ಒತ್ತುವರಿ ತೆರವಿಗೆ ನಿರ್ಲಕ್ಷ್ಯ: ಅಧಿಕಾರಿಗಳಿಬ್ಬರ ಅಮಾನತುಗೊಳಿಸಿದ ನಗರ ಡಿಸಿ

Vijayavani's top news of the day
Published on

ಬೆಂಗಳೂರು: ಯಲಹಂಕ ತಾಲೂಕಿನ ಬೆಟ್ಟಹಲಸೂರು ವೃತ್ತದ ಗ್ರಾಮ ಆಡಳಿತ ಅಧಿಕಾರಿ ರೂಪೇಶ್ ಹಾಗೂ ತರಬನಹಳ್ಳಿ ವೃತ್ತ ಮತ್ತು ಹುತ್ತಹಳ್ಳಿ ವೃತ್ತದಲ್ಲಿ ನಿಯೋಜಿತ ಗ್ರಾಮ ಅಡಳಿತ ಅಧಿಕಾರಿ ಬಿ.ಎ. ರಘುನಾಥ್ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಲು ವಿಫಲರಾಗಿರುವ ಹಿನ್ನೆಲೆ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ಅವರು ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಜಾಲ-2 ಹೋಬಳಿಯ ಬೆಟ್ಟಹಲಸೂರು ಗ್ರಾಮ, ನೆಲಕುಂಟೆ ಗ್ರಾಮ ಹಾಗೂ ಚಿಕ್ಕಜಾಲ ಗ್ರಾಮದಲ್ಲಿ ಸರ್ಕಾರಿ ಗೋಮಾಳದ ಒತ್ತುವರಿ ತೆರವುಗೊಳಿಸುವ ವೇಳೆ ಸಮಪರ್ಕವಾಗಿ ಉತ್ತರಿಸದೆ ಬೇಜವಾಬ್ದಾರಿ ಮತ್ತು ನಿರ್ಲಕ್ಷತೆ ತೋರಿದ್ದರು. ಇದನ್ನಾಧರಿ ಇಬ್ಬರನ್ನೂ ಅಮಾನತುಗೊಳಿಸಲಾದೆ. ವಿಚಾರಣೆ ಪೂರ್ಣವಾಗುವವರೆಗೂ ಸಕ್ಷಮ ಪ್ರಾಧಿಕಾರ ಅನುಮತಿ ಇಲ್ಲದೆ ಕೇಂದ್ರ ಕಾರ್ಯ ಸ್ಥಾನವನ್ನು ಬಿಡುವಂತಿಲ್ಲ ಎಂದು ಸೂಚಿಸಲಾಗಿದೆ.

ಇಬ್ಬರಿಗೆ ಕಾರಣ ಕೇಳಿ ನೋಟಿಸ್ ಜಾರಿ:

ಯಲಹಂಕ ತಾಲ್ಲೂಕಿನ ಜಾಲ-2 ಹೋಬಳಿಯ ಹುಣಸಮಾರನಹಳ್ಳಿ ವೃತ್ತದ ಗ್ರಾಮ ಆಡಳಿತ ಅಧಿಕಾರಿ ಹಾಗೂ ಬೆಟ್ಟಹಲಸೂರು ವೃತ್ತದಲ್ಲಿ ರಾಜಸ್ವ ನಿರೀಕ್ಷಕರಾಗಿ ಹೆಚ್ಚುವರಿ ಪ್ರಭಾರದಲ್ಲಿ ನಿಯೋಜನೆಗೊಂಡಿರುವ ರಂಗೇಗೌಡ ಹಾಗೂ ದೊಡ್ಡಜಾಲ ವೃತ್ತದ ರಾಜಸ್ವ ನಿರೀಕ್ಷಕ ಪುರುಷೋತ್ತಮ್ ಅವರು ಸರ್ಕಾರಿ ಸ್ವತ್ತು ಸಂರಕ್ಷಿಸುವಲ್ಲಿ ವಿಫಲರಾಗಿದ್ದು, ಈ ಇಬ್ಬರಿಗೂ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net