ಪುಣ್ಯ ಪ್ರದಾನಿಸುವ ಮಹಾಗೌರಿ; ನವರಾತ್ರಿ ವೈಭವ-7

Navarathri
Published on
| ಸ್ವಾಮಿ ಶಾಂತಿವ್ರತಾನಂದ ಶ್ರೀರಾಮಕೃಷ್ಣ ಆಶ್ರಮ, ಮೈಸೂರು

ನವರಾತ್ರಿಯ ಅಷ್ಟಮಿಯಂದು ಎಂಟನೆಯ ದಿವಸ ಮಹಾಗೌರಿಯನ್ನು ಆರಾಧಿಸುತ್ತಾರೆ. ಈಕೆಯ ಶಕ್ತಿ ಅಪರಿಮಿತ ಹಾಗೂ ಅಮೋಘವಾದುದು. ಭಕ್ತರ ಕೋರಿಕೆಗಳನ್ನು ಬೇಗನೆ ಈ ದೇವಿ ದಯಪಾಲಿಸುತ್ತಾಳೆ. ಇವಳ ಅರ್ಚನೆಯಿಂದ ಎಲ್ಲ ರೀತಿಯ ಪಾಪಗಳು ನೀಗಿ, ಅಪಾರ ಪುಣ್ಯವು ದೊರೆಯುತ್ತದೆ. ಪಾವಿತ್ರ್ಯ ಹಾಗೂ ಸ್ವಚ್ಛತೆಯ ದೇವತೆಯೀಕೆ. ಶಂಖ-ಚಂದ್ರ-ಕುಂದ ಪುಷ್ಪದಷ್ಟು ಬೆಳ್ಳಗಿರುವಳೆಂದೂ ಹೇಳಲಾಗಿದೆ. ಎಲ್ಲರನ್ನೂ ಕ್ಷಮಿಸುವುದಕ್ಕೆ ಹಾಗೂ ಪಾಪಿಗಳನ್ನು ಪರಿಶುದ್ಧಗೊಳಿಸುವುದಕ್ಕೆ ಮಹಾಗೌರಿ ಪ್ರಸಿದ್ಧಳು. ತಪಸ್ಯೇನೆ ಮಹಾನ್ ‘ಗೌರಃ’, ಅಂದರೆ ‘ತೇಜಸ್ಸ’ನ್ನು ಪ್ರಾಪ್ತಮಾಡಿಕೊಂಡವಳೇ ಮಹಾಗೌರಿ.

ಶ್ವೇತೇ ವೃಕ್ಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ |

ಮಹಾಗೌರೀ ಶುಭಂ ದದ್ಯಾತ್ ಮಹಾದೇವ ಪ್ರಮೋದದಾ ||

ಬಿಳಿಯ ವಸ್ತ್ರ, ಬಿಳಿಯ ಆಭರಣಗಳನ್ನು ಹೊಂದಿರುವ ಈ ದೇವಿ ಶ್ವೇತವರ್ಣದವಳಾಗಿದ್ದಾಳೆ. ಎಂಟು ವರ್ಷದ ಕನ್ಯೆ ಇವಳು. ಚತುರ್ಭಜದಲ್ಲಿ, ಮೇಲಿನ ಬಲಹಸ್ತ ಅಭಯಮುದ್ರೆಯಲ್ಲಿದೆ. ಕೆಳಗಿನ ಬಲಹಸ್ತದಲ್ಲಿ ತ್ರಿಶೂಲವನ್ನು ಹಿಡಿದಿದ್ದಾಳೆ. ಮೇಲಿನ ಎಡಹಸ್ತದಲ್ಲಿ ಡಮರು, ಕೆಳಗಿನ ಎಡಹಸ್ತದಲ್ಲಿ ವರಮುದ್ರೆಯನ್ನು ಧರಿಸಿದ್ದಾಳೆ. ಅತ್ಯಂತ ಶಾಂತಸ್ವರೂಪ ಈಕೆಯದು. ಈ ದೇವಿಯ ವಾಹನ ವೃಷಭ.

ಮಹಾಗೌರಿಯ ಕುರಿತು ಅನೇಕ ಕಥೆಗಳಿವೆ. ಒಂದು ಕಥೆ ಪ್ರಕಾರ, ಪಾರ್ವತಿ ಶಿವನನ್ನು ಪತಿಯನ್ನಾಗಿ ಪಡೆಯಲೆಂದು ಘೊರ ತಪಸ್ಸನ್ನು ಕೈಗೊಂಡಳು. ಆ ಸಮಯದಲ್ಲಿ ಅವಳ ದೇಹ ಚಳಿ-ಬಿಸಿಲು, ಮಳೆ-ಧೂಳಿಗೆ ಒಳಗಾಯಿತು. ಆದ ಕಾರಣ ಅವಳ ಮೈಬಣ್ಣ ಕಪ್ಪಾಗಿತ್ತು. ಅನೇಕ ವರ್ಷಗಳ ತಪಸ್ಸಿನ ನಂತರ, ಸಂತುಷ್ಟನಾದ ಪರಶಿವನು ಪ್ರತ್ಯಕ್ಷನಾಗಿ ಅವಳ ಇಷ್ಟಾರ್ಥವನ್ನು ಈಡೇರಿಸಿದ. ಆ ಸಮಯದಲ್ಲಿ ಶಿವನ ಜಟೆಯಿಂದ ಹೊರಬಂದ ತಾಯಿ ಗಂಗೆಯು ಪಾರ್ವತಿ ದೇವಿಯ ಮೈಯನ್ನು ಶುಚಿಗೊಳಿಸಿ ದಿವ್ಯಕಾಂತಿಯನ್ನು ನೀಡಿದಳು. ಆದ್ದರಿಂದ ಇವಳನ್ನು ಮಹಾಗೌರಿ ಎಂದು ಕರೆಯುತ್ತಾರೆ. ಗೌರ ಎಂದರೆ ಬಿಳಿ ಬಣ್ಣ. ಮಹಾಗೌರಿಯನ್ನು ಪೂಜಿಸುವುದರಿಂದ ಸಮಸ್ತ ಶ್ರೇಯಸ್ಸೂ ದೊರೆಯುವುದು. ಅನೇಕ ಅಲೌಕಿಕ ಸಿದ್ಧಿಗಳೂ ಲಭಿಸುತ್ತವೆ. ಶುದ್ಧ ಭಕ್ತಿಯಿಂದ ಪ್ರಾರ್ಥಿಸಿದರೆ ಈ ದೇವಿ ಶೀಘ್ರ ಒಲಿಯುತ್ತಾಳೆ.

ಜಗದ್ಗುರು ಶ್ರೀ ಆದಿಶಂಕರಾಚಾರ್ಯ ವಿರಚಿತ ಶ್ರೀ ಗೌರೀ ದಶಕಂ

ಆಶಾಪಾಶಕ್ಲೇಶವಿನಾಶಂ ವಿದಧಾನಾಂ

ಪಾದಾಂಭೋಜಧ್ಯಾನಪರಾಣಾಂ ಪುರುಷಾಣಾಂ |

ಈಶಾಂ ಈಶಾರ್ಧಾಂಗಹರಾಂ ತಾಮಭಿರಾಮಾಂ

ಗೌರೀಂ ಅಂಬಾಂ ಅಂಬುರುಹಾಕ್ಷೀಂ ಅಹಮೀಡೇ ||

ಮಂತ್ರ: ಓಂ ದೇವೀ ಮಹಾಗೌರ್ಯು ನಮಃ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net