ಡೈಮಂಡ್​ ಲೀಗ್​ನಲ್ಲಿ ನೀರಜ್​ ದ್ವೀತಿಯ; 9 ಸೆಂಟಿಮೀಟರ್​ನಿಂದ ತಪ್ಪಿದ ಅಗ್ರಸ್ಥಾನ!

ಡೈಮಂಡ್​ ಲೀಗ್​ನಲ್ಲಿ ನೀರಜ್​ ದ್ವೀತಿಯ; 9 ಸೆಂಟಿಮೀಟರ್​ನಿಂದ ತಪ್ಪಿದ ಅಗ್ರಸ್ಥಾನ!
ಡೈಮಂಡ್​ ಲೀಗ್​ನಲ್ಲಿ ನೀರಜ್​ ದ್ವೀತಿಯ; 9 ಸೆಂಟಿಮೀಟರ್​ನಿಂದ ತಪ್ಪಿದ ಅಗ್ರಸ್ಥಾನ!
Published on

ಲೌಸಾನೆ: ಅವಳಿ ಒಲಿಂಪಿಕ್ಸ್​ ಪದಕ ವಿಜೇತ ಭಾರತದ ಜಾವೆಲಿನ್​ ತಾರೆ ನೀರಜ್​ ಚೋಪ್ರಾ (

Neeraj Chopra

) ಕಳೆದೊಂದು ವರ್ಷದ ಅವಧಿಯ ತನ್ನ ಶ್ರೇಷ್ಠ ನಿರ್ವಹಣೆ ತೋರಿದ ನಡುವೆಯೂ ಲೌಸಾನೆ ಡೈಮಂಡ್​ ಲೀಗ್​ನಲ್ಲಿ ಎರಡನೇ ಸ್ಥಾನಕ್ಕೆ ಸಮಾಧಾನ ಕಂಡಿದ್ದಾರೆ. ಶ್ರೀಲಂಕಾದ ರುಮೇಶ್​ ಪಥಿರಗೆ ಕೇವಲ 9 ಸೆಂಟಿಮೀಟರ್​ ಅಂತರದಿಂದ ನೀರಜ್​ರನ್ನು ಹಿಂದಿಕ್ಕಿ ಅಗ್ರಸ್ಥಾನ ಒಲಿಸಿಕೊಂಡರು.

28 ವರ್ಷದ ನೀರಜ್​ ಚೋಪ್ರಾ ಶುಕ್ರವಾರ ರಾತ್ರಿ ನಡೆದ ಸ್ಪರ್ಧೆಯ ಎರಡನೇ ಯತ್ನದಲ್ಲಿ ಸರ್ವಾಧಿಕ 88.05 ಮೀ. ದೂರ ಈಟಿ ಎಸೆದರು. 2025ರ ಜೂನ್​ನಲ್ಲಿ ಪ್ಯಾರಿಸ್​ ಡೈಮಂಡ್​ ಲೀಗ್​ ಗೆಲುವಿನ ವೇಳೆ 88.16 ಮೀ. ದೂರ ಎಸೆದ ಬಳಿಕ ಇದೇ ಅವರ ಶ್ರೇಷ್ಠ ಎಸೆತವಾಗಿದೆ.

23 ವರ್ಷದ ಪಥಿರಗೆ 88.14 ಮೀ. ಎಸೆತದೊಂದಿಗೆ ಅಗ್ರಸ್ಥಾನ ಅಲಂಕರಿಸಿದರು. ಈ ಮೂಲಕ ಹಾಲಿ ವರ್ಷದ ದೋಹಾ ಡೈಮಂಡ್​ ಲೀಗ್​ ಮತ್ತು ಗ್ಲಾಸ್ಗೋ ಕಾಮನ್ವೆಲ್ತ್​ ಗೇಮ್ಸ್​ ಬಳಿಕ ಮತ್ತೊಮ್ಮೆ ನೀರಜ್​ರನ್ನು ಹಿಮ್ಮೆಟ್ಟಿಸಿದರು. ಹಾಲಿ ವರ್ಷದ 10 ಸ್ಪರ್ಧೆಗಳಲ್ಲಿ ಪಥಿರಗೆಗೆ ಇದು 9ನೇ ಗೆಲುವಾಗಿದೆ.

ನೀರಜ್​ ಮೊದಲ ಎಸೆತದಲ್ಲಿ 83.54 ಮೀ. ಎಸೆದರೆ, 2ನೇ ಯತ್ನದಲ್ಲಿ 88.05 ಮೀ. ಎಸೆತದೊಂದಿಗೆ ಪಥಿರಗೆ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ್ಕಕೇರಿದ್ದರು. ಆದರೆ 3ನೇ ಯತ್ನದಲ್ಲಿ ಪಥಿರಗೆ ಮತ್ತೆ ನೀರಜ್​ರನ್ನು ಹಿಂದಿಕ್ಕಿದರು. ನೀರಜ್​ 3ನೇ ಎಸೆತದಲ್ಲಿ 83.72 ಮೀ. ಎಸೆದರೆ, 4ನೇ ಯತ್ನದಲ್ಲಿ ಫೌಲ್​ ಮಾಡಿದರು. 5ನೇ ಎಸೆತ ಎಸೆಯಲಿಲ್ಲ. ಅಂತಿಮ ಎಸೆತದಲ್ಲಿ 82.15 ಮೀ. ಎಸೆಯಲಷ್ಟೇ ಶಕ್ತರಾದರು.

ಗ್ರೆನೇಡಾದ ಆಂಡರ್​ಸನ್​ ಪೀಟರ್ಸ್​ 86.69 ಮೀ. ಎಸೆತದೊಂದಿಗೆ 3ನೇ ಸ್ಥಾನ ಗಳಿಸಿದರು. ಹಾಲಿ ವಿಶ್ವ ಚಾಂಪಿಯನ್​ ಟ್ರಿನಿಡಾಡ್​ನ ಕೇಶೋರ್ನ್​ ವಾಲ್ಕಟ್​ 83.71 ಮೀ. ಎಸೆತದೊಂದಿಗೆ 4ನೇ ಸ್ಥಾನಕ್ಕೆ ತೃಪ್ತಿಪಟ್ಟರು. ನೀರಜ್​ ಈಗ ಡೈಮಂಡ್​ ಲೀಗ್​ ಅಂಕಪಟ್ಟಿಯಲ್ಲಿ 7ರಿಂದ 5ನೇ ಸ್ಥಾನಕ್ಕೇರಿದ್ದು, ಫೈನಲ್ಸ್​ ಅರ್ಹತೆ ಅವಕಾಶ ಹೆಚ್ಚಿಸಿಕೊಂಡಿದ್ದಾರೆ. ಸೆ.4-5ರ ಬ್ರಸೆಲ್ಸ್​ ಫೈನಲ್​ನಲ್ಲಿ ಅಗ್ರ 6 ಸ್ಪರ್ಧಿಗಳು ಮಾತ್ರ ಭಾಗವಹಿಸಲಿದ್ದಾರೆ. ಆ.27ಕ್ಕೆ ಜ್ಯೂರಿಚ್​ನಲ್ಲಿ ಮುಂದಿನ ಡೈಮಂಡ್​ ಲೀಗ್​ ಕೂಟ ನಡೆಯಲಿದೆ.
*ಪ್ರತಿ ಸ್ಪರ್ಧೆಯಲ್ಲೂ ನಾನು ಹಿಂದಿನ ಲಯಕ್ಕೆ ಮರಳುತ್ತಿರುವ ಭಾಸವಾಗುತ್ತಿದೆ. ಕೇವಲ 9 ಸೆಂಟಿ ಮೀಟರ್​ನಿಂದ ಅಗ್ರಸ್ಥಾನ ತಪ್ಪಿದ್ದು ನಿಜಕ್ಕೂ ಅತ್ಯಂತ ನಿಕಟ ಸ್ಪರ್ಧೆ. 88 ಮೀ. ದೂರ ಎಸೆದಂತೆ ನನಗೆ ಅನಿಸಲಿಲ್ಲ. ನಾನು ಕಠಿಣ ಪರಿಶ್ರಮ ಪಟ್ಟೆ ಮತ್ತು ನನ್ನ ತಾಂತ್ರಿಕತೆಯತ್ತ ಗಮನಹರಿಸಿದೆ.
| ನೀರಜ್​ ಚೋಪ್ರಾ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net