ಎಚ್ಚರಿಕೆ ಅಗತ್ಯ

edit 4
Published on

ಲಾಕ್​ಡೌನ್ ಸಡಿಲಿಕೆ ಬಳಿಕ ಕರ್ನಾಟಕದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ, ಕಳೆದ ಮೂರೇ ದಿನಗಳಲ್ಲಿ 130ಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢಪಟ್ಟಿದೆ. ಹಾಗಾಗಿ, ಸಹಜವಾಗಿಯೇ ಮುಂದಿನ ದಿನಗಳು ಹೇಗಿರಲಿವೆ, ಸೋಂಕು ಪ್ರಸರಣದ ವೇಗ ತೀರಾ ಹೆಚ್ಚಳಗೊಂಡರೆ ಏನು ಗತಿ ಎಂಬ ಪ್ರಶ್ನೆಗಳು ಉದ್ಭವವಾಗಿವೆ. ಆದರೂ ಚೇತರಿಕೆ ಪ್ರಮಾಣ ಸಮಾಧಾನಕರ. ಎರಡು ಹಂತದ ಲಾಕ್​ಡೌನ್ ತುಂಬ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿತ್ತು. ಎಲ್ಲ ಬಗೆಯ ಆರ್ಥಿಕ ಚಟುವಟಿಕೆಗಳು ಬಹುತೇಕ ಸ್ತಬ್ಧವಾಗಿದ್ದವು. ಆದರೆ, ಎಲ್ಲ ವಲಯಗಳು ನಷ್ಟಕ್ಕೆ ಒಳಗಾಗಿ, ಆರ್ಥಿಕ ಸಂಕಷ್ಟ ಗಂಭೀರ ರೂಪ ಪಡೆಯತೊಡಗಿತು. ಹಂತಹಂತವಾಗಿ ದಿಗ್ಬಂಧನ ಸಡಿಲಿಸುವುದೇ ಲೇಸು ಎಂಬ ಅಭಿಪ್ರಾಯವನ್ನು ತಜ್ಞರು ಸರ್ಕಾರದ ಮುಂದಿಟ್ಟರು. ಸರ್ಕಾರಕ್ಕೂ ಈ ಕ್ರಮ ಅನಿವಾರ್ಯವಾಗಿತ್ತು. ದೀರ್ಘಾವಧಿ ಬಂದ್ ಆರ್ಥಿಕ ಸ್ಥಿತಿಯನ್ನೇ ಬುಡಮೇಲು ಮಾಡುವ ಅಪಾಯವಿತ್ತು. ಆದ್ದರಿಂದ, ಮೇ 4ರಿಂದ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಕೆಲ ನಿರ್ಬಂಧಗಳೊಂದಿಗೆ ವ್ಯಾಪಾರ-ವಹಿವಾಟು ನಡೆಸಲು ಅನುಮತಿ ಸಿಕ್ಕಿದೆ. ಇದರಿಂದ, ಸೋಂಕು ಪ್ರಸರಣ ಹೆಚ್ಚಬಹುದು ಎಂಬ ಅಂದಾಜು ಸರ್ಕಾರಕ್ಕೆ ಇತ್ತಾದರೂ, ವಿವೇಚನಾಯುಕ್ತ ಪ್ರಯೋಗ ಕೈಗೊಳ್ಳುವುದು ಅನಿವಾರ್ಯವೂ ಆಗಿತ್ತು.

ಒಂದು ವೇಳೆ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಾದರೂ, ಆ ಸ್ಥಿತಿಯನ್ನು ನಿರ್ವಹಿಸಲು ರಾಜ್ಯ ಸರ್ಕಾರ ಪೂರಕ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆರೋಗ್ಯ ಇಲಾಖೆ ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧವಾದಂತಿದೆ. ಈ ನಡುವೆ, ಕರೊನಾ ಕಾಲದಲ್ಲಿ ಸರ್ಕಾರಿ ಆಸ್ಪತ್ರೆಗಳ ಅಗತ್ಯ, ಅವುಗಳ ನಿರ್ವಹಣೆ ಶೈಲಿಯೂ ಜನಸಾಮಾನ್ಯರಿಗೆ ಮನದಟ್ಟಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಸ್ಪರ್ಧೆಯೊಡ್ಡಲು, ಸರ್ಕಾರಿ ಆಸ್ಪತ್ರೆಗಳಿಗೆ ಕಾಪೋರೇಟ್ ಸ್ಪರ್ಶ ನೀಡಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ಶನಿವಾರ ನಡೆದ ‘ವಿಜಯವಾಣಿ ಫೋನ್ ಇನ್’ ಕಾರ್ಯಕ್ರಮದಲ್ಲಿ ಪ್ರಕಟಿಸಿದ್ದಾರೆ.

ಮುಂಚೆಲ್ಲ, ಸರ್ಕಾರಿ ಆಸ್ಪತ್ರೆಗಳೆಂದರೆ ಅವ್ಯವಸ್ಥೆ, ಅಶಿಸ್ತು ಎಂಬ ಭಾವನೆಯಿತ್ತು. ಆದರೆ, ಸರ್ಕಾರಿ ಆಸ್ಪತ್ರೆಗಳ ಸವಲತ್ತು ಸುಧಾರಣೆ, ಶುಚಿತ್ವ, ಆಡಳಿತಾತ್ಮಕ ಉನ್ನತೀಕರಣದ ಮೂಲಕ ಆರೋಗ್ಯ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಲು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ನಿಜಕ್ಕೂ, ಇಂಥ ಮಹತ್ವದ ಸುಧಾರಣೆ ತುಂಬ ದಿನಗಳ ಬೇಡಿಕೆಯಾಗಿತ್ತು. ಸರ್ಕಾರಿ ಆಸ್ಪತ್ರೆಗಳು ಉತ್ತಮ ಸೇವೆ ನೀಡಲು ಸಜ್ಜುಗೊಂಡರೆ ಅದರಿಂದ ಜನಸಾಮಾನ್ಯರಿಗೆ ತುಂಬ ಪ್ರಯೋಜನವಾಗಲಿದೆ, ಅವರು ವೈದ್ಯಕೀಯ ಕಾರಣಕ್ಕಾಗಿ ಮಾಡುವ ವೆಚ್ಚ ತಗ್ಗಲಿದೆ. ಮುಖ್ಯವಾಗಿ, ಇಂಥ ಸಂದಿಗ್ಧ ಸ್ಥಿತಿಯಲ್ಲಿ ಜನರ ಮೇಲೂ ಮಹತ್ವದ ಹೊಣೆಗಾರಿಕೆ ಇದೆ ಎಂಬುದನ್ನು ಮರೆಯಬಾರದು. ಸರ್ಕಾರ ತನ್ನ ಕೆಲಸ ಮಾಡುತ್ತಿದೆ. ಆದರೆ, ಸೋಂಕು ಹರಡದಂತೆ ತಡೆಯಲು ಪ್ರತಿಯೊಬ್ಬರು ಸೇನಾನಿಯಂತೆ

ಕಾರ್ಯನಿರ್ವಹಿಸಬೇಕಿದೆ. ಸರ್ಕಾರದ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಬೇಕಿದೆ. ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ. ಅದನ್ನು ನಿರ್ಲಕ್ಷಿಸಿದರೆ ನಾವೇ ಅಪಾಯ ತಂದುಕೊಂಡಂತೆ. ಎಚ್ಚರಿಕೆ ಯನ್ನು ವಹಿಸುವ ಮೂಲಕ ಕರೊನಾವನ್ನು ಸೋಲಿಸುವ ಸಂಕಲ್ಪ ದೃಢವಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net