

ಶಿವಮೊಗ್ಗ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯಿಂದ ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರಾನ್ಸ್ ಟೆಸ್ಟ್ (ನೀಟ್-ಯುಜಿ-25 ಪರೀಕ್ಷೆ ಭಾನುವಾರ ನಗರದಲ್ಲಿ ಯಾವುದೇ ಗೊಂದಲಗಳಿಲ್ಲದೆ ಸುಗಮವಾಗಿ ನಡೆಯಿತು.
ನಗರದ 12 ಕೇಂದ್ರಗಳಲ್ಲಿ ಪರೀಕ್ಷೆ ನಿಗದಿಯಾಗಿತ್ತು. ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಪರೀಕ್ಷೆ ನಡೆಯಿತು. 4,510 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಆಗಿದ್ದು 4,294 ಮಂದಿ ಪರೀಕ್ಷೆ ಬರೆದರು. 216 ಅಭ್ಯರ್ಥಿಗಳು ನಾನಾ ಕಾರಣಕ್ಕೆ ಪರೀಕ್ಷೆಗೆ ಗೈರಾಗಿದ್ದರು.
ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಪರೀಕ್ಷಾ ಅಕ್ರಮ ತಡೆಯಲು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. 200 ಮೀ. ವ್ಯಾಪ್ತಿಯಲ್ಲಿ ಮಧ್ಯಾಹ್ನ 1ರಿಂದ ಸಂಜೆ 6ರವರೆಗೆ ಪ್ರತಿಬಂಧಾಜ್ಞೆ ಜಾರಿಗೊಳಿಸಲಾಗಿತ್ತು. ಪರೀಕ್ಷಾ ಕೇಂದ್ರಗಳ ಒಳಗೆ ಮೊಬೈಲ್, ಇತರೆ ಯಾವುದೇ ಎಲೆಕ್ಟಾನಿಕ್ ವಸ್ತುಗಳಿಗೆ ಅವಕಾಶವಿರಲಿಲ್ಲ.
ಮಧ್ಯಾಹ್ನ 12ರಿಂದಲೇ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳ ಎದುರು ಜಮಾಯಿಸಿದ್ದರು. ಪ್ರವೇಶದ್ವಾರ ತೆರೆಯುವವರೆಗೂ ಕಾದು ಆನಂತರ ಕೇಂದ್ರದೊಳಗೆ ತೆರಳಿದರು. ಪಾಲಕರು ಕೂಡ ಮಕ್ಕಳೊಂದಿಗೆ ಪರೀಕ್ಷಾ ಕೇಂದ್ರದವರೆಗೆ ಬಂದು ಪ್ರವೇಶದ್ವಾರ ತೆರೆಯುವವರೆಗೂ ಕಾದು ಆನಂತರ ವಾಪಸ್ ಮರಳಿದರು. ಪರೀಕ್ಷೆ ಮುಗಿದ ಬಳಿಕ ಪುನಃ ಬಂದು ಮಕ್ಕಳನ್ನು ವಾಹನಗಳಲ್ಲಿ ಕರೆದೊಯ್ದರು.