ರಜೆ ಬೇಕಾ, ತಗೊಳ್ಳಿ; ಸಂಬಳ ಮಾತ್ರ ಕೇಳ್ಬೇಡಿ; ನೌಕರರಿಗೆ ಕೆಎಸ್​ಆರ್​ಟಿಸಿ ಆಫರ್​..!

ksrtc bus
Published on

ಬೆಂಗಳೂರು: ಕೆಎಸ್​ಆರ್​ಟಿಸಿ ನಿಗಮಗಳ ಎಲ್ಲ ನೌಕರರಿಗೂ ಪೂರ್ಣ ಪ್ರಮಾಣದ ವೇತನ ನೀಡಲಾಗುತ್ತದೆ ಎಂಬ ಸಾರಿಗೆ ಸಚಿವರು ಹೇಳಿಕೆ ಬೆನ್ನಲ್ಲೇ ನೌಕರರಿಗೆ ವೇತನ ರಹಿತ ರಜೆ ಪಡೆಯಲು ಒತ್ತಡ ಹೇರಲಾಗುತ್ತಿದೆ!

ರಾಮನಗರ ಘಟಕ ವ್ಯವಸ್ಥಾಪಕರು ಹೊರಡಿಸಿರುವ ಸುತ್ತೋಲೆಯಂತೆ, ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿ ಜುಲೈ ಮತ್ತು ಆಗಸ್ಟ್ ತಿಂಗಳು ರಜೆ ಬೇಕೆಂದರೆ ಅರ್ಜಿ ಸಲ್ಲಿಸಬಹುದು. ಆದರೆ, ಅದು ವೇತನ ರಹಿತ ರಜೆಯಾಗಿರಲಿದ್ದು, ರಜೆ ಪಡೆವ ಸಿಬ್ಬಂದಿಗೆ ನಿಗಮದಿಂದ ವೇತನ ದೊರೆಯುವುದಿಲ್ಲ. ಅದಕ್ಕೆ ಒಪ್ಪಿದ ನೌಕರರು ಜೂ.30ರೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಪ್ರತಿ ನೌಕರರಿಗೂ ವಾರದ ರಜೆ ಸೇರಿ ಇನ್ನಿತರ ವಾರ್ಷಿಕ 120ಕ್ಕೂ ಹೆಚ್ಚಿನ ರಜೆಗಳಿವೆ. ಅವುಗಳು ಪೂರ್ಣಗೊಂಡ ನಂತರವೂ ನೌಕರರು ರಜೆ ತೆಗೆದುಕೊಂಡರೆ, ರಜೆ ತೆಗೆದುಕೊಂಡ ದಿನದ ವೇತನ ಕಡಿತಗೊಳಿಸಲು ಸಾಧ್ಯ. ಆದರೆ, ರಾಮನಗರ ಘಟಕದ ಅಧಿಕಾರಿಗಳು, ನೌಕರರಿಗೆ ರಜೆ ಮಂಜೂರು ಮಾಡುವ ಬದಲು ವೇತನ ರಹಿತ ರಜೆ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾರೆ. ಈ ಕ್ರಮ ಕಾರ್ವಿುಕ ಕಾನೂನಿಗೆ ವಿರುದ್ಧವಾದದ್ದು ಎಂಬ ಮಾತು ಕೇಳಿಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net