ಎನ್​ಇಪಿಯಲ್ಲಿ ರಾಜಕೀಯ; ತಡೆ ಹಾಕಲು ಕಾಂಗ್ರೆಸ್ ಪ್ರಯತ್ನ, ಮೈಲಿಗಲ್ಲು ಸ್ಥಾಪಿಸಲು ಬಿಜೆಪಿ ಯತ್ನ

NEP
Published on

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ರಾಜ್ಯದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಬೇಕು. ಶೈಕ್ಷಣಿಕ ಕ್ಷೇತ್ರದ ಕೊರತೆ ನೀಗಬೇಕು. ಹೊಸ ಬದಲಾವಣೆಯ ಗಾಳಿ ಆರಂಭವಾಗಬೇಕು. ಇದರ ಲಾಭ ತನಗೂ ಆಗಬೇಕು ಎಂಬ ಉತ್ಸಾಹದಲ್ಲಿ ಆಡಳಿತ ಪಕ್ಷ ಬಿಜೆಪಿ ಇದ್ದರೆ, ಪ್ರಧಾನ ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರದ ಆಸಕ್ತಿ ಬಗ್ಗೆ ಸಂಶಯ ವ್ಯಕ್ತಪಡಿಸಿ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದೆ.

ಈಗಾಗಲೆ ಪ್ರಥಮ ವರ್ಷದ ಪದವಿ ತರಗತಿಯನ್ನು ಹೊಸ ಶಿಕ್ಷಣ ನೀತಿಯಂತೆಯೇ ಪ್ರವೇಶ ಮಾಡಿಕೊಂಡು, ಪ್ರಕ್ರಿಯೆ ಆರಂಭಿಸಿದೆ. ಬದಲಾಗುವ ಕ್ರಮಕ್ಕೆ ತಕ್ಕಂತೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಸತತ ಪ್ರಯತ್ನ ನಡೆದಿದೆ. ವಿದ್ಯಾರ್ಥಿಗಳಿಗೆ ನೀಡಬಹುದಾದ ಆಯ್ಕೆ ವಿಧಾನಗಳು, ಪಠ್ಯಕ್ರಮ, ಪಠ್ಯ ರಚನೆಯಂತಹ ಪ್ರಕ್ರಿಯೆಯನ್ನು ಮುಗಿಸಲಾಗಿದೆ. ಕಾಲೇಜು ಆಡಳಿತ ಮಂಡಳಿಗಳು, ಉಪನ್ಯಾಸಕರ ಹಂತದಲ್ಲಿ ಬದಲಾಗುವ ಕ್ರಮಗಳ ಬಗ್ಗೆ ತಿಳಿಸಿಕೊಡಲಾಗಿದೆ. ಜಗತ್ತಿನ ಬದಲಾವಣೆಗೆ ತಕ್ಕಂತೆ ಶಿಕ್ಷಣ ವ್ಯವಸ್ಥೆಯಲ್ಲಾಗಬೇಕಾದ ಪರಿವರ್ತನೆಗೆ ಈಗ ಕಾಲೇಜುಗಳು ಹಾಗೂ ಕಾಲೇಜು ಆಡಳಿತ ಮಂಡಳಿಗಳು ಉತ್ಸಾಹ ತೋರಿವೆ. ಜತೆಗೆ ಉಪನ್ಯಾಸಕರನ್ನು ಸಜ್ಜುಗೊಳಿಸುವ ಕೆಲಸ ನಡೆಯುತ್ತಿವೆ. ಹೆಲ್ಪ್​ಲೈನ್ ಸಹ ಆರಂಭಿಸಲಾಗಿದೆ. ಅಧಿಕಾರಿಗಳು ಸಹ ಆತ್ಮವಿಶ್ವಾಸದಲ್ಲೇ ತೊಡಗಿಕೊಂಡಿದ್ದಾರೆ.

ಈ ನಡುವೆ, ನಮಗೆ ಹೊಸ ಶಿಕ್ಷಣ ನೀತಿ ಬಗ್ಗೆ ಅರ್ಥವಾಗಿಲ್ಲ, ಅನೇಕ ಗೊಂದಲಗಳಿವೆ. ಅದು ಪರಿಹಾರವಾಗಲಿ. ಮುಖ್ಯವಾಗಿ ಶಾಸನಸಭೆಯಲ್ಲಿ ಚರ್ಚೆಯಾಗಿ, ಅಗತ್ಯ ಕಾನೂನು ಬದಲಾವಣೆ ಬಳಿಕ ಜಾರಿಯಾಗಲಿ ಎಂದು ಕಾಂಗ್ರೆಸ್ ಬಯಸಿದೆ. ಯಾವ ಕಾರಣಕ್ಕೆ ಸರ್ಕಾರ ಆತುರ ಮಾಡುತ್ತಿದೆ ಎಂಬುದು ಕೈ ನಾಯಕರ ಪ್ರಶ್ನೆ. ಬೇರೆ ಯಾವುದೇ ರಾಜ್ಯದಲ್ಲಿ ತೋರದ ಆತುರ ಕರ್ನಾಟಕದಲ್ಲಿ ಏಕೆ ಎಂಬ ಪ್ರಶ್ನೆ ಎತ್ತಿದ್ದಾರೆ.

ನೂತನ ಶಿಕ್ಷಣ ನೀತಿಯನ್ನು ರಾಜಕೀಯ ಆಯಾಮದಲ್ಲಿ ನೋಡುತ್ತಿರುವ ಕಾಂಗ್ರೆಸ್, ಪಕ್ಷದ ನಾಯಕರ ಸಮಿತಿ ರಚಿಸಿ ವರದಿ ಪಡೆದುಕೊಂಡಿದೆ. ಆ ಸಮಿತಿ ತನಗೆ ಗೊತ್ತಿರುವ ವಿಚಾರವನ್ನು ವರದಿಯಲ್ಲಿ ಉಲ್ಲೇಖಿಸಿ ನೀಡಿದೆ. ಮುಂದಾಗಬಹುದಾದ ಪರಿಣಾಮಗಳನ್ನು ಊಹಿಸಿ ಪಕ್ಷವನ್ನು ಎಚ್ಚರಿಸಿದೆ. ಇದೇ ಕಾರಣಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎನ್​ಇಪಿ ಅನುಷ್ಠಾನ ಬಗ್ಗೆ ಸಂಶಯ ವ್ಯಕ್ತಪಡಿಸಿ ಒಡಕು ದನಿ ತೆಗೆದಿದ್ದಾರೆ. ಎನ್​ಇಪಿ ಅನುಷ್ಠಾನವನ್ನು ರಾಜಕೀಯ ಲಾಭ ಮಾಡಿಕೊಳ್ಳಬಹುದೆಂದು ಕೈ ನಾಯಕರು ಭಾವಿಸಿದ್ದು, ಇದೇ ಆಯಾಮದಲ್ಲಿ ಚರ್ಚೆ ಕೂಡ ನಡೆಸಿದ್ದಾರೆ. 1964ರಲ್ಲಿ ಅಂದಿನ ಪರಿಸ್ಥಿತಿಗೆ ತಯಾರಾದ ಶಿಕ್ಷಣ ನೀತಿ ಈಗಲೂ ಜಾರಿಯಲ್ಲಿದೆ. ಅದನ್ನು ಬದಲಿಸಬೇಕು. ಇನ್ನೆಷ್ಟು ದಿನ ಬದಲಾವಣೆ ಬಯಸದೆ ಮುಂದುವರಿಯುವುದು ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಪಕ್ಷದ ವೇದಿಕೆ ಮೂಲಕ ಹೊಸ ಶಿಕ್ಷಣ ನೀತಿ ಬಗ್ಗೆ ಚರ್ಚೆಯಾಗಬೇಕು ಎಂದು ಬಿಜೆಪಿ ಪ್ರಯತ್ನ ನಡೆಸಿದೆ. ಒಟ್ಟಾರೆ ಎರಡು ಪಕ್ಷದ ನಡುವೆ ಎನ್​ಇಪಿ ಹೊಯ್ದಾಟ ನಡೆದಿದೆ. ವಿರೋಧಿಸುವವರು ಅದರ ಆಳ ಅಗಲವನ್ನು ಅರಿಯದೆ ಮೇಲ್ನೋಟಕ್ಕೆ ಊಹಾತ್ಮಕ ಟೀಕೆ ಮುಂದುವರಿಸಿದ್ದಾರೆ. ಸರ್ಕಾರದ ಕಡೆಯಿಂದ ಕೂಡ ಸಾಮಾನ್ಯ ಜನರಿಗೆ ಅರ್ಥ ಮಾಡಿಸುವ ಕೆಲಸ ಪರಿಣಾಮಕಾರಿಯಾಗಿ ನಡೆದಿಲ್ಲ.

ಗೊಂದಲ ಏಕೆ?: ಸರ್ಕಾರ ಪ್ರಥಮ ವರ್ಷದ ಪದವಿ ತರಗತಿಗೆ ಮಾತ್ರ ಗಮನ ಹರಿಸಿದೆ. ಈ ವರ್ಷ ಈ ತರಗತಿಗೆ ಮಾತ್ರ ಎನ್​ಇಪಿ ಅಳವಡಿಕೆ ಆಗುತ್ತಿರುವುದರಿಂದ ಗಮನ ಅಷ್ಟಕ್ಕೆ ಸೀಮಿತವಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ ಮುಂದಿನ ವರ್ಷ ಅಳವಡಿಕೆಯಾಗುವ ತರಗತಿಗೆ ತಯಾರಿ ಮಾಡಿಕೊಳ್ಳಲು ಬಯಸಿದೆ. ಇದೇ ತೀರ್ಮಾನ ಗೊಂದಲಕ್ಕೆ ಪ್ರಮುಖ ಕಾರಣವಾಗಿದೆ. ಪದವಿಪೂರ್ವ, ಪ್ರೌಢ, ಸ್ನಾತಕೋತ್ತರ ಹಂತದ ಉಪನ್ಯಾಸಕರು ಅಥವಾ ಆ ಕ್ಷೇತ್ರಕ್ಕೆ ಸಂಬಂಧಪಟ್ಟವರಿಗೆ ಮಾಹಿತಿ ಕೊರತೆ ಇದೆ. ಮುಂದೇನಾಗುತ್ತದೆ ಎಂಬ ಸ್ಪಷ್ಟತೆ ಇಲ್ಲ. ಇದು ಸಮಾಜದಲ್ಲಿ ಸ್ಪಷ್ಟತೆ ಕೊರತೆಯ ಬಗ್ಗೆ ಹೆಚ್ಚು ಚರ್ಚೆಗೆ ಕಾರಣವಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹರಿಬರಿಯಲ್ಲಿ ಜಾರಿ ಮಾಡುತ್ತಿರು ವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಹೊಸ ನೀತಿ ವಿಧಾನ ಸಭೆ, ವಿಧಾನಸಭೆಯಲ್ಲಿ ಚರ್ಚೆಯಾಗಿ ಒಳಿತು ಅಂಶಗಳನ್ನು ಜಾರಿಗೆ ತರಲಿ. ಈವರೆಗೂ ಯಾರಿಗೂ ಅರ್ಥವಾಗಿಲ್ಲ.

| ಸಲೀಂ ಅಹ್ಮದ್ ಕೆಪಿಸಿಸಿ ಕಾರ್ಯಾಧ್ಯಕ್ಷ

ಅಧಿವೇಶನದಲ್ಲಿ ಘರ್ಷಣೆ: ವಿಧಾನಮಂಡಲ ಅಧಿವೇಶನದಲ್ಲಿ ನೂತನ ಶಿಕ್ಷಣ ನೀತಿ ಜಾರಿ ಚರ್ಚೆಯಾಗುವ ಪ್ರಮುಖ ಹಾಗೂ ಆದ್ಯತಾ ವಿಷಯಗಳಲ್ಲೊಂದು. ಹೇಗಾದರೂ ಮಾಡಿ ಸರ್ಕಾರವನ್ನು ಹಿಮ್ಮೆಟ್ಟಿಸ ಬೇಕೆಂಬ ಆಲೋಚನೆಯಲ್ಲಿ ಕಾಂಗ್ರೆಸ್ ಇದೆ. ಈ ವರ್ಷದ ಪ್ರಥಮ ವರ್ಷದ ಪ್ರವೇಶ ಪ್ರಕ್ರಿಯೆಗೆ ಬದಲಾವಣೆ ಮಾಡಬಾರದು ಎಂದು ಪಟ್ಟುಹಿಡಿದು ಸರ್ಕಾರದ ಆದೇಶ ಹಿಂಪಡೆಯುವಂತೆ ಮಾಡಬೇಕೆಂಬ ಚರ್ಚೆಗಳು ಪಕ್ಷದಲ್ಲಿ ನಡೆದಿದೆ.

ಎನ್​ಇಪಿ ಬಗ್ಗೆ ನಿಲುವಳಿ: ರಾಜ್ಯ ಸರ್ಕಾರ ತರಾತುರಿಯಲ್ಲಿ ಜಾರಿ ಮಾಡುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ವಿಧಾನಸಭೆಯಲ್ಲಿ ಸೋಮವಾರ ನಿಲುವಳಿ ಮಂಡಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶನಿವಾರ ಶಿಕ್ಷಣ ತಜ್ಞರ ಜತೆ ಸಮಾಲೋಚನೆ ನಡೆಸಿ, ಸಾಧಕ-ಬಾಧಕಗಳ ಬಗ್ಗೆ ಮಾಹಿತಿ ಪಡೆದರು. ಎನ್​ಇಪಿ ಜಾರಿಗೆ ತಂದರೆ ಖಾಸಗೀಕರಣಕ್ಕೆ ಉತ್ತೇಜನ ನೀಡಿ ವಾಣಿಜ್ಯೀಕರಣವಾಗಲು ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ. ಬಾಲ ಕಾರ್ವಿುಕರ ಸಂಖ್ಯೆ ಹೆಚ್ಚಾಗುತ್ತದೆ. ವಿದ್ವತ್ ಕಲಿಸುವುದಕ್ಕೆ ಶಿಕ್ಷಣ ನೀತಿ ಪೂರಕವಾಗಿಲ್ಲ. ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿಯೂ ಇಲ್ಲ. ಮಹಿಳೆಯರು, ಪರಿಶಿಷ್ಟರು, ಭಾಷಾ ಮತ್ತು ಧಾರ್ವಿುಕ ಅಲ್ಪಸಂಖ್ಯಾತರ ವಿರೋಧಿಯಾಗಿದೆ. ಏಕರೂಪ ಶಿಕ್ಷಣ ಹೇರಿಕೆ ಮೂಲಕ ಜ್ಞಾನದ ವೈವಿಧ್ಯತೆಯ ವಿರೋಧಿಯಾಗಿದೆ. ಸ್ಕಾಲರ್​ಶಿಪ್​ಗಳನ್ನು ರದ್ದು ಮಾಡಿ ಸಾಲ ಕೊಡಿಸುವ ಮೂಲಕ ವಿದ್ಯಾರ್ಥಿಗಳನ್ನು ಸಾಲಗಾರರನ್ನಾಗಿ ಮಾಡಲಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಮಧ್ಯಾಹ್ನದ ಬಿಸಿಯೂಟ ರದ್ದು ಮಾಡಿ ಶಾಲೆ ತೊರೆಯುವವರ ಸಂಖ್ಯೆ ಹೆಚ್ಚಿಸುತ್ತದೆ ಹಾಗೂ ಪೌಷ್ಟಿಕಾಂಶ ಕೊರತೆ ಹೆಚ್ಚಿಸುತ್ತದೆ ಎಂಬ ಅಂಶ ಗಳನ್ನು ಶಿಕ್ಷಣ ತಜ್ಞರು ಸಿದ್ದರಾಮಯ್ಯ ಗಮನಕ್ಕೆ ತಂದರು. ಈ ಎಲ್ಲ ಅಂಶ ಇಟ್ಟುಕೊಂಡು ವಿಧಾನಸಭೆ ಯಲ್ಲಿ ರ್ಚಚಿಸುವುದಾಗಿ ಸಿದ್ದರಾಮಯ್ಯ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net