

ಕೊಳ್ಳೇಗಾಲ : ಹುಬ್ಬಳಿಯ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಬರ್ಬರ ಹತ್ಯೆ ಖಂಡಿಸಿ ಚಾಮರಾಜನಗರದಲ್ಲಿ ಏ.24ರಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆ ಸಂಬಂಧ ಪಟ್ಟಣದ ಶ್ರೀಗುರುಮಲ್ಲೇಶ್ವರ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಭಾನುವಾರ ಪೂರ್ವಭಾವಿ ಸಭೆ ಏರ್ಪಡಿಸಲಾಗಿತ್ತು.
ಸಭೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪದಾಧಿಕಾರಿಗಳು ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಜರಾಗಿ ಪ್ರತಿಭಟನೆ ಕುರಿತು ಸುದೀರ್ಘವಾಗಿ ಚರ್ಚಿಸಿದರು.
ಮಹಾಸಭಾದ ಜಿಲ್ಲಾಧ್ಯಕ್ಷ ಮೂಡಲಪುರ ನಂದೀಶ್ ಮಾತನಾಡಿ, ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಹತ್ಯೆ ಖಂಡನೀಯ. ಚಾಕುವಿನಿಂದ 9 ಬಾರಿ ಇರಿದು ಆ ಹೆಣ್ಣು ಮಗಳನ್ನು ಕ್ರೂರ ಮನಸ್ಥಿತಿಯಿಂದ ಕೊಂದವನಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಒತ್ತಾಯಿಸಿ ಏ.24ರಂದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದೇವೆ. ಚಾಮರಾಜೇಶ್ವರ ದೇವಾಲಯದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ ಜಿಲ್ಲಾಡಳಿತ ಭವನಕ್ಕೆ ತೆರಳಿ ಮನವಿ ಸಲ್ಲಿಸಲಾಗುತ್ತದೆ.
ಜಿಲ್ಲೆಯ ವಿವಿಧೆಡೆಯಿಂದ ಸುಮಾರು 10 ಸಾವಿರ ಜನರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ಆಗುತ್ತಿರುವ ದೌರ್ಜನ್ಯ ತಡೆಯಲು ಈ ಹೋರಾಟ ರೂಪಿಸುತ್ತಿದ್ದೇವೆ. ತಪ್ಪಿತಸ್ಥನಿಗೆ ಗಲ್ಲು ಶಿಕ್ಷೆ ಆಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲ ಸಮಾಜದ ಜನರು ಆಗಮಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕು. ಮತ್ತೆ ಇಂತಹ ಹೀನ ಕೃತ್ಯ ಯಾವ ಸಮುದಾಯದವರ ಮೇಲು ನಡೆಯಬಾರದು ಎಂದರು.