

ನವದೆಹಲಿ: ದೇಶದ ಮೊದಲ ವೈದ್ಯಕೀಯ ಉಪಕರಣಗಳ ಉದ್ಯಾನ (ಮೆಡಿಕಲ್ ಡಿವೈಸ್ ಪಾರ್ಕ್-ಮೆಡ್ಸ್ ಪಾರ್ಕ್) ಕೇರಳದಲ್ಲಿ ಸ್ಥಾಪನೆ ಆಗಲಿದೆ. ಹೆಚ್ಚಿನ ರಿಸ್ಕ್ ಹೊಂದಿರುವ ವೈದ್ಯಕೀಯ ಉಪಕರಣಗಳ ವಲಯವನ್ನು ಗಮನದಲ್ಲಿ ಇರಿಸಿಕೊಂಡು ಈ ಮೆಡ್ಸ್ ಪಾರ್ಕ್ ನಿರ್ಮಾಣವಾಗಲಿದೆ.
ಇದರಿಂದ ಅಭಿವೃದ್ಧಿ ಮತ್ತು ಸಂಶೋಧನೆ, ಪರೀಕ್ಷೆ, ಮೌಲ್ಯಮಾಪನ ಸಂಬಂಧಿತ ಸಂಶೋಧನೆಗಳಿಗೆ ಸಂಬಂಧಿಸಿದ ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಇದು ಸಹಕಾರಿ ಆಗಲಿದೆ. ಮೆಡ್ಸ್ ಪಾರ್ಕ್ ನಿರ್ಮಾಣದ ಬಗ್ಗೆ ಕೇಂದ್ರದ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಸಚಿವಾಲಯ ಅಧಿಕೃತ ಮಾಹಿತಿ ಹೊರಹಾಕಿದೆ. ಈ ನೂತನ ಮೆಡ್ಸ್ ಪಾರ್ಕ್ ನಿರ್ಮಾಣ ಸಂಬಂಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಶ್ರೀಚಿತ್ರ ತಿರುಣಾಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್ ಟೆಕ್ನಾಲಜಿ, ಇನ್ಸ್ಟಿಟ್ಯೂಟ್ ಆಫ್ ಡಿಪಾರ್ಟ್ಮೆಂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ, ಕೇರಳ ಸರ್ಕಾರದ ಕೈಗಾರಿಕಾ ಅಭಿವೃದ್ಧಿ ನಿಗಮ, ಕೇರಳ ಸರ್ಕಾರದ ಇಂಡಸ್ಟ್ರಿಯಲ್ ಆ್ಯಂಡ್ ಇನ್ವೆಸ್ಟ್ಮೆಂಟ್ ಪ್ರಮೋಷನ್ ಏಜೆನ್ಸಿಗಳ ಸಹಯೋಗದಲ್ಲಿ ತಿರುವನಂತಪುರದ ತೊನ್ನಕ್ಕಲ್ ಲೈಫ್ ಸೈನ್ಸ್ ಪಾರ್ಕ್ನಲ್ಲಿ ಮೆಡ್ಸ್ ಪಾರ್ಕ್ ಸ್ಥಾಪನೆಗೊಳ್ಳಲಿದೆ. ಈ ಮೆಡ್ಸ್ ಪಾರ್ಕ್ನಿಂದ 1200 ಮಂದಿಗೆ ನೇರವಾಗಿ ಉದ್ಯೋಗ ಸಿಗಲಿದ್ದು, ಪರೋಕ್ಷವಾಗಿ 4ರಿಂದ 5 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎನ್ನಲಾಗಿದೆ. (ಏಜೆನ್ಸೀಸ್)