

ಆಂಧ್ರಪ್ರದೇಶದ ರಾಯಚೋಟಿಯಲ್ಲಿ ವೈಎಸ್ಆರ್ಸಿಪಿ ಕಚೇರಿ ಸಮೀಪವಿದ್ದ ಹಲವು ವಾಹನಗಳಿಗೆ ಬೆಂಕಿ.
ಆಂಧ್ರದಲ್ಲಿ YSRCP-ಟಿಡಿಪಿ ಕಾರ್ಯಕರ್ತರ ನಡುವೆ ಘರ್ಷಣೆ.
ಕಬ್ಬಿಣದ ರಾಡ್ಗಳಿಂದ ದಾಳಿ, ವಾಹನಗಳ ಮೇಲೆ ಕಲ್ಲು ತೂರಾಟ.
ಅಮರಾವತಿ: ಆಂಧ್ರಪ್ರದೇಶದ ಪುಂಗನೂರು ಪುರಸಭೆಯ ಬಳಿ ಹೈಡ್ರಾಮಾ ನಡೆದಿದೆ. ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಾರ್ಟಿ (YSRCP) ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ, ಕಲ್ಲು ತೂರಾಟ, ಕಬ್ಬಿಣದ ರಾಡ್ನಿಂದ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ತೆಲುಗು ದೇಶಂ ಪಕ್ಷ (ಟಿಡಿಪಿ) ಬೆಂಬಲಿಗರೇ ಈ ಕೃತ್ಯವೆಸಗಿದ್ದಾರೆ ಎಂದು ಸಂಸದ ಮಿಥುನ್ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ
ಆಂಧ್ರಪ್ರದೇಶದ ಪುಂಗನೂರು ಪುರಸಭೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ಗುರುವಾರ ವೈಎಸ್ಆರ್ಸಿಪಿ ಲೋಕಸಭೆಯ ಫ್ಲೋರ್ ಲೀಡರ್ ಹಾಗೂ ರಾಜಂಪೇಟೆ ಸಂಸದ ಪಿ.ವಿ. ಮಿಥುನ್ ರೆಡ್ಡಿ ಅವರ ಬೆಂಗಾವಲು ಪಡೆ ಮೇಲೆ ಟಿಡಿಪಿ ಕಾರ್ಯಕರ್ತರು ಮಾರಕ ದಾಳಿ ನಡೆಸಿದ್ದಾರೆ ಎಂದು ವೈಎಸ್ಆರ್ಸಿಪಿ ಗಂಭೀರ ಆರೋಪ ಮಾಡಿದೆ.
ಪುಂಗನೂರು ಕ್ಷೇತ್ರದಲ್ಲಿ ಸಂಸದ ಮಿಥುನ್ ರೆಡ್ಡಿ ವೈಎಸ್ಆರ್ಸಿಪಿ ಅಭ್ಯರ್ಥಿಗಳೊಂದಿಗೆ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದ ವೇಳೆ, ಟಿಡಿಪಿ ಕಾರ್ಯಕರ್ತರು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ, ಕೋಲು ಹಾಗೂ ಕಬ್ಬಿಣದ ರಾಡ್ಗಳಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಎಕ್ಸ್ನಲ್ಲಿ ವೈರಲ್ ಆದ ವಿಡಿಯೋ ಪ್ರಕಾರ, ಕಚೇರಿಯೊಂದರ ಮುಂದೆ ಗುಂಪು ಗಲಾಟೆ ನಡೆಸಿದೆ. ಮತ್ತೊಂದು ಕಡೆ..ಹೊರಗಡೆ ನಿಂತಿದ್ದ ದುಬಾರಿ ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ. ಪೊಲೀಸರು ದಾಳಿ ಕೋರರನ್ನು ತಡೆಯಲು ಯತ್ನಿಸಿರುವುದು ವಿಡಿಯೋದಲ್ಲಿ ಇದೆ.
ಎಸ್ಆರ್ಸಿಪಿ ಅಭ್ಯರ್ಥಿಗಳು ನಾಮಪತ್ರ ಕೇಂದ್ರಕ್ಕೆ ತಲುಪದಂತೆ ಟಿಡಿಪಿ ನಾಯಕರು ಮತ್ತು ಕಾರ್ಯಕರ್ತರು ಬೆಂಗಾವಲು ಪಡೆಯನ್ನು ತಡೆದು, ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ದಾಳಿಕೋರರನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಮಿಥುನ್ ರೆಡ್ಡಿ ಆರೋಪಿಸಿದರು.
ತಿರುಪತಿ ವೈಎಸ್ಆರ್ಸಿಪಿ ಸಂಸದ ಡಾ. ಎಂ. ಗುರುಮೂರ್ತಿ ಅವರು ಮಿಥುನ್ ರೆಡ್ಡಿ ಅವರ ಮೇಲಿನ ಹಲ್ಲೆ ಯತ್ನವನ್ನು ತೀವ್ರವಾಗಿ ಖಂಡಿಸಿದ್ದು, ವಿರೋಧ ಪಕ್ಷದ ಅಭ್ಯರ್ಥಿಗಳ ದ್ವನಿ ಅಡಗಿಸಲು ಹಾಗೂ ಚುನಾವಣಾ ಪ್ರಕ್ರಿಯೆಯನ್ನು ಅಸ್ತವ್ಯಸ್ತಗೊಳಿಸಲು ಟಿಡಿಪಿ ಸರ್ಕಾರ ತನ್ನ ಕಾರ್ಯಕರ್ತರಿಗೆ ಹಿಂಸಾಚಾರ ನಡೆಸಲು ಅವಕಾಶ ನೀಡಿದೆ ಎಂದು ಆರೋಪಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಬೇಕು, ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಅಭ್ಯರ್ಥಿಗಳಿಗೆ ಸೂಕ್ತ ರಕ್ಷಣೆ ನೀಡಿ ಸುರಕ್ಷಿತವಾಗಿ ನಾಮಪತ್ರ ಸಲ್ಲಿಸಲು ವ್ಯವಸ್ಥೆ ಕಲ್ಪಿಸಬೇಕೆಂದು ಮಾಜಿ ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ರಾಜ್ಯ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ, (ಏಜೆನ್ಸೀಸ್).