

‘ದುಷ್ಟರ ದೌರ್ಜನ್ಯದ ಅಟ್ಟಹಾಸಕ್ಕೆ ಸುಶಿಕ್ಷಿತರು ಮೌನವಹಿಸಿ ನಿರ್ಲಕ್ಷಿಸಿದರೆ ಅದರ ಪರಿಣಾಮ ನಮ್ಮ ಸಂಸ್ಕೃ ಸಂಪ್ರದಾಯವನ್ನೇ ಹಾಳುಮಾಡುತ್ತದೆ’ - ಹೀಗೆಂದಿದ್ದಾನೆ ಫ್ರೆಂಚ್ ಚಕ್ರವರ್ತಿ ನೆಪೋಲಿಯನ್. ಈ ಮಾತು ಸಾರ್ವಕಾಲಿಕ ಸತ್ಯ. ಆದಿಕಾಲದಲ್ಲಿ ದೇವಿ ಭಾಗವತದಲ್ಲಿ ಬರುವ ಮಧು-ಕೈಟಭ, ಶುಂಭ-ನಿಶುಂಭ, ಮಹಿಷಾಸುರ ಮೊದ ಲಾದ ರಾಕ್ಷಸರು ದೇವಾನುದೇವತೆಗಳಿಗೆ ಹಿಂಸೆ ಕೊಡುವದನ್ನು ನೋಡಿ ಜಗನ್ಮಾತೆ ಮೌನವಾಗಿರಲಿಲ್ಲ. ರಾಕ್ಷಸರ ಸಂಹಾರಕ್ಕಾಗಿ ಚಂಡಿ-ಚಾಮುಂಡಿ ರೂಪ ತಾಳಿದಳು. ದುಷ್ಟ ನಿಗ್ರಹ, ಶಿಷ್ಟ ಪರಿಪಾಲನೆ ಯಿಂದಾಗಿ ತನ್ನ ಆದ್ಯ ಕರ್ತವ್ಯ ಪೂರೈಸಿದಳು. ಇನ್ನು ವೇದ ಕಾಲದಲ್ಲಿ - ಹಿರಣ್ಯಾಂಬಕ, ಹಿರಣ್ಯಕಶ್ಯಪ ಮೊದಲಾದ ರಾಕ್ಷಸರನ್ನು ಸಂಹರಿಸಲು ಸ್ವತಃ ನಾರಾಯಣನೇ ವರಾಹ ರೂಪ ಧರಿಸಿ ಹಿರಣ್ಯಾಂಭಕನನ್ನು ಸಂಹರಿಸಿದ. ಅವನೇ ನಾರಸಿಂಹ ಅವತಾರ ತೊಟ್ಟು ಹಿರಣ್ಯಕಶ್ಯಪುವನ್ನು ಸಂಹಾರ ಮಾಡಿದ. ಅದರಂತೆ ಹಯಗ್ರೀವ ರೂಪಧರಿಸಿ ಹಯಗ್ರೀವ ರಾಕ್ಷಸನನ್ನು ಕೊಂದುಹಾಕಿದ.
ಸ್ವತಃ ಪರಮಾತ್ಮನೇ ತ್ರಿಪುರಗಳನ್ನೂ ಸಂಹರಿಸಿದ್ದ್ದೂ ಇದೆ. ರಾಕ್ಷಸರಾದ ವಿದ್ಯುನ್ಮಾಲಾ, ಕಮಲಾಕ್ಷ, ತಾರಕಾಕ್ಷ ಎಂಬ ಮೂವರು ರಕ್ಕಸರು ಅಂತರಿಕ್ಷದಲ್ಲಿ ಪಟ್ಟಣಗಳನ್ನು ಸೃಷ್ಟಿಸಿಕೊಂಡಿದ್ದರು. ಅಷ್ಟು ಮಾತ್ರವಲ್ಲದೆ ದೇವತೆಗಳಿಗೆಲ್ಲ ನಿರಂತರವಾಗಿ ಹಿಂಸೆ ಕೊಡುತ್ತಿದ್ದರು. ಅವರನ್ನು ನಿಗ್ರಹಿಸಲು ಪರಮಾತ್ಮನೇ ತನ್ನ ಹಣಿಗಣ್ಣನ್ನು ತೆರೆೆದು ತ್ರಿಪುರಗಳನ್ನು ಧ್ವಂಸಮಾಡಿದನು. ನಂತರ ರಾಮಾವತಾರದ ತ್ರೇತಾಯುಗದಲ್ಲಿ ಅನೇಕ ಋಷಿ-ಮುನಿಗಳ ತಪಸ್ಸಾಧನೆಗೆ ಯಜ್ಞ-ಯಾಗಾದಿಗಳಿಗೆ ಆತಂಕವನ್ನೊಡ್ಡುವ ತಾಟಕೀ, ಸುಬಾಹು, ಮಾರೀಚ ಮೊದಲಾದ ರಾಕ್ಷಸರ ಉಪಟಳ ಮಿತಿಮೀರಿತ್ತು.
ಆಗ ಸ್ವತಃ ವಿಶ್ವಾಮಿತ್ರರೇ ಮುಂದಾಗಿ ಶ್ರೀರಾಮ-ಲಕ್ಷ್ಮಣರನ್ನು ಕರೆತಂದು ಅವರಿಗೆ ಶಸ್ತ್ರವಿದ್ಯೆಯನ್ನು ಕಲಿಸಿ ನಂತರ ರಾಕ್ಷಸ ಸಂಹಾರ ಮಾಡಿಸಿದರು. ಮುಂದೆ ಸೀತಾಪಹರಣ ಪ್ರಸಂಗ ನಡೆಯುತ್ತದೆ. ಆಗ ಶ್ರೀರಾಮನು ರಾವಣ, ಇಂದ್ರಜಿತು, ಮೇಘದೂತ ಮೊದಲಾದ ರಾಕ್ಷಸರನ್ನು ಸಂಹರಿಸಿದನು. ಅಲ್ಲದೇ ಶಿಷ್ಟನಾದ ವಿಭೀಷಣನಿಗೆ ಲಂಕೆಯ ಪಟ್ಟ ಕಟ್ಟುತ್ತಾನೆ. ಇದೆಲ್ಲವೂ ತಿಳಿಸುವ ಅಂಶವೆಂದರೆ ಅನ್ಯಾಯವನ್ನು ನೋಡಿಯೂ ಮೌನವಾಗಿರುವದೆಂದರೆ ಅದು ಹೇಡಿತನವೇ ಸರಿ. ಅನ್ಯಾಯವನ್ನು ಸಹಿಸದೆ ಪ್ರತಿಕ್ರಿಯಿಸುವದು ಧೈರ್ಯವಂತರ ಲಕ್ಷಣ ಎಂಬುದೇ ಆಗಿದೆ.