

ಬೆಂಗಳೂರು: ಒಂದನೇ ತರಗತಿಯಿಂದಲೇ ಎನ್‌ಸಿಇಆರ್‌ಟಿ ಪಠ್ಯಕ್ರಮ ಜಾರಿಗೊಳಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ರಿಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಸಲ್ಲಿಸಿ, ವೃಂದ ಮತ್ತು ನೇಮಕ ನಿಯಮಗಳಿಗೆ ಸೂಕ್ತ ಪರಿಹಾರವನ್ನು ನೀಡಲು ಕೋರಿತು.
ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಸಭೆ ನಡೆಯಿತು. ಇದೇ ಸಂದರ್ಭದಲ್ಲಿ ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಕೌಶಾಲ್ಯಾಧಾರಿತ ಕಲಿಕೆಗೆ ಜಂಟಿ ಸಭೆಯಲ್ಲಿ ಮಂಗಳವಾರ ತೀರ್ಮಾನಿಸಲಾಗಿದೆ.
ಶಾಲೆಗಳಲ್ಲಿ ಶೌಚಗೃಹ ಹಾಗೂ ಸ್ವಚ್ಛತೆಗಾಗಿ ಪ್ರತ್ಯೇಕ ಏಜನ್ಸಿಗಳಿಗೆ ಗುತ್ತಿಗೆ, ಮಕ್ಕಳ ಪೋಷಕಾಂಶ ಸುಧಾರಣೆ, ಮೊಟ್ಟೆಯ ದರ ಮತ್ತು ಮೊಟ್ಟೆಯನ್ನು ಆರು ದಿನ ವಿತರಣೆ, ಶಾಲೆಗಳಿಗೆ ನಲಿಕಲಿ ಪದ್ಧತಿ ರದ್ದುಪಡಿಸಿ ಸಾಮಾನ್ಯ ಶಿಕ್ಷಣ ಜಾರಿ ಬಗ್ಗೆ ಚರ್ಚಿಸಲಾಯಿತು.
ಮುಖ್ಯೋಪಾಧ್ಯಾರ ಮೇಲೆ ಕೆಲಸದ ಒತ್ತಡ, ಪಂಚಾಯಿತ್‌ಮಟ್ಟದಲ್ಲಿ ಕ್ಲರ್ಕ್/ಅಟೆಂಡರ್ ನೇಮಕ ಪ್ರಸ್ತಾಪ, ಪ್ರತಿಭಾಕಾರಂಜಿ ಹಾಗೂ ಕ್ರೀಡಾಕೂಟಗಳನ್ನು ಒಂದೇ ಬಾರಿಗೆ ಏರ್ಪಡಿಸುವ ಬದಲಾಗಿ ಒಂದನೇ ಸೆಮಿಸ್ಟರ್‌ನಲ್ಲಿ ಕ್ರೀಡಾಕೂಟ, ಎರಡನೇ ಸೆಮಿಸ್ಟರ್‌ನಲ್ಲಿ ಪ್ರತಿಭಾ ಕಾರಂಜಿ ಆಯೋಜನೆ ಬಗ್ಗೆ ಚರ್ಚೆಯಾಯಿತು.
ನಿರಂತರವಾಗಿ ಶಿಕ್ಷಕರನ್ನು ಬಿಎಲ್‌ಒ ಕರ್ತವ್ಯಕ್ಕೆ ನೇಮಿಸಲಾಗುತ್ತಿದೆ. ಇದರಿಂದ ಉಂಟಾಗುತ್ತಿರುವ ತೊಂದರೆಗಳನ್ನು ಸಚಿವ ಸಂಪುಟ ಸಭೆಯ ಮುಂದೆ ಪ್ರಸ್ತಾಪಿಸಿ, ಒಪ್ಪಿಗೆ ಪಡೆದು ಬಿಎಲ್‌ಒ ಕರ್ತವ್ಯ ಮುಕ್ತಗೊಳಿಸಲು ರಾಷ್ಟ್ರೀಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಬೇಕು ಎಂದು ಸಂಘ ವಿನಂತಿಸಿತು.
ಇದೇ ಸಂದರ್ಭದಲ್ಲಿ ಶಿಕ್ಷಕರನ್ನು ಅನ್ಯ ಕೆಲಸಗಳಿಗೆ ನಿಯೋಜನೆಯಿಂದ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಮಕ್ಕಳ ಶಿಕ್ಷಣಕ್ಕೆ ಅಡಚಣೆಯಾಗುವ ಬಗ್ಗೆ ವಿಸ್ತೃತವಾಗಿ ಚರ್ಚೆಯಾಗಿದ್ದು, ಸಂಘದ ಮನವಿಗೆ ಡಾ.ಶಾಲಿನಿ ರಜನೀಶ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂಘದ ರಾಜ್ಯಾಧ್ಯಕ್ಷ ಕೆ.ನಾಗೇಶ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಇನ್ನಿತರರು ಇದ್ದರು.