

ಬೆಂಗಳೂರು: ಚೀನಾಕ್ಕಿಂತ ಹೆಚ್ಚಾಗಿ ಛತ್ತೀಸಗಢ ಸೇರಿ ಹಲವು ರಾಜ್ಯಗಳ ಸ್ಪರ್ಧೆಯನ್ನು ಎದುರಿಸುತ್ತಿದ್ದು, ರಾಜ್ಯದ ಉಪಕ್ರಮಗಳು, ಉದ್ಯಮ-ವ್ಯವಹಾರ ಸ್ನೇಹಿ ನೀತಿಗಳನ್ನು ಅಮೆರಿಕ ಕಂಪನಿಗಳ ಜತೆ ಮಾತುಕತೆ ವೇಳೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ವಿಕಾಸಸೌಧದಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಸಚಿವ ಎಂ.ಬಿ.ಪಾಟೀಲ ಜತೆಗೂಡಿ ಮಾತನಾಡಿದ ಅವರು, ರಾಜ್ಯಕ್ಕೆ ಬಂಡವಾಳ ಆಕರ್ಷಿಸುವ ಸಲುವಾಗಿ ಹೊಸ ಹೊಸ ರೀತಿಯ ಪ್ರಯೋಗಗಳನ್ನು ಮಾಡುತ್ತಿದ್ದು, ಅದರಲ್ಲಿ ಈ ಅಮೆರಿಕ ಭೇಟಿಯೂ ಸೇರಿದೆ.
ಬದಲಾಗುತ್ತಿರುವ ಭೌಗೋಳಿಕ, ರಾಜಕೀಯ ಪರಿಸ್ಥಿತಿಯಲ್ಲಿ ಅಮೆರಿಕದ ಉದ್ಯಮಿಗಳು ಭಾರತದಲ್ಲಿ ಮುಖ್ಯವಾಗಿ ಕರ್ನಾಟಕದಲ್ಲಿ ಹೂಡಿಕೆಗೆ ಆಸಕ್ತಿ ಹೊಂದಿವೆ. ದೇಶ ಹೊರ-ಒಳಗಿನ ಪೈಪೋಟಿಯನ್ನು ಸಮರ್ಥವಾಗಿ ನಿಭಾಯಿಸಿ, ರಾಜ್ಯದತ್ತ ಉದ್ಯಮ ಹಾಗೂ ಹೂಡಿಕೆದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದೇವೆ ಎಂದರು.
ಉದ್ಯಮಗಳ ಬೇಡಿಕೆಗೆ ಅನುಗುಣವಾಗಿ ನುರಿತ ಮಾನವ ಸಂಪನ್ಮೂಲ ಪೂರೈಕೆ, ರಾಜ್ಯದ ಎಲ್ಲ ಭಾಗಗಳಿಗೆ ಸಮಾನ ಅವಕಾಶ ನೀಡುವ ಉದ್ದೇಶದಿಂದ ಪ್ರಾದೇಶಿಕ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರಿನ ಮೇಲೆ ಒತ್ತಡ ಹೆಚ್ಚಿದೆ. ಬೇರೆ ಪ್ರದೇಶಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ ಎನ್ನುವುದು ಸರ್ಕಾರದ ಗಮನಕ್ಕಿದೆ. ಸಿಎಂ ಸೂಚನೆಯಂತೆ ತಾವು ಸೇರಿ ಉನ್ನತ ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರನ್ನು ಒಳಗೊಂಡ ಸಮಿತಿ ರಚನೆಯಾಗಿದೆ.
ಉದ್ಯಮ-ವ್ಯವಹಾರ ಅಭಿವೃದ್ಧಿಯಲ್ಲಿ ಸಮಾನತೆ ಸಾಧಿಸಲು ಆಯಾ ಪ್ರದೇಶಕ್ಕೆ ಅನುಗುಣವಾದ ಸೆಕ್ಟರ್‌ಗಳನ್ನು ಗುರುತಿಸಲಾಗಿದೆ. ಹಾಗೆಯೇ ಸೃಜನೆಯಾಗುವ ಉದ್ಯೋಗಗಳು ಎಲ್ಲ ಭಾಗದ ಯುವ ಜನರಿಗೆ ಲಭಿಸಲೆಂದು ಕಾರ್ಯತಂತ್ರ ರೂಪಿಸಲಾಗಿದೆ. ಆರು ತಿಂಗಳೊಳಗೆ ಪ್ರದೇಶವಾರು ಕೌಶಲ್ಯಾಭಿವೃದ್ಧಿ ಕೇಂದ್ರಗಳು ಸ್ಥಾಪನೆಯಾಗಲಿವೆ ಎಂದರು.
ಕೃತಕ ಬುದ್ಧಿಮತ್ತೆ, ಲೈಫ್ ಸೈನ್ಸ್, ಮೆಡ್ ಟೆಕ್, ಮಷಿನ್ ಲರ್ನಿಂಗ್, ನವೋದ್ಯಮ ಇತ್ಯಾದಿ ಉದಯೋನ್ಮುಖ ತಂತ್ರಜ್ಞಾನಗಳ ಬೆಳವಣಿಗೆ, ಭವಿಷ್ಯದ ಅವಶ್ಯಕತೆಗೆ ಅನುಗುಣವಾಗಿ ರಾಜ್ಯದ ಯುವಜನರನ್ನು ಸಜ್ಜುಗೊಳಿಸಲು ತೀರ್ಮಾನಿಸಲಾಗಿದೆ.
ಇಂಜಿನಿಯರ್‌ಗಳಿಗೆ ತರಬೇತಿ ನೀಡುವ ಸಂಬಂಧ ಎಎಂಡಿ ಸಂಸ್ಥೆ ಜತೆಗೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಳ್ಳಲಿದೆ. ಈ ಸಂಸ್ಥೆಯು 800 ಇಂಜಿನಿಯರ್‌ಗಳನ್ನು ಭಾರತದಲ್ಲಿ ನೇಮಕ ಮಾಡಿಕೊಳ್ಳಲಿದೆ ಎಂದರು.
ನಾವೀನ್ಯತಾ ಸೂಚ್ಯಂಕದಲ್ಲಿ ಕರ್ನಾಟಕ 18ನೇ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ 10ರೊಳಗೆ ಸ್ಥಾನ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇವೆ. ಬೆಂಗಳೂರಿನಲ್ಲಿ ಜಾಗತಿಕ ನವೋದ್ಯಮ ಸಮಾವೇಶ ಮುಂದಿನ ವರ್ಷ ನಡೆಯಲಿದೆ.
ಜೈವಿಕ ವಿನ್ಯಾಸ, ಜೈವಿಕ ತಂತ್ರಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿ ಘಟಕ ವಿಸ್ತರಣೆ, ಜಾಗತಿಕ ಕೆಪೆಬಿಲಿಟಿ ಸೆಂಟರ್‌ಗಳ ಸ್ಥಾಪನೆ, ಕೌಶಲ್ಯಾಭಿವೃದ್ಧಿ-ಉದ್ಯಮಶೀಲತೆ ಮುಂತಾದವುಗಳತ್ತ ಆಸಕ್ತಿ ವ್ಯಕ್ತವಾಗಿದೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದರು.