ಮಣಿಪುರಕ್ಕೆ ಹೊಸ ಸಾರಥಿ: ಮುಖ್ಯಮಂತ್ರಿಯಾಗಿ Yumnam Khemchand Singh ಪಟ್ಟಾಭಿಷೇಕ?

Yumnam Khemchand Singh
Yumnam Khemchand Singh
Published on
ನವದೆಹಲಿ/ಇಂಫಾಲ: ಕಳೆದ ಒಂದು ವರ್ಷದಿಂದ ರಾಷ್ಟ್ರಪತಿ ಆಳ್ವಿಕೆಯಲ್ಲಿ ನಲುಗಿದ್ದ ಈಶಾನ್ಯ ರಾಜ್ಯ ಮಣಿಪುರದಲ್ಲಿ ಈಗ ರಾಜಕೀಯ ಬದಲಾವಣೆಯ ಗಾಳಿ ಬೀಸುತ್ತಿದೆ. ದೀರ್ಘಕಾಲದ ಹಿಂಸಾಚಾರ ಮತ್ತು ಅಸ್ಥಿರತೆಯ ನಂತರ, ಭಾರತೀಯ ಜನತಾ ಪಕ್ಷವು ಮಣಿಪುರದ ನೂತನ(Manipur New CM) ಮುಖ್ಯಮಂತ್ರಿಯನ್ನಾಗಿ ಯುಮ್ನಮ್ ಖೇಮಚಂದ್ ಸಿಂಗ್(Yumnam Khemchand Singh) ಅವರನ್ನು ಆಯ್ಕೆ ಮಾಡಿದೆ ಎಂದು ಮೂಲಗಳು ವರದಿ ಮಾಡಿವೆ.
ದೆಹಲಿಯಲ್ಲಿ ನಡೆದ ಬಿಜೆಪಿಯ ಹಿರಿಯ ನಾಯಕರು ಮತ್ತು ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ರಾಜ್ಯದಲ್ಲಿ ಮತ್ತೆ ಪ್ರಜಾಪ್ರಭುತ್ವದ ಸರ್ಕಾರವನ್ನು ಸ್ಥಾಪಿಸಲು ಬಿಜೆಪಿ ಸರ್ವಸನ್ನದ್ಧವಾಗಿದೆ ಎಂದು ವರದಿ ಉಲ್ಲೇಖಿಸಿದೆ.

ರಾಷ್ಟ್ರಪತಿ ಆಳ್ವಿಕೆಗೆ ತೆರೆ!

ಫೆಬ್ರವರಿ 13 (2025) ರಂದು ಮುಖ್ಯಮಂತ್ರಿಯಾಗಿದ್ದ ಎನ್. ಬಿರೇನ್ ಸಿಂಗ್ ಅವರು ರಾಜೀನಾಮೆ ನೀಡಿದ ನಂತರ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರಲಾಗಿತ್ತು. ಇದೀಗ ರಾಷ್ಟ್ರಪತಿ ಆಳ್ವಿಕೆಯ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ನೇತೃತ್ವದ ಬಿಜೆಪಿ ನಾಯಕತ್ವವು ರಾಜ್ಯದ ಆಡಳಿತವನ್ನು ಮತ್ತೆ ಜನಪ್ರತಿನಿಧಿಗಳ ಕೈಗೆ ಒಪ್ಪಿಸಲು ನಿರ್ಧರಿಸಿದೆ.
ಯುಮ್ನಮ್ ಖೇಮಚಂದ್ ಸಿಂಗ್ ಅವರು ಈ ಹಿಂದೆ ಮಣಿಪುರ ವಿಧಾನಸಭೆಯ ಸಭಾಪತಿಯಾಗಿ ಮತ್ತು ಸಂಪುಟ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದು, ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಕಂದಕವನ್ನು ಸರಿಪಡಿಸುವ 'ಸಮಾಧಾನಕಾರ' ನಾಯಕರಾಗಿ ಹೊರಹೊಮ್ಮುವ ನಿರೀಕ್ಷೆಯಿದೆ.
ಖೇಮಚಂದ್ ಸಿಂಗ್ ಆಯ್ಕೆಗೆ ಕಾರಣಗಳೇನು?
ಬಿಜೆಪಿ ಹೈಕಮಾಂಡ್ ಈ ನಿರ್ಧಾರವನ್ನು ಅಷ್ಟು ಸುಲಭವಾಗಿ ತೆಗೆದುಕೊಂಡಿಲ್ಲ. ಖೇಮಚಂದ್ ಸಿಂಗ್ ಅವರ ಆಯ್ಕೆಯ ಹಿಂದೆ ಕೆಲವು ಪ್ರಮುಖ ರಾಜಕೀಯ ಕಾರಣಗಳಿವೆ. ಖೇಮಚಂದ್ ಸಿಂಗ್ ಅವರು ಕಳೆದ ಡಿಸೆಂಬರ್‌ನಲ್ಲಿ ಕುಕಿ ಸಂಘಟನೆಗಳ ನೆಲೆಗಳಿಗೆ ಭೇಟಿ ನೀಡಿ ಶಾಂತಿಯ ಮಾತುಕತೆ ನಡೆಸಿದ್ದರು. ಈ ಮೂಲಕ ಅವರು ಎರಡೂ ಸಮುದಾಯಗಳ ನಡುವೆ ವಿಶ್ವಾಸಾರ್ಹತೆ ಗಳಿಸಿದ್ದಾರೆ. ಮೂಲಗಳ ಪ್ರಕಾರ, ಖೇಮಚಂದ್ ಸಿಂಗ್ ಅವರಿಗೆ ಸಂಘ ಪರಿವಾರದ ಪೂರ್ಣ ಬೆಂಬಲವಿದೆ. ಸಭಾಪತಿಯಾಗಿ ಅವರು ತೋರಿದ ನಿಷ್ಪಕ್ಷಪಾತ ಧೋರಣೆ ಮತ್ತು ಸಚಿವರಾಗಿ ಅವರ ಕೆಲಸದ ವೈಖರಿ ಹೈಕಮಾಂಡ್ ಮೆಚ್ಚುಗೆಗೆ ಪಾತ್ರವಾಗಿದೆ. ಹೀಗಾಗಿ, ಅವರ ಆಯ್ಕೆಯೇ ಸೂಕ್ತ ಎಂದು ಹೇಳಲಾಗುತ್ತಿದೆ.
ಮಣಿಪುರದ ಜನತೆ ಈಗ ಹೊಸ ನಾಯಕತ್ವದ ಮೇಲೆ ಅಪಾರ ಭರವಸೆ ಇಟ್ಟಿದ್ದು, ಖೇಮಚಂದ್ ಸಿಂಗ್ ಅವರು ರಾಜ್ಯದಲ್ಲಿ ಶಾಂತಿಯ ಹೊಸ ಯುಗವನ್ನು ಆರಂಭಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net