

ಬೆಂಗಳೂರು: ತಮ್ಮ ಬೇಡಿಕೆ ಈಡೇರಿಸುವಲ್ಲಿ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ನ.8 ರಿಂದ ಕೆಲಸ ನಿರ್ವಹಿಸದೇ ಅಸಹಕಾರ ಚಳವಳಿ ನಡೆಸುವುದಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘ ಹೇಳಿದೆ.
ಚಳವಳಿಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಂಘ ಪತ್ರ ಬರೆದಿದೆ.
ಈ ಚಳವಳಿ ಸಂದರ್ಭದಲ್ಲಿ ಇಲಾಖೆಗೆ ಸಂಬಂಧಿಸಿದ ಎಲ್ಲ ಆನ್‌ಲೈನ್ ಸೇವೆಗಳನ್ನು ಸ್ಥಗಿತಗೊಳಿಸುತ್ತೇವೆ. ಮೇಲಧಿಕಾರಿಗಳು ಕರೆಯುವ ಸಭೆಗೂ ಗೈರು ಹಾಜರಾಗುತ್ತೇವೆ. ಆದರೆ ಜನರ ಮೂಲಭೂತ ಸೇವೆಗಳನ್ನು ಮಾತ್ರ ನೀಡುತ್ತೇವೆ ಎಂದು ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃಧ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜು ವಾರದ ತಿಳಿಸಿದ್ದಾರೆ.
ಸೆ.5 ರಂದು ತಾವು ಸಭೆ ನಡೆಸಿ ಜೇಷ್ಠತಾ ಪಟ್ಟಿ ಪ್ರಕಟಿಸುವುದು ಸೇರಿದಂತೆ ನಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದು, ಈವರೆಗೂ ಬೇಡಿಕೆ ಈಡೇರಿಲ್ಲ. ಹಾಗಾಗಿ ತಾವು ಮೊದಲ ಹಂತದಲ್ಲಿ ಅಸಹಕಾರ ಚಳವಳಿ ನಡೆಸಲು ನಿರ್ಧರಿಸಿರುವುದಾಗಿ ಪ್ರಿಯಾಂಕ್ ಖರ್ಗೆ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ. ಈ ಬಾರಿಯೂ ತಮ್ಮ ಬೇಡಿಕೆಗೆ ಸ್ಪಂದಿಸದೇ ಇದ್ದರೆ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಪಂಚಾಯಿತಿಗಳ ಮುಂದೆ ಅನಿರ್ದಿಷ್ಟ ಪ್ರತಿಭಟನೆ ಹಾಗೂ ಬೆಂಗಳೂರು ಚಲೋ ಕರೆ ಕೊಡುತ್ತೇವೆ ಎಂದು ಸಂಘದ ಅಧ್ಯಕ್ಷ ರಾಜು ವಾರದ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಬೇಡಿಕೆಗಳೇನು?:
-ಪಿಡಿಒಗಳ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಬೇಕು.
-ತಾಲೂಕು ಪಂಚಾಯಿತಿಗಳಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕ ಹುದ್ದೆಗೆ ಬಡ್ತಿ ನೀಡಬೇಕು.
-ಎಲ್ಲ ಪಿಡಿಒಗಳ ಹುದ್ದೆಗಳನ್ನು ಬಿ ವೃಂದಕ್ಕೆ ಮೇಲ್ದರ್ಜೆಗೇರಿಸಬೇಕು.
-ಅವಧಿ ಮುಗಿದ ಬಳಿಕ ವರ್ಗಾವಣೆ ಮಾಡಬಾರದು ಮತ್ತು ಬಾಧಿತ ನೌಕರರಿಗೆ ಸ್ಥಳ ನಿಯುಕ್ತಿ ಮಾಡಬೇಕು ಹಾಗೂ ವೇತನ ಬಿಡುಗಡೆ ಮಾಡಬೇಕು.