

ಬೆಂಗಳೂರು: ಬೆಂಗಳೂರು ನಗರ ಪೊಲೀಸರು ‘ನೆರೆ ಹೊರೆ ಕಾವಲು ಪಡೆ’ ಶುರು ಮಾಡಿದ್ದು, ಇದರಿಂದ ಖಾಕಿ ಮತ್ತು ಸ್ಥಳೀಯರಲ್ಲಿ ಉತ್ತಮ ಬಾಂಧವ್ಯ ಮತ್ತು ನಂಬಿಕೆ ಮೂಡುತ್ತಿದೆ.
ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರ ಮೇಲ್ವಿಚಾರಣೆಯಲ್ಲಿ ಪಶ್ಚಿಮ ವಿಭಾಗದಲ್ಲಿ ಶುರುವಾಗಿರುವ ‘ನೆರೆ ಹೊರೆ ಕಾವಲು ಪಡೆ’ ನಗರದ ಎಲ್ಲ ವಿಭಾಗದಲ್ಲೂ ವಿಸ್ತರಣೆ ಆಗುತ್ತಿದೆ.
ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಐದರಿಂದ ಹತ್ತು ಮಂದಿ ಸ್ಥಳೀಯ ಸ್ವಯಂಸೇವಕರನ್ನು ಪೂರ್ವಪರ ಪರಿಶೀಲನೆ ಮಾಡಿ ನೋಂದಣಿ ಮಾಡಿಕೊಳ್ಳಲಾಗಿದೆ. ಅವರಿಗೆ ನಾವು-ನೀವು ಎಂಬ ವಿನೂತನ ಯೋಜನೆ ಬಗ್ಗೆ ಮಾಹಿತಿ ಕೊಟ್ಟು ಪೊಲೀಸರೊಂದಿಗೆ ನಿರಂತರ ಸಂಪರ್ಕ ಇರುವಂತೆ ತರಬೇತಿ ನೀಡಲಾಗುತ್ತಿದೆ.
ನೋಂದಣಿ ಮಾಡಿಕೊಂಡಿರುವ ಸ್ವಯಂ ಸೇವಕರು ಅವರಿಗೆ ಸಮಯ ಸಿಕ್ಕಾಗ ಬಂದು ಪೊಲೀಸ್ ಜತೆಗೆ ಸೇವೆ ಮಾಡಬಹುದು. ರಾತ್ರಿಗಸ್ತು ಪೊಲೀಸ್ ಸಿಬ್ಬಂದಿ ಜತೆಗೆ ಒಬ್ಬರನ್ನು ನಿಯೋಜನೆ ಮಾಡಲಾಗುತ್ತಿದೆ. ರಾತ್ರಿಗಸ್ತು ತಿರುಗುವ ಮೂಲಕ ಏರಿಯಾದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗುತ್ತದೆ. ಸ್ವಯಂ ಸೇವಕರಿಗೆ ಸ್ಥಳೀಯ ಸಮಸ್ಯೆ ಮತ್ತು ಕೆಲ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಇರಲಿದೆ.
ಅಂತಹ ಮಾಹಿತಿ ಪಡೆದು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲು ಪೊಲೀಸರಿಗೆ ಅನುಕೂಲ ಆಗುತ್ತಿದೆ. ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಅನುಕೂಲವಾಗುತ್ತಿದೆ. ಕೆಲವೊಂದು ಸಮಯದಲ್ಲಿ ಸ್ಥಳೀಯವಾಗಿ ಇರುವ ಸಮಸ್ಯೆಗಳು ಸ್ವಯಂಸೇವಕರಿಗೆ ಹೆಚ್ಚಿನ ಮಾಹಿತಿ ಇರಲಿದೆ. ಅದನ್ನು ತಿಳಿದು ಬೇಕಾದ ಕ್ರಮ ಕೈಗೊಳ್ಳಲಾಗುತ್ತಿದೆ.
ರಾತ್ರಿ ನಗರದ ಆಯಕಟ್ಟಿ ಪ್ರದೇಶದಲ್ಲಿ ಪೊಲೀಸರು ಮಾಡುವ ನಾಕಾಬಂದಿ ವೇಳೆಯೂ ಸ್ವಯಂ ಸೇವಕರನ್ನು ನಿಯೋಜನೆ ಮಾಡಿಕೊಳ್ಳಲಾಗುತ್ತಿದೆ. ವಾಹನ ತಪಾಸಣೆ ನಡೆಸುವಾಗ ಸ್ಥಳೀಯರು ಇದ್ದರೇ ಸಾರ್ವಜನಿಕರು ಆತ್ಮವಿಶ್ವಾಸದಿಂದ ನಡೆದುಕೊಳ್ಳಲಿದ್ದಾರೆ. ಜತೆಗೆ ಅಪರಾಧ ಚಟುವಟಿಕೆಗಳ ಬಗ್ಗೆ ಸ್ವಯಂಸೇವಕರು ಜಾಗೃತಿ ಮೂಡಿಸುವುದರಿಂದ ಜನರ ಮನಸ್ಸಿಗೆ ಹೋಗಲಿದೆ.
ಸರಗಳ್ಳತನ, ಮನೆಗಳ್ಳತನ, ವಾಹನ ಕಳವು ಸೇರಿದಂತೆ ಅಪರಾಧ ಚಟುವಟಿಕೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ನೆರೆ ಹೊರೆ ಕಾವಲು ಪಡೆಯನ್ನು ಬಳಸಿಕೊಳ್ಳಲಾಗುತ್ತಿದೆ. ಒಟ್ಟಾರೆ ಪೊಲೀಸರು ಮತ್ತು ಜನರ ನಡುವೆ ಬಾಂಧವ್ಯ ವೃದ್ಧಿಯಾಗಲು ನೆರೆ-ಹೊರೆ ಕಾವಲು ಪಡೆ ಅನುಕೂಲವಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಂದೋಬಸ್ತ್‌ಗೂ ಬಳಕೆ :
ವಿಶೇಷ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಬಂದೋಬಸ್ತ್ ವೇಳೆಯೂ ಸ್ವಯಂ ಸೇವಕರ ಸೇವೆಯನ್ನು ಪಡೆಯಲಾಗುತ್ತಿದೆ. ಏಕೆಂದರೇ ಸ್ಥಳೀಯವಾಗಿ ನಡೆಯುವ ಅಣ್ಣಮ್ಮ, ಕರಕ, ಊಟ ಹಬ್ಬ ಸೇರಿದಂತೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಹೆಚ್ಚಾಗಿ ಸ್ಥಳೀಯರಿಗೆ ಮಾಹಿತಿ ಇರಲಿದೆ. ಇಂತಹ ಸಂದರ್ಭದಲ್ಲಿ ಅವರನ್ನು ಪೊಲೀಸರೊಂದಿಗೆ ಜೋಡಿಸಿಕೊಂಡು ಬಂದೋಬಸ್ತ್ ಏರ್ಪಡಿಸಿದರೇ ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗಲಿದೆ.
ಸಾಮಾಜಿಕ ಸೇವೆ, ಪೊಲೀಸಿಂಗ್ :
ಐಟಿ-ಬಿಟಿಯಲ್ಲಿ ನೌಕರಿ ಮಾಡುವರಿಂದ ಸಣ್ಣ ನೌಕರಿ ಮಾಡುವರು ಸಹ ನೆರೆ-ಹೊರೆ ಪೊಲೀಸಿಂಗ್‌ನಲ್ಲಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಸೇವೆ ಮಾಡಬೇಕೆಂಬ ಕನಸು ಕಂಡವರು ಮತ್ತು ಪೊಲೀಸ್ ನೌಕರಿಗೆ ಸೇರಬೇಕೆಂದುಕೊಂಡು ಆಗದೆ ಇದ್ದವರು ಹೆಚ್ಚಾಗಿ ಈ ಸೇವೆಯಲ್ಲಿ ಭಾಗವಹಿಸುತ್ತಿದ್ದಾರೆ. ಇಂತವರಿಗೆ ಪೊಲೀಸ್ ಮಾಸಿಕ ಸಭೆಯಲ್ಲಿ ಕರೆದು ಪ್ರಶಂಸನ ಪತ್ರ ಕೊಟ್ಟು ಗೌರವಿಸುವ ಜತೆಗೆ ಇತರರಿಗೂ ಈ ನೆರೆ-ಹೊರೆ ಪೊಲೀಸಿಂಗ್‌ನಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗುತ್ತಿದೆ.
ಪೊಲೀಸರೂ ಜಾಗೃತಿ :
ಸ್ವಯಂಸೇವಕರು ಒಳಗೊಂಡ ನೆರೆ ಹೊರೆ ಕಾವಲು ಪಡೆಯೊಂದಿಗೆ ಕರ್ತವ್ಯ ನಿರ್ವಹಿಸುವ ಪೊಲೀಸರೂ ಜಾಗೃತವಾಗಿರುತ್ತಾರೆ. ಪೊಲೀಸರು ಸಹ ಜನರೊಂದಿಗೆ ನಡೆದುಕೊಳ್ಳುವ ಸ್ವಭಾಗ ಬದಲಾಗುತ್ತದೆ. ಭ್ರಷ್ಟಾಚಾರ, ಅಮಾಯಕರಿಗೆ ಬೆದರಿಸಿ ಸುಲಿಗೆ ಮಾಡುವುದು ಒಂದಿಷ್ಟು ತಪ್ಪಲಿದೆ. ಅಲ್ಲದೆ, ಅವರ ಮೇಲಿನ ಭ್ರಷ್ಟಾಚಾರ ಆರೋಪ ದೂರವಾಗಿ ನಂಬಿಕೆ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನೆರೆ ಹೊರೆ ಕಾವಲು ಪಡೆಯನ್ನು ರಾತ್ರಿಗಸ್ತು, ನಾಕಬಂದಿ ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಬಳಸಲಾಗುತ್ತಿದೆ. ಪೊಲೀಸರು ಮೇಲಿನ ನಂಬಿಕೆ ಜನರಲ್ಲಿ ಹೆಚ್ಚಾಗುತ್ತಿದೆ.
ಬಿ. ದಯಾನಂದ್-ನಗರ ಪೊಲೀಸ್ ಆಯುಕ್ತ