ನೇಕಾರರ ಅಭಿವೃದ್ಧಿಗೆ 81 ಕೋಟಿ ರೂ ಅನುದಾನ : ಸಚಿವ ಶಿವಾನಂದ ಪಾಟೀಲ್

Minister Shivanand Patil
Published on

ವಿಜಯವಾಣಿ ಸುದ್ದಿಜಾಲ, ಬೆಂಗಳೂರು:
ನೇಕಾರರ ಅಭಿವೃದ್ಧಿಗೆ 81 ಕೋಟಿ ರೂ ಅನುದಾನ ನೀಡಲಾಗುವುದು ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಬ್ಯಾಂಕ್ವೆಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ 10ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೇಕಾರರ ಅಭಿವೃದ್ಧಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ಮೂಲಕ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕಳೆದ ಸಾಲಿನಲ್ಲಿ ನೇಕಾರ ಪ್ಯಾಕೇಜ್ ಯೋಜನೆಯಡಿ ರೂ.102 ಕೋಟಿ ಅನುದಾನ ವಿನಿಯೋಗಿಸಲಾಗಿದೆ. ಈ ಸಾಲಿನಲ್ಲಿ ನೇಕಾರ ಪ್ಯಾಕೇಜ್ ಯೋಜನೆಯಡಿ ರೂ.10 ಕೋಟಿ ಹಾಗೂ ನೇಕಾರ ಸಮ್ಮಾನ್ ಯೋಜನೆಯಡಿ 81 ಕೋಟಿ ರೂ ಅನುದಾನ ನಿಗದಿಪಡಿಸಲಾಗಿದೆ ಎಂದರು.
ನೇಕಾರರ ಸಮ್ಮಾನ್ ಯೋಜನೆಯಡಿ 2022-23 ನೇ ಸಾಲಿನಲ್ಲಿ 45,782 ಕೈಮಗ್ಗ ನೇಕಾರರಿಗೆ ತಲಾ 5 ಸಾವಿರಗಳಂತೆ 23 ಕೋಟಿ ಪರಿಹಾರ, 2023-24 ನೇ ಸಾಲಿನಲ್ಲಿ 44,406 ಕೈಮಗ್ಗ ನೇಕಾರರಿಗೆ 22 ಕೋಟಿ ರೂ ಪರಿಹಾರ ಧನ ನೇರವಾಗಿ ನೇಕಾರರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದರು.
ವಿದ್ಯುತ್ ಮಗ್ಗ ನೇಕಾರರು, ಮಗ್ಗ ಪೂರ್ವ ಘಟಕಗಳ ಕೆಲಸಗಾರರು ಸೇರಿದಂತೆ ಎಲ್ಲಾ ನೇಕಾರರಿಗೆ 1.17 ಲಕ್ಷ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ನೇಕಾರರ ಮಕ್ಕಳ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಕಳೆದ ಸಾಲಿನಲ್ಲಿ 4478 ವಿದ್ಯಾರ್ಥಿಗಳಿಗೆ 2.24 ಕೋಟಿ ರೂ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದರು.
ನೇಕಾರಿಕೆ ಉದ್ದೇಶಕ್ಕಾಗಿ ಶೇ.1 ಬಡ್ಡಿ ದರದಲ್ಲಿ 2 ಲಕ್ಷಗಳವರೆಗೆ, ಶೇ.3ರ ಬಡ್ಡಿಯಲ್ಲಿ 2 ಲಕ್ಷ ದಿಂದ 5ಲಕ್ಷ ತನಕ ನೀಡುವ ಸಾಲಕ್ಕೆ ಬಡ್ಡಿ ಸಹಾಯಧನವಾಗಿ 46 ನೇಕಾರರ ಸಹಕಾರ ಸಂಘ, ಸಹಕಾರ ಬ್ಯಾಂಕ್‌ಗಳಿಗೆ 1.93 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದರು.
10 ಹೆಚ್.ಪಿ ವಿದ್ಯುತ್ ಸಂಪರ್ಕ ಪಡೆದ ವಿದ್ಯುತ್ ಮಗ್ಗ ಹಾಗೂ ಮಗ್ಗಪೂರ್ವ ಘಟಕಗಳಿಗೆ ಉಚಿತವಾಗಿ ವಿದ್ಯುತ್ ಪೂರೈಸಲಾಗುತ್ತಿದೆ ಹಾಗೂ 10 ರಿಂದ 20 ಎಚ್.ಪಿ. ತನಕ ವಿದ್ಯುತ್ ಮಗ್ಗ ಹಾಗೂ ಮಗ್ಗಪೂರ್ವ ಘಟಕಗಳಿಗೆ ಪ್ರತಿ ಯೂನಿಟ್‌ಗೆ 1.25 ರಿಯಾಯಿತಿ ದರದಲ್ಲಿ ಮಾಸಿಕ ಗರಿಷ್ಠ 500 ಯೂನಿಟ್ ವಿದ್ಯುತ್ ಒದಗಿಸಲಾಗುತ್ತಿದೆ. ಕಳೆದ ಸಾಲಿನಲ್ಲಿ ವಿದ್ಯುತ್ ಸಹಾಯಧನ ಯೋಜನೆಯಡಿ ಎಸ್ಕಾಂಗಳಿಗೆ 153 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದರು.
ಎಸ್‌ಸಿಎಸ್ ಪಿ, ಟಿಎಸ್ಪಿ ಎಸ್ ಎಂಇ ಜವಳಿ ಘಟಕ ಸ್ಥಾಪನೆ ಯೋಜನೆಯಡಿ ಪರಿಶಿಷ್ಟ ಜಾತಿ ಪಂಗಡದ ಉದ್ಯಮಶೀಲರನ್ನು ಪ್ರೋತ್ಸಾಹಿಸಲು ರೂ.35 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೈಮಗ್ಗದ ನೇಯ್ಗೆಗೆ ತನ್ನದೇ ಆದ ಮಹತ್ವತದೆ ಇದೆ. ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ಶಾಸಕ ರಿಜ್ವಾನ್ ಹರ್ಷದ್ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕಾವೇರಿ ಹ್ಯಾಂಡ್‌ಲೂಮ್ ಅಧ್ಯಕ್ಷ ಬಿ.ಜೆ. ಗಣೇಶ್, ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷ ಕೀರ್ತಿ ಗಣೇಶ್, ಜವಳಿ ಇಲಾಖೆ ನಿರ್ದೇಶಕಿ ಜ್ಯೋತಿ ಮತ್ತಿತರರಿದ್ದರು.

ಪ್ರಶಸ್ತಿ ಪ್ರದಾನ
ರೇಷ್ಮೆ ವಿಭಾಗದಲ್ಲಿ ಬೆಂಗಳೂರು ನಗರ ಜಿಲ್ಲೆಯ ಆರ್.ಮಂಜುನಾಥ್ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರಮೇಶ್ ಅವರಿಗೆ ಪ್ರಥಮ, ದ್ವಿತೀಯ ಪ್ರಶಸ್ತಿ, ಹತ್ತಿ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಹನುಮಂತಮ್ಮ ಬಾಣದ ಮತ್ತು ದಾವಣಗೆರೆಯ ತುಕಾರಾಂ ಹನುಮಂತಪ್ಪ ವದ್ದಿ ಪ್ರಥಮ ಮತ್ತು ದ್ವಿತೀಯ ಪ್ರಶಸ್ತಿ, ಉಣ್ಣೆ ವಿಭಾಗದಲ್ಲಿ ಬಳ್ಳಾರಿಯ ತಿಪ್ಪೇಸ್ವಾಮಿ ಪ್ರಥಮ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಬಿ.ಜೆ. ಗಣೇಶ್, ರವೀಂದ್ರ ಕಲಬುರ್ಗಿ, ಜ್ಯೋತಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net