

ಶ್ರೀಕೃಷ್ಣ ರಜಕನನ್ನು ಸಂಹಾರ ಮಾಡಿ ಮುಂದೆ ಹೊರಟಿದ್ದಾನೆ. ಅಲ್ಲಿ ಒಬ್ಬ ಕ್ಷೌರಿಕ ಎದುರು ಬರುತ್ತಾನೆ. ಕೇಶಾಲಂಕಾರ ಮಾಡುವುದು ಅವನ ಕಸಬು. ನಾನಾವಿಧ ವನಸ್ಪತಿಗಳಿಂದ ಗೈರಿಕಾದಿ ಧಾತುಗಳು, ಅವುಗಳಿಂದ ತಯಾರಿಸಿದ ಬಣ್ಣಗಳು ಇತ್ಯಾದಿಗಳಿಂದ ಅಲಂಕಾರ ಮಾಡುವುದು, ಒಳ್ಳೆಯ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡುವ ಕಲೆ ಕ್ಷೌರಿಕರಿಗೆ ಇರುತ್ತಿತ್ತು. ಯಾವ ಯಾವ ಗೋಪಾಲಕರಿಗೆ ಹೇಗೆ ಕೇಶವಿನ್ಯಾಸ ಬೇಕೋ ಹಾಗೆ ಮಾಡಲು ಆತನಿಗೆ ಕೃಷ್ಣ ಆದೇಶ ಮಾಡಿದ್ದಾನೆ.
ಕೊನೆಗೆ ಶ್ರೀಕೃಷ್ಣ ತಾನೂ ಕ್ಷೌರ ಮಾಡಿಸಿಕೊಂಡಿದ್ದಾನೆ. ಭಗವಂತನಿಗೆ ನಮ್ಮಂತಹ ಕೂದಲು ಇಲ್ಲವೇ ಇಲ್ಲ. ಕತ್ತರಿಸಿದ ಕೂದಲುಗಳು ಕೆಳಗೆ ಬಿದ್ದವು ಎಂದರೆ ಏನು ಅರ್ಥ? ಶ್ರೀಕೃಷ್ಣನಿಂದ ಅಭಿನ್ನವಾದ ಅವನ ಅವಯವಗಳು ಕೂದಲುಗಳು ಹೇಗೆ ಬಿದ್ದವು?. ಶ್ರೀಮನ್ಮಧ್ವಾಚಾರ್ಯರು ಈ ಸಮಸ್ಯೆಗೆ ಉತ್ತರ ನೀಡುತ್ತಾರೆ: ‘ಶ್ರೀಕೃಷ್ಣನಿಗೆ ದೇಹದೊಳಗೆ ತೆಗೆದುಕೊಳ್ಳುವುದು ಅಥವಾ ಹೊರಗೆ ಹಾಕುವುದು ಎನ್ನುವುದಾಗಲೀ ಸರ್ವಥಾ ಇಲ್ಲ. ಹಾಗೆಯೇ ಬೇಡವಾದ ಕೂದಲು, ಉಗುರು ಕತ್ತರಿಸುವುದಾಗಲೀ ಇಲ್ಲ. ಇದು ಕೇವಲ ಲೀಲೆ ಅಷ್ಟೇ. ಕೂದಲನ್ನು ಕ್ಷೌರ ಮಾಡುವವನು ಕತ್ತರಿಸಿದ ಎಂದರೆ ದೇವರು ತಾನೇ ತನ್ನ ಕೂದಲು ಹಾಗೂ ಉಗುರುಗಳನ್ನು ಸಣ್ಣದು ಮಾಡಿಕೊಂಡ ಎಂದು ಅರ್ಥ. ಆಮೆ ತನಗೆ ಬೇಕು ಎನಿಸಿದಾಗ ತನ್ನ ಕಾಲುಗಳನ್ನು ಹೊರಗೆ ಚಾಚುತ್ತದೆ. ಬೇಡ ಎನಿಸಿದಾಗ ಒಳಗೆ ತೆಗೆದುಕೊಳ್ಳುತ್ತದೆ. ಹಾಗೆ ತನ್ನ ಕೂದಲುಗಳನ್ನು ಸಣ್ಣ ಮಾಡಿದ್ದಾನೆ ಶ್ರೀಕೃಷ್ಣ. ಕೆಳಗೆ ಕೂದಲು ಬಿದ್ದದ್ದು ಕಂಡಿದೆಯಲ್ಲ ಎಂದರೆ ಹೇಗೆ ಸಿನಿಮಾದಲ್ಲಿ ಒಬ್ಬರು ಒಬ್ಬರನ್ನು ಹೊಡೆದಾಗ ಕುತ್ತಿಗೆ ಕತ್ತರಿಸಿ ಬಿದ್ದಂತೆ. ಅಲ್ಲಿ ಕುತ್ತಿಗೆ ಬಿದ್ದದ್ದು ನಿಜವೇ ಅಲ್ಲ. ಹಾಗೆ ಶ್ರೀಕೃಷ್ಣ ಪರಮಾತ್ಮ ಬೇರೆ ಕೂದಲುಗಳನ್ನು ಸೃಷ್ಟಿ ಮಾಡಿ ಕೆಳಗೆ ಬೀಳಿಸಿ ತೋರಿಸಿದ. ನೇಹನಾನಾಸ್ತಿ ಕಿಂಚನ - ಭಗವಂತನಿಗೂ ಅವನ ಅವಯವಗಳಿಗೂ ಅತ್ಯಂತ ಅಭೇದ ಇದ್ದ ಕಾರಣ ಹೀಗೆ ಹೇಳಬೇಕು’ ಎಂದು ವಾದಿರಾಜಸ್ವಾಮಿಗಳು ವಿವರಿಸುತ್ತಾರೆ.