ಸೆಟ್ಟೇರಿದ ‘ನವ ದಿಂಗತ’: ದುರ್ಗಾಮೋಹನ್ ನಿರ್ದೇಶನದ ಸಿನಿಮಾ

nava dingatha
Published on

ಬೆಂಗಳೂರು: ನಿರ್ದೇಶಕ ದುರ್ಗಾಮೋಹನ್ ಕಥೆ, ಚಿತ್ರಕಥೆ, ಸಾಹಿತ್ಯ ಬರೆದು ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ‘ನವದಿಗಂತ’. ಈ ಹಿಂದೆ ಮೂರು ಕಿರುಚಿತ್ರಗಳನ್ನು ನಿರ್ದೇಶಿಸಿದ್ದ ದುರ್ಗಾ ಮೋಹನ್ ಇಂಡಿಯನ್ ಫಿಲ್ಮಂ ಹೌಸ್‌ನಿಂದ ಉತ್ತಮ ಕಥೆ ಹಾಗೂ ಚಿತ್ರಕಥೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದ ಖ್ಯಾತಿ ಇವರಿಗಿದೆ. ಇದೀಗ ‘ನವ ದಿಂಗತ’ ಸಿನಿಮಾದ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇತ್ತೀಚೆಗೆಷ್ಟೇ ಶಕ್ತಿ ದೇವತೆ ಸರ್ಕಲ್ ಮಾರಮ್ಮನ ದೇವಸ್ಥಾನದಲ್ಲಿ ಚಿತ್ರೀಕರಣಕ್ಕೆ ಮುಹೂರ್ತ ನೆರವೇರಿಸಲಾಯಿತು. ‘ಉಸಿರೇ’ ಸಿನಿಮಾದ ನಿರ್ಮಾಪಕಿ ಲಕ್ಷ್ಮೀ ಹರೀಶ್ ಕ್ಯಾಮರಾ ಆನ್ ಮಾಡಿದರು.ನಟ ಭಾರ್ಗವ್ ಕ್ಯ್ಲಾಪ್ ಮಾಡಿದರು.
ಇದೊಂದು ವಿದ್ಯಾರ್ಥಿ ಜೀವನದ ಕಥೆಯಾಗಿದೆ. ದುರ್ಗಾ ಮೋಹನ್, ‘ಪ್ರತಿಯೊಬ್ಬರಿಗೂ ಪ್ರತಿಭೆ ಅನ್ನುವುದು ಹುಟ್ಟಿನಿಂದಲೇ ಬಂದಿರುತ್ತದೆ. ಜೀವನಕ್ಕೋಸ್ಕರ ಬೇರೆ ಉದ್ಯೋಗ ಮಾಡುತ್ತಿರುತ್ತೇವೆ. ನಿಜವಾದ ಸಂತೋಷ ಸಿಗುವುದು ಕಲೆಯಿಂದ ಅಂತ ತಿಳಿಯದೆ ಜೀವನ ಸಾಗಿಸುತ್ತಿರುತ್ತೇವೆ. ವೃತ್ತಿ-ಪ್ರವೃತ್ತಿಯನ್ನು ಬದುಕಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ವಿದ್ಯಾರ್ಥಿ ದೆಸೆಯಿಂದ ಬಂದಾಗ ಮಾತ್ರ, ಕೊನೆ ತನಕ ಸಾರ್ಥಕ ಜೀವನ ನಡೆಸಬಹುದು ಎಂಬುದನ್ನು ಈ ಸಿನಿಮಾದ ಮೂಲಕ ತೋರಿಸಲಾಗಿದೆ. ಪಾಲಕರಿಗೆ ಹಾಗೂ ವಿದ್ಯಾರ್ಥಿಗಳಿಗೂ ಒಂದು ಒಳ್ಳೆಯ ಸಂದೇಶ ಕೊಡಲಿದೆ’ ಎಂದರು.

ಚಿತ್ರದಲ್ಲಿ ಪ್ರೊಫೆಸರ್ ಆಗಿ ಮೇಘನಾ, ವಿದ್ಯಾರ್ಥಿಗಳಾಗಿ ಚೇತನ್, ರೋಷನ್, ಅಭಿಜಿತ್, ಪುಷ್ಪಾ, ಯಮುನಾ, ಆಶುತೋಷ್, ಭೋಜರಾಜ, ಸಹದ್ಯೋಗಿಗಳಾಗಿ ಅಜಯ್, ಸಂಕೀರ್ತನ್ ಉಳಿದಂತೆ ಅನಿಲ್ ಮಾರ್ಟಿಬನ್, ಪ್ರೀತಿ ಪಾಟೀಲ್, ನವೀನ್, ಸಂಧ್ಯಾ, ಮೂರ್ತಿ, ಲಕ್ಷ್ಮೀ, ಪ್ರೀತಂ, ವಾಸುದೇವಚಾರ್ ತಾರಾಗಣದಲ್ಲಿದ್ದಾರೆ. ನಟ ಭಾರ್ಗವ್ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಲ್ಕು ಹಾಡುಗಳಿಗೆ ಶರತ್-ಪ್ರಫುಲ್ಲಾ ಸಂಗೀತ, ಪ್ರಜ್ವಲ್ ವಿನೋದ್ ಛಾಯಾಗ್ರಹಣ ಚಿತ್ರಕ್ಕಿದೆ. ದಾಬಸಪೇಟೆ, ಬೆಂಗಳೂರು ಸುತ್ತಮುತ್ತ 30 ದಿನಗಳ ಕಾಲ ಎರಡು ಹಂತದಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ. ಪ್ರೊಫೆಸರ್, ಇಂಜಿನಿಯರ್ ಹಾಗೂ ಇತರ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವವರು ಚಿತ್ರದಲ್ಲಿ ಕಲಾವಿದರು, ತಂತ್ರಜ್ಘರಾಗಿ ಗುರುತಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net