

ರಾಮನಗರ: ಒಂದು ಜಿಲ್ಲೆ ಒಂದು ಉತ್ಪನ್ನ (ಒಡಿಒಪಿ) ದಲ್ಲಿ ತೆಂಗು ಬೆಳೆಯನ್ನು ಆಯ್ಕೆ ಮಾಡಿಕೊಂಡಿರುವ ರಾಮನಗರ ಜಿಲ್ಲೆಯಲ್ಲಿ ನೀರಾ ಉತ್ಪಾದನಾ ಘಟಕ ಸ್ಥಾಪನೆ ಮಾಡದಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಒಂದು ಜಿಲ್ಲೆ ಒಂದು ಉತ್ಪನ್ನ ಸಂಬಂಧ ತೆಂಗು ಬೆಳೆಗೆ ಮೌಲ್ಯವರ್ಧನೆ ಸಂಬಂಧ ಸಿಎಫ್‌ಟಿಆರ್‌ಐ, ಕೆವಿಕೆ ವಿಜ್ಞಾನಿಗಳು ಸೇರಿ ಇತರ ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಅರಿವು ಮೂಡಿಸಲು ಜಿಪಂ ಸಭಾಂಗಣದಲ್ಲಿ ಮಂಗಳವಾರ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ತೆಂಗಿನಿಂದ ಏನೆಲ್ಲಾ ಉತ್ಪನ್ನಗಳನ್ನು ಸಿದ್ಧಪಡಿಸಬಹುದು, ಇದಕ್ಕೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು, ಸಹಾಯಧನ ಸೇರಿ ಇತರ ಮಾಹಿತಿಗಳನ್ನು ವಿಜ್ಞಾನಿಗಳು ಹಾಗೂ ತಜ್ಞರು ಹಂಚಿಕೊಂಡರು.
ಆದರೆ, ಇದರ ಬಗ್ಗೆ ಯಾವುದೇ ತಕರಾರು ತೆಗೆಯದ ರೈತರು, ರಾಮನಗರ ಜಿಲ್ಲೆ ನೀರಾ ಹೋರಾಟಕ್ಕೆ ಮುನ್ನುಡಿ ಬರೆದ ಜಿಲ್ಲೆಯಾಗಿದೆ. ಇಷ್ಟು ವರ್ಷವಾದರೂ ನೀರಾ ಇಳಿಸುವ, ನೀರಾದಿಂದ ತಯಾರಿಸಬಹುದಾದ ಉತ್ಪನ್ನಗಳ ಬಗ್ಗೆ ಪರಿಚಯ ಮಾಡಿಕೊಡುತ್ತಿಲ್ಲ ಎಂದು ಸಭೆಯಲ್ಲಿ ಆಕ್ಷೇಪ ಎತ್ತಿದರು.
ರೈತ ವಾಸು ಮಾತನಾಡಿ, ಅಧಿಕಾರಿಗಳು ಮತ್ತು ಸರ್ಕಾರ ಮದ್ಯದ ಮಾಲೀಕರ ಮರ್ಜಿಗೆ ಒಳಗಾಗಿದ್ದಾರೆಯೇ? ನೀರಾ ಬಗ್ಗೆ ಸಭೆಯಲ್ಲಿ ಏಕೆ ಪ್ರಸ್ತಾಪ ಮಾಡುತ್ತಿಲ್ಲ? ನೀರಾ ಇಳಿಸುವುದರಿಂದ ರೈತರಿಗೆ ಹೆಚ್ಚಿನ ಲಾಭವಿದೆ. ಆದರೂ ಇದಕ್ಕೆ ಏಕೆ ಒತ್ತು ಕೊಡುತ್ತಿಲ್ಲ? ನೀವು ಶಾಮೀಲಾಗಿದ್ದೀರಾ ಎಂದು ಪ್ರಶ್ನಿಸಿದರು.
ತೋಟಗಾರಿಕೆ ಉಪನಿರ್ದೇಶಕ ಮುನೇಗೌಡ, ಕಳೆದ ಸಾಲಿನ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗಿದೆ. ಅಗತ್ಯ ಬಿದ್ದರೆ ಮತ್ತಷ್ಟು ತಜ್ಞರನ್ನು ಕರೆದು ತರಬೇತಿ ಕೊಡಿಸಲಾಗುವುದು. ಅಲ್ಲದೆ, ನೀರಾ ಇಳಿಸಲು ರೈತರು ಮುಂದೆ ಬಂದರೆ ಅವರಿಗೆ ಅಬಕಾರಿ ಇಲಾಖೆಯಲ್ಲಿರುವ ಕೆಲವು ನಿಯಮಗಳನ್ನು ಅನುಸರಿಸಿ ಅನುಮತಿಕೊಡಿಸುವ ನಿಟ್ಟಿನಲ್ಲಿ ಇಲಾಖೆ ಸಿದ್ಧವಿದೆ. ಅಲ್ಲದೆ, ಇದು ಕೇವಲ ಒಬ್ಬ ವ್ಯಕ್ತಿ ಮಾಡಲು ಸಾಧ್ಯವಿಲ್ಲ, ಒಕ್ಕೂಟಗಳು ಹಾಗೂ ಸಂಘಗಳ ಮೂಲಕ ನೀರಾ ಉತ್ಪನ್ನಗಳನ್ನು ಸಿದ್ಧಪಡಿಸಬಹುದಾಗಿದೆ. ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ಇದಕ್ಕೆ ಅವಕಾಶ ನೀಡಲಾಗಿದ್ದು, ಬೆಂಗಳೂರಿನ ಕೆಲವು ಕಡೆ ನೀರಾ ಮಾರಾಟ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಕೃಷಿ ಇಲಾಖೆ ಉಪನಿರ್ದೇಶಕ ಸೋಮಶೇಖರ್ ಮುಂತಾದವರು ಇದ್ದರು.
ಡಿಸಿ ಗೈರಿಗೆ ರೈತರ ಕೋಪ: ಒಡಿಒಪಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಕಾರ್ಯಾಗಾರದಲ್ಲಿ ಪಾಲ್ಗೊಳ್ಳದಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ಉಪನಿರ್ದೇಶಕ ಮುನೇಗೌಡ ಮಾತನಾಡಿ, ರೈತರ ಸಲಹೆ ಹಾಗೂ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರ ಗಮನಕ್ಕೆ ತರಲಾಗುವುದು ಎಂದರು.
ಇಂಗ್ಲಿಷ್ ಪಿಪಿಟಿಗೆ ಆಕ್ಷೇಪ: ಇನ್ನು ಸಭೆಯಲ್ಲಿ ಮಹಿಳಾ ವಿಜ್ಞಾನಿಯೊಬ್ಬರು ಇಂಗ್ಲಿಷ್‌ನಲ್ಲಿ ಸಿದ್ಧಪಡಿಸಿ ಕೊಂಡು ಬಂದಿದ್ದ ಪಿಪಿಟಿ ಪ್ರದರ್ಶಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತ ಲಕ್ಷ್ಮೀನಾರಾಯಣ, ಕನ್ನಡದಲ್ಲಿ ಹೇಳಿದ್ದರೆ ಅರ್ಥವಾಗುತ್ತಿತ್ತು. ಇಂಗ್ಲಿಷ್‌ನಲ್ಲಿ ಹೇಳಿದರೆ ಅರ್ಥ ಮಾಡಿಕೊಳ್ಳುವುದಾದರೂ ಹೇಗೆ ಎಂದರು. ಅಲ್ಲದೆ, ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಅವರು, ಜಿಲ್ಲೆಯಲ್ಲಿ 31 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಪ್ರತಿವರ್ಷ ನೀವು 150 ಹೆಕ್ಟೇರ್ ಪ್ರದೇಶದ ತೆಂಗನ್ನು ಪುನಶ್ಚೇತನ ಮಾಡುತ್ತೇವೆ ಎನ್ನುತ್ತೀರಿ. ಹಾಗಾದರೆ ಉಳಿದ ತೆಂಗು ಪ್ರದೇಶದ ಪುನಶ್ಚೇತನಕ್ಕೆ ಎಷ್ಟು ವರ್ಷ ಬೇಕು. ನಿಜವಾಗಲೂ ನಿಮಗೆ ಕಾಳಜಿ ಇದ್ದರೆ ಅರಣ್ಯ ಇಲಾಖೆ ಮೂಲಕ ರೈತರಿಗೆ ಉತ್ತಮ ತಳಿಯ ತೆಂಗನ್ನು ಉಚಿತವಾಗಿ ಕೊಡಿಸಿ ಎಂದು ಸಲಹೆ ನೀಡಿದರು
ವೈನ್ ಬೋರ್ಡ್ ಮಾದರಿ ನೀರಾ ಬೋರ್ಡ್: ಮತ್ತೊಂದೆಡೆ ಹಿರಿಯ ರೈತ ಮುಖಂಡ ಸಿ.ಪುಟ್ಟಸ್ವಾಮಿ ಮಾತನಾಡಿ, ರಾಮನಗರ ಜಿಲ್ಲೆಯಲ್ಲಿ ನೀರಾಗಾಗಿ ಬಲಿದಾನ ನಡೆದು 21 ವರ್ಷಗಳೇ ಕಳೆದಿವೆ. ಆದರೂ ನೀರಾ ಇಳಿಸುವ ಸಂಬಂಧ ಸ್ಪಷ್ಟ ನೀತಿ ಆಗಿಲ್ಲ. ಜಿಲ್ಲೆಯಲ್ಲಿ ನೀರಾ ಘಟಕ ಸ್ಥಾಪನೆ ಆಗಬೇಕು ಎನ್ನುವುದು ನಮ್ಮ ಬಹು ವರ್ಷಗಳ ಬೇಡಿಕೆ, ವೈನ್ ಬೋರ್ಡ್ ಮಾದರಿಯಲ್ಲಿಯೇ ನೀರಾ ಬೋರ್ಡ್ ತೆರೆದು ರೈತರಿಗೆ ಏಕೆ ಅನುಕೂಲ ಮಾಡಿಕೊಡುತ್ತಿಲ್ಲ, ಸರ್ಕಾರಕ್ಕೆ ಸೂಕ್ತವಾದ ಪ್ರಸ್ತಾವನೆ ಕೊಡಿ ಎಂದು ಒತ್ತಾಯ ಮಾಡಿದರು.