕಾರ ಸರ್ಕಾರವನ್ನು ವಿಸರ್ಜಿಸಿದ್ದಾರೆ. ಇದರಂತೆ, ಏಪ್ರಿಲ್ 30ರಂದು ಮೊದಲ ಹಂತದ ಮತದಾನ ನಡೆದರೆ, ಮೇ 10ರಂದು ಎರಡನೇ ಹಂತದ ಮಧ್ಯಂತರ ಚುನಾವಣೆ ನಡೆಯಲಿದೆ.

ನೇಪಾಳದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿದಿದೆ. ಹೀಗಿರುವ ಸಂದರ್ಭದಲ್ಲೇ ಸರ್ಕಾರ ವಿಸರ್ಜನೆಯ ಕ್ರಮವನ್ನು ಅಸಾಂವಿಧಾನಿಕ ಎಂದು ಅನೇಕರು ಟೀಕಿಸಿದ್ದಾರೆ. 2017ರಲ್ಲಿ ಚುನಾವಣೆ ನಡೆದಾಗ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ನಲ್ಲಿನ ಒಟ್ಟು 275 ಸ್ಥಾನಗಳ ಪೈಕಿ ನೇಪಾಳ್ ಕಮ್ಯೂನಿಸ್ಟ್ ಪಾರ್ಟಿ (ಎನ್​ಸಿಪಿ) 174 ಸ್ಥಾನ ಹೊಂದಿ ಆಡಳಿತ ಚುಕ್ಕಾಣಿ ಹಿಡಿದಿತ್ತು. ವಿಪಕ್ಷ ಸ್ಥಾನದಲ್ಲಿರುವ ನೇಪಾಳ್ ಕಾಂಗ್ರೆಸ್ 63, ಪೀಪಲ್ಸ್ ಸೋಷಿಯಲಿಸ್ಟ್ ಪಾರ್ಟಿ 34, ಸ್ವತಂತ್ರ ಸದಸ್ಯರು 4 ಜನ ಇದ್ದರು. ಆಡಳಿತಾರೂಢ ಎನ್​ಸಿಪಿಯಲ್ಲಿ ಎರಡು ಬಣಗಳ ಸೃಷ್ಟಿಯಾಗಿದ್ದು, ಪ್ರಚಂಡ ನೇತೃತ್ವದ ಬಣ ಆರಂಭದಲ್ಲಿ ಆಡಳಿತ ನಡೆಸಿತ್ತು. 2018ರ ಮಾರ್ಚ್​ನಲ್ಲಿ ಕೆ.ಪಿ.ಶರ್ಮಾ ಒಲಿ ನೇತೃತ್ವದ ಬಣ ಮೇಲುಗೈ ಸಾಧಿಸಿ ಆಡಳಿತ ಚುಕ್ಕಾಣಿ ಹಿಡಿದಿದೆ. ಈಗ ದಿಢೀರ್ ಅವಧಿಪೂರ್ವ ಚುನಾವಣೆ ವಿವಾದವನ್ನು ಹುಟ್ಟುಹಾಕಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net