ಕಟ್ಟೆಚ್ಚರ ಅನಿವಾರ್ಯ, ಅವಕಾಶಕ್ಕೆ ಹೊಂಚು ಹಾಕುವ ಉಗ್ರರು

edit 4
Published on

ಬಹುನಿರೀಕ್ಷಿತ ರಾಮಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಆ.5ರಂದು ಅಯೋಧ್ಯೆಯಲ್ಲಿ ನಡೆಯುತ್ತಿದೆ. ಇದರ ಜತೆಗೆ, ಸಂವಿಧಾನದ 370ನೇ ವಿಧಿಯನ್ವಯ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದಾಗಿ ಅದೇ ದಿನಕ್ಕೆ ಒಂದು ವರ್ಷವಾಗುತ್ತಿದೆ. ಈ ಸಂದರ್ಭವನ್ನು ಬಳಸಿಕೊಂಡು ಭಯೋತ್ಪಾದನಾ ಸಂಘಟನೆಗಳು ದೇಶದ ವಿವಿಧೆಡೆ ದುಷ್ಕೃತ್ಯ ನಡೆಸಲು ಸಂಚುಹೂಡಿವೆಯೆಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿರುವುದು ನಿಜಕ್ಕೂ ಕಳವಳಕಾರಿ. ಪ್ರಮುಖ ದಿನಾಚರಣೆಗಳ ಸಂದರ್ಭದಲ್ಲಿ ಉಗ್ರ ಕೃತ್ಯ ನಡೆಯುವ ಬಗ್ಗೆ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡುವುದು ಸಹಜವಾದರೂ ಈಗಿನ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಅಯೋಧ್ಯೆಯ ವಿವಾದ ಅಂತೂ ದೀರ್ಘಕಾಲದ ನಂತರ ಬಗೆಹರಿದು ರಾಮಮಂದಿರ ನಿರ್ವಣಕ್ಕೆ ಮಾರ್ಗ ತೆರೆದುಕೊಂಡಿದೆ. ಈ ಸನ್ನಿವೇಶದಲ್ಲೇ ದುಷ್ಕೃತ್ಯದ ಸಂಚಿನ ಉದ್ದೇಶವನ್ನು ಉಗ್ರ ಸಂಘಟನೆಗಳು ಹೊಂದಿರುವ ಮಾಹಿತಿ ಲಭ್ಯವಾಗಿದೆ. ಇದರ ಜತೆಗೆ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ) ವಿಷಯದಲ್ಲಿ ಒಂದು ಸಮುದಾಯವನ್ನು ತಪು್ಪದಾರಿಗೆಳೆದು ಅವರನ್ನು ರೊಚ್ಚಿಗೆಬ್ಬಿಸುವ ಹುನ್ನಾರವೂ ನಡೆದಿದೆಯೆನ್ನಲಾಗಿದೆ.

ಇತರ ರಾಜ್ಯಗಳಿಗೆ ಇಲ್ಲದ ಕೆಲ ವಿಶೇಷ ಸವಲತ್ತುಗಳು ಸಂವಿಧಾನದ 370ನೇ ವಿಧಿಯನ್ವಯ ಜಮ್ಮು-ಕಾಶ್ಮೀರಕ್ಕೆ ದಕ್ಕಿದ್ದವು. ಆ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ಕಳೆದ ವರ್ಷ ತೆಗೆದುಹಾಕಿತು. ಅಲ್ಲದೆ, ಆ ರಾಜ್ಯವನ್ನು ಎರಡು ವಿಭಾಗವಾಗಿಸಿತು. ತದನಂತರದಲ್ಲಿ ಅಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಕಡಿಮೆಯಾಗಿವೆ ಎಂದು ವರದಿಗಳು ಹೇಳುತ್ತವೆ. ಇದರಿಂದಾಗಿ ಭಯೋತ್ಪಾದನಾ ಸಂಘಟನೆಗಳು ಸಹಜವಾಗಿಯೇ ಉರಿಯುತ್ತಿವೆ. ಹೀಗಾಗಿ ಅವಕಾಶ ಸಿಕ್ಕರೆ ಮತ್ತೆ ಚಟುವಟಿಕೆ ನಡೆಸಲು ಅವು ಹಾತೊರೆಯುತ್ತವೆ. ಇದಲ್ಲದೆ, ಐಸಿಸ್ ಸಂಘಟನೆಯು ಕೇರಳ ಮತ್ತು ಕರ್ನಾಟಕದಲ್ಲಿ ತನ್ನ ಕಾರ್ಯ ವಿಸ್ತರಿಸಿದ್ದು, ವಿಶ್ವಸಂಸ್ಥೆಯ ವರದಿಯಲ್ಲಿಯೂ ಇದು ಉಲ್ಲೇಖವಾಗಿದೆ. ಈ ಎರಡು ರಾಜ್ಯಗಳಲ್ಲಿ ಉಗ್ರರ ಅಡಗುದಾಣಗಳು ಹೆಚ್ಚುತ್ತಿರುವ ಬಗ್ಗೆಯೂ ವರದಿಗಳಿವೆ.

ಇದಕ್ಕೆ ಪೂರಕವೆಂಬಂತೆ, ಬೆಂಗಳೂರು ಮತ್ತು ಆಸುಪಾಸಿನಲ್ಲಿ ಬೇರೆಬೇರೆ ಸಂಘಟನೆಗಳ ಅನೇಕ ಶಂಕಿತರನ್ನು ಈ ಹಿಂದೆ ಬಂಧಿಸಲಾಗಿದೆ. ಮಂದಿರ ಶಿಲಾನ್ಯಾಸ ಸಂದರ್ಭದಲ್ಲಿ ಉಗ್ರ ಚಟುವಟಿಕೆ ಸಾಧ್ಯತೆ ಹಿನ್ನೆಲೆಯಲ್ಲಿ, ಅನುಮಾನಾಸ್ಪದ ವ್ಯಕ್ತಿಗಳು ಮತ್ತು ಚಟುವಟಿಕೆಗಳು ಕಂಡುಬಂದರೆ ಮಾಹಿತಿ ನೀಡುವಂತೆ ಭದ್ರತಾ ಸಂಸ್ಥೆಗಳು ಸಾರ್ವಜನಿಕರಿಗೂ ಮನವಿ ಮಾಡಿಕೊಂಡಿವೆ. ಅಂದರೆ, ಈ ಕಾರ್ಯದಲ್ಲಿ ಜನರ ಸಹಕಾರವೂ ಅಗತ್ಯ ಎಂದಂತಾಯಿತು. ‘ರಾಜ್ಯದಲ್ಲಿ ಉಗ್ರ ಚಟುವಟಿಕೆಗಳು ನಡೆಯದಂತೆ ನಿಗಾ ವಹಿಸಲಾಗಿದೆ. ಕೇಂದ್ರ ಸರ್ಕಾರ ಕಾಲಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸುತ್ತ ಕಟ್ಟೆಚ್ಚರ ವಹಿಸಲಾಗಿದೆ’ ಎಂದು ಗೃಹಮಂತ್ರಿ ಬಸವರಾಜ ಬೊಮ್ಮಾಯಿಯವರು ಸ್ಪಷ್ಟಪಡಿಸಿದ್ದಾರೆ.

ಈಗ ಸರ್ಕಾರದ ಬಹುತೇಕ ಇಲಾಖೆಗಳು ಕರೊನಾ ನಿಯಂತ್ರಣ ಕಾರ್ಯದಲ್ಲಿ ತೊಡಗಿಕೊಂಡಿವೆ. ಪೊಲೀಸ್ ಇಲಾಖೆಗೂ ಈ ನಿಟ್ಟಿನಲ್ಲಿ ಜವಾಬ್ದಾರಿಗಳಿವೆ. ಸಮಾಜವಿರೋಧಿ ಶಕ್ತಿಗಳು ಮತ್ತು ಉಗ್ರರಂಥವರು ಈ ಸನ್ನಿವೇಶವನ್ನು ದುರ್ಬಳಕೆ ಮಾಡಿಕೊಳ್ಳದಂತೆ ಕಟ್ಟೆಚ್ಚರ ವಹಿಸಬೇಕಾದ ಅಗತ್ಯ ಹೆಚ್ಚಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಹಿತಿ ವಿನಿಮಯ ಸೇರಿದಂತೆ ವಿವಿಧ ಕಾರ್ಯಚಟುವಟಿಕೆಗಳಲ್ಲಿ ಸಮನ್ವಯ ಹಾಗೂ ಸಹಕಾರದ ಮೂಲಕ ಭಯೋತ್ಪಾದನೆ ಬಾಲಬಿಚ್ಚದಂತೆ ನೋಡಿಕೊಳ್ಳಬೇಕಾಗಿದೆ. ಈ ಕಾರ್ಯದಲ್ಲಿ ಸ್ವಲ್ಪ ಎಚ್ಚರತಪ್ಪಿದರೂ ದೊಡ್ಡ ಬೆಲೆ ತೆರಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net