ಸನಾತನ ಧರ್ಮಕ್ಕೆ ಧಕ್ಕೆ ಆದ್ರೆ ಸುಮ್ಮನಿರಲ್ಲ!...ರಾಮಮಂದಿರ ದೇಣಿಗೆ ಹಗರಣದ ಬೆನ್ನಲ್ಲೇ ಸಿಎಂ ಯೋಗಿ ಖಡಕ್ ವಾರ್ನಿಂಗ್ | Ayodhya RamMandir

Ayodhya RamMandir
Ayodhya RamMandir
Published on
Ayodhya RamMandir: ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಭಕ್ತರು ನೀಡಿದ ದೇಣಿಗೆ ಮತ್ತು ಕಾಣಿಕೆಯನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಎಂಟು ಜನರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಈ ಹಗರಣದ ಕುರಿತು ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸನಾತನ ಮೌಲ್ಯಗಳು ಮತ್ತು ಸಾರ್ವಜನಿಕರ ಶ್ರದ್ಧೆಯೊಂದಿಗೆ ಆಟವಾಡಲು ಯತ್ನಿಸುವವರ ವಿರುದ್ಧ ನಮ್ಮ ಸರ್ಕಾರ ಶೂನ್ಯ ಸಹಿಷ್ಣುತೆ (Zero-tolerance) ನೀತಿಯನ್ನು ಅಳವಡಿಸಿಕೊಂಡಿದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ವಿಶೇಷ ತನಿಖಾ ತಂಡ (SIT) ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿದ ತಕ್ಷಣವೇ ಸರ್ಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ದೇವರಿಯಾದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, ಅಯೋಧ್ಯೆಯ ಘನತೆಗೆ ಧಕ್ಕೆ ತರುವ ಯಾವುದೇ ವಿಷಯದಲ್ಲಿ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪುನರುಚ್ಚರಿಸಿದರು.

ವಿರೋಧ ಪಕ್ಷಗಳ ವಿರುದ್ಧ ಯೋಗಿ ತೀವ್ರ ವಾಗ್ದಾಳಿ

ಇದೇ ವೇಳೆ, ಈ ಸೂಕ್ಷ್ಮ ವಿಷಯವನ್ನು ರಾಜಕೀಯಗೊಳಿಸುತ್ತಿರುವ ವಿಪಕ್ಷಗಳ ವಿರುದ್ಧ ಸಿಎಂ ಯೋಗಿ ತೀವ್ರ ವಾಗ್ದಾಳಿ ನಡೆಸಿದರು. ಒಂದು ಕಡೆ ಶ್ರೀರಾಮನೇ ಇಲ್ಲ ಎಂದು ಹೇಳಿ ಕೋರ್ಟ್‌ಗಳಲ್ಲಿ ವಕೀಲರ ದಂಡನ್ನೇ ನಿಲ್ಲಿಸಿದವರಿದ್ದಾರೆ. ಇನ್ನೊಂದು ಕಡೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದವರ ಮೇಲೆ ಲಾಠಿ ಪ್ರಹಾರ ನಡೆಸಿ, ಗುಂಡು ಹಾರಿಸಿದವರಿದ್ದಾರೆ. ರಾಮನ ಹೆಸರೆತ್ತಿದರೆ ಗುಂಡು ಹೊಡಿಸುತ್ತಿದ್ದವರು ಈಗ ಭಕ್ತರ ನಂಬಿಕೆಗೆ ಧಕ್ಕೆಯಾಗಿದೆ ಎಂದು ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಪಕ್ಷದ ವಿರುದ್ಧವೂ ಹರಿಹಾಯ್ದ ಯೋಗಿ ಆದಿತ್ಯನಾಥ್​, ಕಾಂಗ್ರೆಸ್ ಕೇವಲ ಭ್ರಷ್ಟಾಚಾರವನ್ನು ಸಾಂಸ್ಥೀಕರಣಗೊಳಿಸುವುದಷ್ಟೇ ಅಲ್ಲದೆ ದೇಶವನ್ನು ದುರ್ಬಲಗೊಳಿಸಿತು. ಹಿಂದೆ ರಾಮನವಮಿ ಮೆರವಣಿಗೆಗಳ ವೇಳೆ ಗಲಭೆಗೆ ಪ್ರಚೋದನೆ ನೀಡಿದವರು, ಕೃಷ್ಣ ಜನ್ಮಾಷ್ಟಮಿ ಆಚರಣೆಗೆ ನಿರ್ಬಂಧ ಹೇರಿದವರು ಮತ್ತು ಕನ್ವರ್ ಯಾತ್ರೆ ಹಾಗೂ ದುರ್ಗಾಪೂಜೆಗೆ ಅಡ್ಡಿಪಡಿಸಿದವರೇ ಈಗ ಅಯೋಧ್ಯೆಯತ್ತ ಬೆರಳು ತೋರಿಸುತ್ತಿದ್ದಾರೆ, ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

ಯಾರ್ಯಾರ ಬಂಧನವಾಗಿದೆ..?

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಕೃಷ್ಣ ಮೋಹನ್ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಎಂಟೂ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಮಾಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮ್ ಶಂಕರ್ ಯಾದವ್ ಅಲಿಯಾಸ್ ತಿನ್ನು ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಕಳ್ಳತನ, ನಂಬಿಕೆ ದ್ರೋಹ, ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರದ ನಿಯಮಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜೂನ್ 13 ರಂದು ರಚನೆಯಾಗಿದ್ದ ಎಸ್‌ಐಟಿ ತಂಡದ ತನಿಖೆಯ ವೇಳೆ, ಮಂದಿರದ ದೇಣಿಗೆ ನಿರ್ವಹಣಾ ವ್ಯವಸ್ಥೆಯಲ್ಲಿ ಹಲವು ಗಂಭೀರ ಲೋಪದೋಷಗಳು ಪತ್ತೆಯಾಗಿವೆ. ಹಣದ ನಿರ್ವಹಣೆ, ನೌಕರರ ಹಿನ್ನೆಲೆ ಪರಿಶೀಲನೆ, ಸಿಸಿಟಿವಿ ಕಣ್ಗಾವಲು ಮತ್ತು ಮಂದಿರದ ಆವರಣದಿಂದ ಬ್ಯಾಂಕ್‌ಗೆ ಹಣ ವರ್ಗಾಯಿಸುವ ಪ್ರಕ್ರಿಯೆಗಳಲ್ಲಿ ಭದ್ರತೆಯ ಕೊರತೆ ಇರುವುದು ಕಂಡುಬಂದಿದೆ. ಖಾಸಗಿ ಏಜೆನ್ಸಿಯೊಂದರ ಮೂಲಕ ಸ್ಥಳೀಯರ ಶಿಫಾರಸಿನ ಮೇರೆಗೆ ನೇಮಕಗೊಂಡಿದ್ದ ಸಿಬ್ಬಂದಿಯೇ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಭಕ್ತರು ಅರ್ಪಿಸಿದ ಚಿನ್ನ, ಬೆಳ್ಳಿ ಮತ್ತು ಇತರೆ ಬೆಲೆಬಾಳುವ ವಸ್ತುಗಳ ದಾಖಲೆಗಳನ್ನು ಸಹ ಎಸ್‌ಐಟಿ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net