

ನವದೆಹಲಿ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್)- ಯುಜಿ 2024ರ ಕೌನ್ಸೆಲಿಂಗ್ ಅನ್ನು ಮುಂದಿನ ಸೂಚನೆಯವರೆಗೆ ಮುಂದೂಡಲಾಗಿದೆ. ನೀಟ್ ಯುಜಿ ಅಖಿಲ ಭಾರತ ಕೋಟಾ (ಎಐಕ್ಯೂ) ಸೀಟು ಕೌನ್ಸೆಲಿಂಗ್ ಜುಲೈ 6ರಂದು ಪ್ರಾರಂಭವಾಗಬೇಕಿತ್ತು. NEET UG 2024ರ ಕೌನ್ಸೆಲಿಂಗ್ನ ಹೊಸ ದಿನಾಂಕವನ್ನು ಶಿಕ್ಷಣ ಸಚಿವಾಲಯವು ಶೀಘ್ರದಲ್ಲೇ ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ.
ಶನಿವಾರದಿಂದ (ಜುಲೈ 6) ಪ್ರಾರಂಭವಾಗಬೇಕಿದ್ದ ನೀಟ್ ಯುಜಿ ಕೌನ್ಸೆಲಿಂಗ್ ಅನ್ನು ಮುಂದೂಡಲು ಸುಪ್ರೀಂಕೋರ್ಟ್ ನಿರಾಕರಿಸಿದ ನಂತರವೂ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಹಿಂದೆ ಕೌನ್ಸೆಲಿಂಗ್ ಪ್ರಕ್ರಿಯೆಯು 2024 ಜುಲೈ 6ರಂದು ಪ್ರಾರಂಭವಾಗಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸುಪ್ರೀಂಕೋರ್ಟ್ಗೆ ತಿಳಿಸಿತ್ತು. ಸಿಜೆಐ ಡಿವೈ ಚಂದ್ರಚೂಡ್ ಅವರ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಜುಲೈ 8ರಂದು ಹಲವು ನೀಟ್ ಯುಜಿ 2024 ಅರ್ಜಿಗಳನ್ನು ವಿಚಾರಣೆಗೆ ನಿಗದಿಪಡಿಸಿದೆ.
ಈ ಅರ್ಜಿಗಳಲ್ಲಿ, ಅರ್ಜಿದಾರರು ಪೇಪರ್ ಸೋರಿಕೆಯನ್ನು ಆರೋಪಿಸಿದ್ದರೆ, ಕೆಲವರು ಸಂಪೂರ್ಣ ಪರೀಕ್ಷೆಯನ್ನು ರದ್ದುಪಡಿಸಿ ವೈದ್ಯಕೀಯ ಪ್ರವೇಶಕ್ಕೆ ಮರುಪರೀಕ್ಷೆ ನಡೆಸುವಂತೆ ಕೋರಿದ್ದಾರೆ. ಇನ್ನು ಕೆಲವರು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ನಡತೆಯ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದಾರೆ.
ಅಲ್ಲದೆ ಸರ್ಕಾರಿ ಕಾಲೇಜುಗಳು, ಕೇಂದ್ರೀಯ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ 15 ಪ್ರತಿಶತ AIQ ಸೀಟುಗಳ ಅಡಿಯಲ್ಲಿ ನೀಟ್ ಯುಜಿ ಕೌನ್ಸೆಲಿಂಗ್, ನೌಕರರ ರಾಜ್ಯ ವಿಮಾ ನಿಗಮ (ESIC) ವೈದ್ಯಕೀಯ ಕಾಲೇಜುಗಳು ಮತ್ತು ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು (AFMC) ಪುಣೆಯಲ್ಲಿ ವಿಮಾದಾರರ ಮಕ್ಕಳಿಗೆ (IP ಕೋಟಾ) ಸೀಟುಗಳನ್ನು ಕಾಯ್ದಿರಿಸಲಾಗಿದೆ.(ಏಜೆನ್ಸೀಸ್)