

ರಾಯಪುರ: ಪಂಜಾಬ್ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು( Navjot Singh Sidhu) ಅವರು ಕ್ಯಾನ್ಸರ್ ಪ್ರಕರಣದಲ್ಲಿ ನೀಡಿದ ಹೇಳಿಕೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. 4ನೇ ಹಂತದ ಕ್ಯಾನ್ಸರ್‌ನಿಂದ ಅವರ ಪತ್ನಿ ಅದ್ಭುತವಾಗಿ ಅಲೋಪತಿ ಔಷಧಗಳಿಲ್ಲದೆ ಚೇತರಿಸಿಕೊಂಡಿದ್ದಾರೆ ಎಂಬ ಅವರ ಹೇಳಿಕೆಗಳ ವಿರುದ್ಧ ಛತ್ತೀಸ್‌ಗಢ ನಾಗರಿಕ ಸಮಾಜ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದೆ.
ಸಿಧು ಅವರ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳನ್ನು ವಾರದೊಳಗೆ ಸಲ್ಲಿಸುವಂತೆ ಸಿಧು ಪತ್ನಿ ನವಜೋತ್ ಕೌರ್ ಅವರಿಗೆ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ಇಲ್ಲವಾದಲ್ಲಿ 850 ಕೋಟಿ ರೂಪಾಯಿ ಪರಿಹಾರ ನೀಡುವಂತೆ ನೋಟಿಸ್ನಲ್ಲಿ ತಿಳಿಸಲಾಗಿದೆ. ಇದಲ್ಲದೆ ಸಿಧು ಅವರ ಹೇಳಿಕೆಗಳು ಕ್ಯಾನ್ಸರ್ ಪೀಡಿತರನ್ನು ದಾರಿತಪ್ಪಿಸುತ್ತಿವೆ. ಆದ್ದರಿಂದ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
ಆಹಾರದ ನಿಯಂತ್ರಣದಿಂದಾಗಿ ತಮ್ಮ ಪತ್ನಿ ನವಜೋತ್ ಕೌರ್ ಅವರು 4ನೇ ಹಂತದ ಕ್ಯಾನ್ಸರ್ (ಸ್ತನ ಕ್ಯಾನ್ಸರ್) ನಿಂದ ಗುಣಮುಖರಾಗಿದ್ದಾರೆ ಎಂದು ಸಿಧು ಇತ್ತೀಚೆಗೆ ಹೇಳಿದ್ದರು. ಸಕ್ಕರೆ ಪದಾರ್ಥಗಳಿಂದ ದೂರವಿದ್ದು, ನಿಂಬೆ ರಸ, ಹಸಿರೆಲೆ, ಬೇವು, ತುಳಸಿ ಮುಂತಾದ ಪದಾರ್ಥಗಳನ್ನು ಬಳಸಿ ಕೇವಲ 40 ದಿನಗಳಲ್ಲಿ ಅವರ ಪತ್ನಿ ವೈದ್ಯಕೀಯ ಚಿಕಿತ್ಸೆ ಪಡೆಯದೆ ಕ್ಯಾನ್ಸರ್‌ನಿಂದ ಮುಕ್ತಿ ಪಡೆದಿದ್ದಾರೆ ಎಂದು ತಿಳಿಸಿದ್ದರು.
ನವಜೋತ್ ಸಿಂಗ್ ಸಿಧು ಅವರ ಈ ಹೇಳಿಕೆಗಳು ಸಂಶಯಾಸ್ಪದ, ದಾರಿತಪ್ಪಿಸುವ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಇತರರಿಗೆ ಅಪಾಯಕಾರಿ ಎಂದು ಸೊಸೈಟಿ ಸಂಚಾಲಕ ಡಾ.ಕುಲದೀಪ್ ಸೋಲಂಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅನೇಕ ವೈದ್ಯಕೀಯ ತಜ್ಞರು ಮತ್ತು ಆಂಕೊಲಾಜಿಸ್ಟ್‌ಗಳು ಸಹ ಸಿಧು ಅವರ ಕಾಮೆಂಟ್‌ಗಳನ್ನು ಖಂಡಿಸಿದ್ದಾರೆ. ಸಿಧು ಹೇಳಿಕೆಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ, ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ ಮತ್ತು ಕೀಮೋಥೆರಪಿಯಂತಹ ಸಾಬೀತಾದ ಚಿಕಿತ್ಸೆಗಳಿಂದ ಮಾತ್ರ ಕ್ಯಾನ್ಸರ್ ಅನ್ನು ಗುಣಪಡಿಸಬಹುದು ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)