ಅಬ್ಬಬ್ಬಾ ನೇಪಾಳವೆ! ಲಾಕ್​ಡೌನ್​ ಇರುವಾಗಲೇ ಸದ್ದಿಲ್ಲದೆ ಭಾರತವನ್ನೂ ಕಬಳಿಸಿತಾ?

nepal-web1
Published on

ಕಠ್ಮಂಡು: ವಿಶ್ವದೆಲ್ಲೆಡೆ ಲಾಕ್​ಡೌನ್​ ಬಿಕ್ಕಟ್ಟು ಇರುವಾಗಲೇ, ಎಲ್ಲಾ ದೇಶಗಳೂ ಕರೊನಾ ವೈರಸ್​ ಮಹಾಮಾರಿಯನ್ನು ಹೊಡೆದೋಡಿಸಲು ಏನೇನೋ ತಂತ್ರಗಳನ್ನು ರೂಪಿಸುತ್ತಿರುವ ನಡುವೆಯೇ, ಇತ್ತ ನೇಪಾಳ ಸದ್ದಿಲ್ಲದೇ ಒಂದು ಕುತಂತ್ರ ಮಾಡಿಯೇಬಿಟ್ಟಿದೆ.

ಭಾರತದ ಭೂ ಪ್ರದೇಶ ತನ್ನದೆಂದು ಬಿಂಬಿಸುವ ನೂತನ ನಕ್ಷೆಗೆ ನೇಪಾಳದ ಸಚಿವ ಸಂಪುಟ ಅನುಮೋದನೆ ನೀಡಿದೆ! ಭಾರತದೊಂದಿಗೆ ಗಡಿ ವಿವಾದವನ್ನು ಹೊಂದಿರುವ ಲಿಪುಲೆಖ್, ಕಾಲಾಪಾಣಿ ಮತ್ತು ಲಿಂಪಿಯಾಧುರಾ ಭೂ ಪ್ರದೇಶವನ್ನು ತನ್ನೆದೆಂದು ತೋರಿಸುವ ಹೊಸ ರಾಜಕೀಯ ನಕ್ಷೆ ಇದಾಗಿದೆ.

ಭಾರತ ಮತ್ತು ನೇಪಾಳ ಗಡಿ ವಿವಾದದ ಸಮಸ್ಯೆಗಳ ಕುರಿತು ಇನ್ನೂ ಮಾತುಕತೆ ನಡೆಯುತ್ತಿರುವ ನಡುವೆಯೇ ಇಂಥದ್ದೊಂದು ಕ್ರಮಕ್ಕೆ ನೇಪಾಳ ಮುಂದಾಗಿದೆ. ಗಡಿ ವಿವಾದ ಸಮಸ್ಯೆಯನ್ನು ಪರಿಹರಿಸಲು ಸಕಲ ಪ್ರಯತ್ನಗಳು ನಡೆಯುತ್ತಿವೆ ಎಂದು ಈಚೆಗಷ್ಟೇ ನೇಪಾಳ ವಿದೇಶಾಂಶ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಲಿ ಹೇಳಿಕೆ ನೀಡಿದ್ದರು. ಆದರೆ ಈ ರೀತಿಯಾಗಿ ಸದ್ದಿಲ್ಲದೇ ನಕ್ಷೆ ಬಿಡುಗಡೆ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಭಾರತ ಹಾಗೂ ನೇಪಾಳ ಎರಡೂ ಕಾಲಾಪಾಣಿ ತಮ್ಮ ಭೂಪ್ರದೇಶದ ಅವಿಭಾಜ್ಯ ಅಂಗವೆಂದು ಹೇಳಿಕೊಳ್ಳುತ್ತಿದೆ. ಭಾರತವು ಉತ್ತರಾಖಂಡದ ಪಿಥೋರಗರ್ ಮತ್ತು ನೇಪಾಳ ಧಾರ್ಚುಲ್ ಜಿಲ್ಲೆಯ ಭಾಗವಾಗಿ ಹೆಸರಿಸಿದೆ.

ಉತ್ತರಾಖಂಡದ ಗಡಿ ಭಾಗದಲ್ಲಿ ಲಿಪುಲೆಖ್ ಪಾಸ್ ಮೂಲಕ 80 ಕೀ.ಮೀ.ನಷ್ಟು ನೂತನವಾಗಿ ರಸ್ತೆ ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ನೇಪಾಳ ಸರ್ಕಾರ ಭಾರತೀಯ ರಾಯಭಾರಿಗೆ ಈ ಹಿಂದೆ ಸಮನ್ಸ್ ಜಾರಿ ಮಾಡಿತ್ತು. ಮಾನಸ ಸರೋವರಕ್ಕೆ ಪ್ರಯಾಣ ಬೆಳೆಸಲು ನೆರವಾಗುವಂತೆ ಭಾರತೀಯ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ರಸ್ತೆ ಕಾಮಗಾರಿಗೆ ಈಚೆಗೆ ಚಾಲನೆ ನೀಡಿದ್ದರು. ಈ ವೇಳೆ ಸ್ಪಷ್ಟನೆ ನೀಡಿದ್ದ ಭಾರತ, ಉತ್ತರಾಖಂಡದಲ್ಲಿರುವ ಪಿಥೋರಾಗರ್ ಸಂಪೂರ್ಣವಾಗಿ ತನ್ನ ಭೂಪ್ರದೇಶದಲ್ಲಿದೆ ಎಂದು ಹೇಳಿತ್ತು. ಆದರೆ ಈ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ವ್ಯಕ್ತವಾಗುವ ಮೊದಲೇ ಇಂಥದ್ದೊಂದು ಬೆಳವಣಿಗೆ ನಡೆದುಬಿಟ್ಟಿದೆ.

ನೇಪಾಳದ ನಕ್ಷೆಯನ್ನು 7 ಪ್ರಾಂತ್ಯ, 77 ಜಿಲ್ಲೆ ಹಾಗೂ 753 ಸ್ಥಳೀಯಡಾಳಿತ ಮಟ್ಟದಲ್ಲಿ ಲಿಪುಲೆಖ್, ಕಾಲಾಪಾಣಿ ಮತ್ತು ಲಿಂಪಿಯಾಧುರಾ ಭೂ ಪ್ರದೇಶವನ್ನು ಸೇರಿಸಿಕೊಂಡು ಸಂಪುಟ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಹೊಸ ಅಧಿಕೃತ ನಕ್ಷೆಯನ್ನು ಬಿಡುಗಡೆ ಮಾಡಲಿದೆ. ಹೊಸ ನಕ್ಷೆಯಲ್ಲಿ ಲಂಪಿಯಾಧುರಾ ಸೇರಿದಂತೆ ಭಾರತದ 335 ಕೀ.ಮೀ. ಭೂಪ್ರದೇಶವನ್ನು ನೇಪಾಳ ತನ್ನ ಭೂಪ್ರದೇಶದೊಳಗೆ ಸೇರಿಸಿಕೊಂಡಿದೆ.

ಲಿಂಪಿಯಾಧುರಾ, ಕಲಾಪಾಣಿ ಹಾಗೂ ಲಿಪುಲೇಖ್ ನೇಪಾಳಕ್ಕೆ ಸೇರಿದ್ದಾಗಿದೆ. ಅಲ್ಲದೆ ಭಾರತದೊಂದಿಗನ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕಳೆದ ವಾರ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ನೇಪಾಳ ಅಧ್ಯಕ್ಷ ಬಿಧ್ಯಾ ಭಂಡಾರಿ ಹೇಳಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net