ಈ ಅರಮನೆ ಕೆಳಗಿದೆಯಂತೆ ನಾಜಿಗಳು ಕದ್ದ 28 ಟನ್​ ಚಿನ್ನ!

poland palace
Published on

ವಾರ್ಸಾ: ನಾಜಿಗಳು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಯುರೋಪ್​ ಸೇರಿ ವಿವಿಧ ಖಂಡಗಳಲ್ಲಿ ಚಿನ್ನಾಭರಣ, ಧಾರ್ಮಿಕ ವಸ್ತುಗಳು, ಕಲಾಕೃತಿಗಳು ಸೇರಿ ನಾನಾ ವಸ್ತುಗಳನ್ನು ಲೂಟಿ ಮಾಡಿದ್ದರು. ಹೀಗೆ ಅವರು ಕದ್ದಿರುವ 28 ಟನ್​ ಚಿನ್ನವನ್ನು ಪೋಲೆಂಡ್​ನಲ್ಲಿರುವ ಜರ್ಮನಿಯ ಅರಮನೆಯೊಂದರ ಅಡಿಯಲ್ಲಿ ಬಚ್ಚಿಟ್ಟಿದ್ದಾರೆ ಎಂಬುದು ಇತ್ತೀಚಿನ ಅಧ್ಯಯನ ವರದಿಯಲ್ಲಿ ಬಹಿರಂಗವಾಗಿದೆ.

ನಾಜಿಯ ಸೇನಾಧಿಕಾರಿಯಾಗಿದ್ದ ಎಸ್​.ಎಸ್​. ಸ್ಟ್ಯಾನ್​ಡರ್ಟನ್​ಫೆರೆರ್​ ಎಗಾನ್​ ಆಲಿವರ್​ ಎಂಬಾತ ಬರೆದಿದ್ದು ಎನ್ನಲಾದ ಡೈರಿಯಲ್ಲಿ ಈ ಮಾಹಿತಿ ಲಭ್ಯವಾಗಿದೆ. ಆಧುನಿಕ ಪೋಲೆಂಡ್​ನ ದ ಹಾಚ್​ಬರ್ಗ್​ ಪ್ಯಾಲೇಸ್​ನ ಕೆಳಗೆ ಪ್ರಸ್ತುತ ಮಾರ್ಕೆಟ್​ ದರದಲ್ಲಿ 11,617 ಕೋಟಿ ರೂ. ಮೌಲ್ಯ ಹೊಂದಿರುವ 28 ಟನ್​ ಚಿನ್ನವನ್ನು ಹುದುಗಿಸಿಟ್ಟಿರಬಹುದು ಎಂದು ಸಂಶೋಧಕರು ವಿವರಿಸಿದ್ದಾರೆ.

ಎಸ್​.ಎಸ್​. ಸ್ಟ್ಯಾನ್​ಡರ್ಟನ್​ಫೆರೆರ್​ನ ಈ ಡೈರಿ ಕಳೆದ ವರ್ಷ ಪತ್ತೆಯಾಗಿತ್ತು. ಸದ್ಯ ಅದು ಸಿಲೇಸಿಯನ್​ ಬ್ರಿಡ್ಜ್​ ಫೌಂಡೇಷನ್​ ಬಳಿ ಇದ್ದು, ಸಂಶೋಧಕರು ಅದರ ಅಧ್ಯಯನದಲ್ಲಿ ತೊಡಗಿದ್ದಾರೆ. ಬೆರಸ್ಲಾವ್​ನಲ್ಲಿ (2ನೇ ವಿಶ್ವಯುದ್ಧದ ಬಳಿಕ ಜರ್ಮನಿಯಿಂದ ಪೋಲೆಂಡ್​ಗೆ ವರ್ಗಾವಣೆಗೊಂಡಿರುವ ನಗರ) ಲೂಟಿ ಮಾಡಲಾಗಿದ್ದ ರಾಯ್ಸಬ್ಯಾಂಕ್​ ಚಿನ್ನದ ಗಟ್ಟಿಗಳು ಮತ್ತಿತರ ವಸ್ತುಗಳು ಸೇರಿ ಒಟ್ಟು 7,582.75 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಕೂಡ ಈ ಅರಮನೆಯಡಿಯಲ್ಲಿ ಬಚ್ಚಿಟ್ಟಿರಬಹುದು ಎಂದು ಹೇಳಲಾಗುತ್ತಿದೆ.

ಯುರೋಪ್​, ಸೋವಿಯತ್​ ಒಕ್ಕೂಟ, ಫ್ರಾನ್ಸ್​, ಬೆಲ್ಜಿಯಂ ಸೇರಿ ನಾನಾ ರಾಷ್ಟ್ರಗಳಲ್ಲಿ ನಾಜಿಗಳು ಲೂಟಿ ಮಾಡಿದ್ದ ವಸ್ತುಗಳನ್ನು ಒಟ್ಟು 11 ಕಡೆಗಳಲ್ಲಿ ಬಚ್ಚಿಡಲಾಗಿದೆ ಎಂಬ ಅಂಶವೂ ಡೈರಿಯಲ್ಲಿ ದಾಖಲಾಗಿರುವುದಾಗಿ ಹೇಳಲಾಗುತ್ತಿದೆ.

ಪೋಲೆಂಡ್​ ಸರ್ಕಾರದ ಸಂಸ್ಕೃತಿ ಸಚಿವಾಲಯಕ್ಕೆ ಈ ಡೈರಿಯನ್ನು ಈಗಾಗಲೆ ಹಸ್ತಾಂತರಿಸಿದ್ದೇವೆ. ಜತೆಗೆ, ಈ ಬಗ್ಗೆ ತಕ್ಷಣವೇ ತನಿಖೆ ಆರಂಭಿಸುವಂತೆಯೂ ಮನವಿ ಮಾಡಿಕೊಂಡಿದ್ದೆವು. ಆದರೆ, ಸರ್ಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಈ ಮಾಹಿತಿಗಳನ್ನು ನಾವು ಬಹಿರಂಗಪಡಿಸುವ ಮೂಲಕ ತನಿಖೆ ನಡೆಸುವಂತೆ ಅದರ ಮೇಲೆ ಒತ್ತಡ ಹೇರುತ್ತಿರುವುದಾಗಿ ಸಿಲೇಸಿಯನ್​ ಬ್ರಿಡ್ಜ್​ ಫೌಂಡೇಷನ್​ನ ಮುಖ್ಯಸ್ಥ ರೋಮನ್​ ಫರ್ಮಾನಿಯಕ್​ ತಿಳಿಸಿದ್ದಾರೆ.

ಸರ್ಕಾರದ ಅನುಮತಿ ಇಲ್ಲದೆ ಉತ್ಖನನ ಕಾರ್ಯ ಕೈಗೊಳ್ಳುವುದು, ಇದಕ್ಕಾಗಿ ಪ್ರಾಯೋಜಕರನ್ನು ಹೊಂದಿಸಿಕೊಳ್ಳುವುದು ಸೇರಿ ಹಲವು ಸಮಸ್ಯೆಗಳು ಉಂಟಾಗುತ್ತವೆ. ಸದ್ಯ ಉತ್ಖನನ ಕಾರ್ಯ ಕೈಗೊಳ್ಳಲು ಅರಮನೆಯ ಹಾಲಿ ಮಾಲೀಕ ಸಮ್ಮತಿಸಿದ್ದಾರೆ. ನಿಧಿಯನ್ನು ಅಡಗಿಸಿಟ್ಟಿರಬಹುದು ಎಂಬ ಪ್ರದೇಶದಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆ ಮಾಡಿದ್ದು, ಸಿ.ಸಿ. ಕ್ಯಾಮರಾಗಳನ್ನು ಅಳವಡಿಸುವ ಮೂಲಕ ಭದ್ರತೆಯನ್ನೂ ಒದಗಿಸಿರುವುದಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net