

ನ್ಯೂಯಾರ್ಕ್: 'ಆನಂದ- ಅನುಭವ-ಅನುಬಂಧ' ಎಂಬ ಟ್ಯಾಗ್ಲೈನ್ನೊಂದಿಗೆ ಸೆ. 1, 2 ಮತ್ತು 3 ರಂದು ಅಮೆರಿಕ ದೇಶದ, ಟೆಕ್ಸಾಸ್ ರಾಜ್ಯದ ಆಸ್ಟಿನ್ನಲ್ಲಿ ನಡೆದ '7ನೇ ನಾವಿಕ ವಿಶ್ವ ಕನ್ನಡ ಸಮಾವೇಶ 2023' ಭಾನುವಾರ ಮುಕ್ತಾಯಗೊಂಡಿತು. ಈ ಮಹಾ ಸಮ್ಮೇಳನದಲ್ಲಿ ಅಮೆರಿಕದ ಮೂಲೆ ಮೂಲೆಗಳಿಂದ ಬಂದಿದ್ದ ಸುಮಾರು ಮೂರು ಸಾವಿರ ಜನರು ಭಾಗವಹಿಸಿದ್ದರು.
ಪುಟಾಣಿಗಳ ಜತೆ ಸಖತ್ ಸ್ಟೆಪ್ಸ್ ಹಾಕಿದ ಶಿವಣ್ಣ: ಸಮ್ಮೇಳನದಲ್ಲಿ ಶಿವಣ್ಣ ಅಮೆರಿಕದಲ್ಲಿ ಹುಟ್ಟಿ ಬೆಳೆದ ಕನ್ನಡ ಮಕ್ಕಳ ಜೊತೆ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದರು. ಶಿವಣ್ಣ ಅವರ ಪತ್ನಿ ಗೀತಾ, ಅಮೆರಿಕದ ಕನ್ನಡಿಗರ ಮಾತೃ ಭಾಷೆಯ ಅಭಿಮಾನವನ್ನು ಮುಕ್ತಕಂಠದಿಂದ ಹೊಗಳಿದರು. ಹಾಗೆಯೇ ಶಿವಣ್ಣ, 14 ವರ್ಷಗಳ ಹಿಂದೆ ಲಾಸ್ ಎಂಜಲೀಸ್ ನಗರದಲ್ಲಿ ಮೊದಲನೇ ನಾವಿಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ್ದನ್ನು ತುಂಬು ಹೃದಯದಿಂದ ಸ್ಮರಿಸಿದರು.
ನೂತನ ಅಧ್ಯಕ್ಷರಾಗಿ ಶಿವಕುಮಾರ್ ಬೆಂಗಳೂರು: ಇದೇ ಸಂದರ್ಭದಲ್ಲಿ ನಾವಿಕ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಿವಕುಮಾರ್ ಬೆಂಗಳೂರು ಅವರನ್ನು ಅಧ್ಯಕ್ಷ ಮಂಜುನಾಥ್ ರಾವ್ ವೇದಿಕೆ ಮೇಲೆ ಸನ್ಮಾನಿಸಿದರು.
ಶಕ್ತಿಧಾಮ: ವಲ್ಲಿಶ ಶಾಸ್ತ್ರಿ ನಡೆಸಿಕೊಟ್ಟ ಪ್ರೈಮ್ ಟೈಮ್ ಕಾರ್ಯಕ್ರಮದಲ್ಲಿ ಶಿವಣ್ಣ ಮತ್ತು ಗೀತಾ ಅವರು ಎಲೆಮರೆಯ ಕಾಯಿಯಂತೆ ಸುಮಾರು 25+ ವರ್ಷಗಳಿಂದ ನಡೆಸಿಕೊಂಡು ಬಂದ "ಶಕ್ತಿಧಾಮ" ಸಂಸ್ಥೆಯ ಬಗ್ಗೆ ವಿವರವಾಗಿ ತಿಳಿಸಿದರು. ಈ ಸಂಸ್ಥೆಯ ಮುಖ್ಯ ಧ್ಯೇಯವೆಂದರೆ ಶೋಷಿತ ಮಹಿಳೆಯರ ಮತ್ತು ಅಶಕ್ತ ಅನಾಥ ಮಕ್ಕಳ ಸಬಲೀಕರಣದ, ಕಲ್ಯಾಣದ ಯೋಚನೆಗಳಾಗಿವೆ.
ಪ್ರೇಕ್ಷಕರನ್ನು ರಂಜಿಸಿದ ಅರ್ಜುನ್ ಜನ್ಯ-ರಘುದೀಕ್ಷಿತ್: ಕನ್ನಡ ಸಿನಿಮಾ ರಂಗದ ಪ್ರಸಿದ್ಧ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡ ಪ್ರೈಂಟೈಂನಲ್ಲಿ ಪ್ರದರ್ಶನ ನೀಡಿತು. ಖ್ಯಾತ ಹಿನ್ನೆಲೆ ಗಾಯಕರಾದ ವ್ಯಾಸರಾಜ ಸಾಸೋಲೆ, ಕೀರ್ತನ್ ಹೊಳ್ಳ, ಇಂದು ನಾಗರಾಜ್, ಐಶ್ವರ್ಯ ರಂಗ ರಾಜನ್ ಮುಂತಾದ ಗಾಯಕರು ಪ್ರೇಕ್ಷಕರನ್ನು ರಂಜಿಸಿದರು.
ಆಸ್ಟಿನ್ ಕನ್ನಡ ಸಂಘದವರು ನಡೆಸಿಕೊಟ್ಟ ತುಳುನಾಡ ಐಸಿರಿ ಪ್ರಮುಖ ಆಕರ್ಷಣೆಗಳು ಒಂದಾಗಿತ್ತು. ಉತ್ತರ ಕರ್ನಾಟಕದ ಪ್ರಸಿದ್ಧ ಸಹೋದರರಾದ ಖಾನ್ ಬ್ರದರ್ಸ್ ಪ್ರೇಕ್ಷಕರನ್ನು ರಂಜಿಸಿದರು. "ಬೀಟ್ ಗುರುಸ್ " ಮ್ಯೂಸಿಕ್ ಬ್ಯಾಂಡ್ ವಿನೂತನ ರೀತಿಯಲ್ಲಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು. ಶನಿವಾರ ಸಂಜೆ ಪ್ರೈಮ್ ಶೋನಲ್ಲಿ ರಘು ದೀಕ್ಷಿತ್ ಪ್ರೇಕ್ಷಕರನ್ನು ಸಂಗೀತ ಲೋಕಕ್ಕೆ ತೆಗೆದುಕೊಂಡು ಹೋಗಿದ್ದರು.
ಸಮಾವೇಶದಲ್ಲಿ ಮೂರು ದಿನಗಳ ಕಾಲ ಸತತವಾಗಿ ಇನ್ವೆಸ್ಟ್ಮೆಂಟ್ ಫೋರಮ್, ವುಮೆನ್ಸ್ ಫೋರಮ್, ಸಾಹಿತ್ಯ ಗೋಷ್ಠಿ , ಆಧ್ಯಾತ್ಮಿಕ ವೇದಿಕೆ, ವೈದ್ಯರ ಫೋರಮ್ , ಮೆರವಣಿಗೆ ಹೀಗೆ ಅನೇಕ ಕಾರ್ಯಕ್ರಮಗಳು ನಡೆದವು. ಈ ಸಮಾವೇಶದಲ್ಲಿ ಅನಿವಾಸಿಯರು ಮಾತ್ರವಲ್ಲದೇ, ಕರ್ನಾಟಕದ ಖ್ಯಾತನಾಮ ಕಲಾವಿದರು ವೈವಿದ್ಯಮಯ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಹೊಸ ಸರ್ಕಾರದಿಂದ ಸಹಕಾರ: ಕರ್ನಾಟಕ ರಾಜ್ಯದ ಪ್ರತಿನಿಧಿಗಳಾಗಿ ಡಾ. ಎಸ್ ರಾಮಾನುಜ ಮತ್ತು ಮಹಮ್ಮದ್ ರಫೀ ಪಾಶ ಭಾಗವಹಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಪರವಾಗಿ ಅನಿವಾಸಿ ಕನ್ನಡಿಗರಿಗೆ ಶುಭಾಶಯ ಮತ್ತು ಹೊಸ ಸರ್ಕಾರದಿಂದ ನಾವಿಕ ಸಂಸ್ಥೆಗೆ ಪ್ರೋತ್ಸಾಹ, ಸಹಕಾರ ಮತ್ತು ಬೆಂಬಲ ಕೊಡುವುದಾಗಿ ವ್ಯಕ್ತಪಡಿಸಿದರು.
ಸಂಚಾಲಕರಾದ ಸದಾಶಿವ ಕಲ್ಲೂರ್ ಮಹಾಸಮ್ಮೇಳನದ ಆಯೋಜನೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಇವರಿಗೆ ಹೆಗಲುಕೊಟ್ಟವರು ಸಹ-ಸಂಚಾಲಕರಾದ ಹೂಸ್ಟನ್ ಕನ್ನಡ ಸಂಘದ ಅನು ಅಯ್ಯಂಗಾರ್, ಸ್ಯಾನ್ ಅಂಟೋನಿಯೋ ಕುವೆಂಪು ಕನ್ನಡ ಸಂಘದ ಕಾರ್ತಿಕ್ ಹುಲಿಕುಂಟೆ, ಡಲ್ಲಾಸ್ ಕನ್ನಡ ಬಳಗದ ಗೌರಿಶಂಕರ್ ಮತ್ತು ಆಸ್ಟಿನ್ ಕನ್ನಡ ಸಂಘದ ಪ್ರಕಾಶ್ ಉಡುಪ ಮುಂತಾದ ನಾಯಕರು. ಕರ್ನಾಟಕದ ಪ್ರಖ್ಯಾತ ಯುವ ಸ್ಟಾಂಡ್ ಅಪ್ ಕಾಮಿಡಿಯನ್ಸ್ ಆದ ರಾಘವೇಂದ್ರ ಆಚಾರ್, ಕಾರ್ತಿಕ್ ಪತ್ತಾರ್ ಮತ್ತು ನಿರೂಪ್ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದರು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಶಿವಣ್ಣ ದಂಪತಿಗಳು: ನಾವಿಕ ಮೆರವಣಿಗೆಯಲ್ಲಿ ಶಿವಣ್ಣ ದಂಪತಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಈ ಮೆರವಣಿಗೆಯಲ್ಲಿ ಕರ್ನಾಟಕದ ವಿವಿಧ ಪ್ರದೇಶಗಳ ಚರಿತ್ರೆಯನ್ನು, ಪರಂಪರೆಯನ್ನು ಪ್ರದರ್ಶಿಸಲಾಯಿತು. ಕನ್ನಡದ ಹೆಸರಾಂತ ಸಾಹಿತಿ ಡಾ. ಗಜಾನನ ಶರ್ಮ ಅವರೊಂದಿಗೆ ಮುಕ್ತ "ಸಂವಾದ" ವನ್ನು ಪ್ರಸ್ತುತಪಡಿಸಲಾಯಿತು. ಸಮಾವೇಶದಲ್ಲಿ ರಂಗಸ್ಥಳ ನಾಟಕ , ನಾವಿಕ ಕೋಗಿಲೆ ಗಾಯನ ಸ್ಪರ್ಧೆ, ನೃತ್ಯೋತ್ಸವ ನೃತ್ಯ , ಶೃಂಗಾರ ಸಿರಿ ಫ್ಯಾಶನ್ ಶೋ ಈಗ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಕರ್ನಾಟಕದ ಪ್ರಾದೇಶಿಕ ವೈವಿಧ್ಯಮಯ ಸವಿ ಭೋಜನವನ್ನು ಮೂರು ದಿನಗಳ ಕಾಲ ಕನ್ನಡಿಗರು ಸವಿದರು.