

ಶಿವಮೊಗ್ಗ: ವಾಣಿಜ್ಯ, ಕೈಗಾರಿಕೆ ಮತ್ತು ಆಸ್ಪತ್ರೆಗೆ ಸಂಬಂಧಿಸಿದ ಎಲ್ಲಾ ಪ್ರಯೋಗಾಲಯಗಳು ಎನ್‌ಎಬಿಎಲ್ ಮಾನ್ಯತೆ ಪಡೆಯುವುದು ಮುಖ್ಯ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಏರ್ಪಡಿಸಿದ್ದ ಎನ್‌ಎಬಿಎಲ್ ಮಾನ್ಯತಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎನ್‌ಎಬಿಎಲ್ ಸ್ವಾಯತ್ತ ಮಂಡಳಿಯಾಗಿದ್ದು, ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಡಿ ಬರುತ್ತದೆ. ಮಣ್ಣು, ಲೋಹ, ಮೆಡಿಕಲ್, ವಾಣಿಜ್ಯ, ಕೈಗಾರಿಕೆ, ಆಸ್ಪತ್ರೆಗೆ ಸಂಬಂಧಿಸಿದ ಎಲ್ಲ ಪ್ರಯೋಗಾಲಯಗಳು ಎನ್‌ಎಬಿಎಲ್ ಮಾನ್ಯತೆ ಪಡೆಯುವುದರಿಂದ ಸಂಸ್ಥೆ ಬಗ್ಗೆ ವಿಶ್ವಾಸಾರ್ಹತೆ ಹೆಚ್ಚುತ್ತದೆ ಎಂದು ತಿಳಿಸಿದರು.
ಎನ್‌ಎಬಿಎಲ್ ಮಾನ್ಯತೆಯಿಂದ ವ್ಯವಹಾರ ವೃದ್ಧಿಯಾಗಿ ಯುವಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನ ಮತ್ತು ಸೇವೆ ದೊರೆಯುತ್ತದೆ. ಜಿಲ್ಲೆಯ ಪ್ರಯೋಗಾಲಯಗಳು ಎನ್‌ಎಬಿಎಲ್ ಮಾನ್ಯತೆ ಪಡೆಯುವುದಕ್ಕೆ ಸಹಕರಿಸಲು ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕಾ ಸಂಘ ಬದ್ಧವಾಗಿದೆ. ಎಂದು ಹೇಳಿದರು.
ಎನ್‌ಎಬಿಎಲ್ ಪ್ರಾಂತೀಯ ನಿರ್ದೇಶಕ ಆರ್.ಶ್ರೀಕಾಂತ್ ಮಾತನಾಡಿ, ರಾಷ್ಟ್ರೀಯ ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯ ಮಂಡಳಿಯಲ್ಲಿ ಮಾನ್ಯತೆ ಪಡೆದ ಪ್ರಯೋಗಾಲಯಗಳು ಅಂತರಾಷ್ಟ್ರೀಯ ಮಾನದಂಡ ಮತ್ತು ಗುಣಮಟ್ಟದ ನಿರ್ವಹಣಾ ವ್ಯವಸ್ಥೆಯ ಅನುಸರಣೆ ಹೊಂದಿರುತ್ತದೆ. ಆದ್ದರಿಂದ ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಎನ್‌ಎಬಿಎಲ್ ಸಹಾಯಕ ಡೈರೆಕ್ಟರ್ ಶ್ರೀರಾಮ್, ಕೋಆರ್ಡಿನೇಟರ್ ಎಂ.ಚೈತ್ರಾ ಎನ್‌ಎಬಿಎಲ್ ಮಾನ್ಯತೆ, ಆನ್‌ಲೈನ್ ನೋಂದಣಿ ಪ್ರಕ್ರಿಯೆ, ಮಾನ್ಯತೆ ಪಡೆದ ಪ್ರಯೋಗಾಲಯಗಳು ಅಂತರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಮಾರ್ಗಸೂಚಿಗಳನ್ನು ಪಾಲಿಸುವ ಬಗ್ಗೆ ವಿವರಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ಕಾರ್ಯಕ್ರಮ ಸಮಿತಿ ಚೇರ್ಮನ್ ಶರತ್, ನಿರ್ದೇಶಕರಾದ ಪಿ.ರುದ್ರೇಶ್, ಎಸ್.ಎಸ್.ಉದಯಕುಮಾರ್, ಬಿ.ಸುರೇಶ್‌ಕುಮಾರ್, ಪ್ರದೀಪ್ ವಿ. ಎಲಿ, ವಿನೋದ್ ಕುಮಾರ್ ಜೈನ್, ಮಾಜಿ ಅಧ್ಯಕ್ಷ ವಾಸುದೇವ್, ಕಮಲಾಕ್ಷರಪ್ಪ, ಡಾ. ವಿನಯಾ ಶ್ರೀನಿವಾಸ್ ಮುಂತಾದವರಿದ್ದರು.