

ಜಂತರ್ಮಂತರ್ನಲ್ಲಿ ಸಿಜೆಪಿಯಿಂದ ಪ್ರತಿಭಟನೆ.
ಧ್ರುವ್ ರಾಠಿ ಅವರನ್ನು ಗುರುಗ್ರಾಮದ ನಿವಾಸದಲ್ಲಿ ವಶಕ್ಕೆ.
ಧ್ರುವ್ ರಾಠಿ ಅವರನ್ನು ಶನಿವಾರ ತಡರಾತ್ರಿ ಬಿಡುಗಡೆ ಮಾಡಿದ ದೆಹಲಿ ಪೊಲೀಸರು.
ನವದೆಹಲಿ: ಜಂತರ್ಮಂತರ್ನಲ್ಲಿ ಸಿಜೆಪಿಯಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಲು ಭಾರತಕ್ಕೆ ಆಗಮಿಸಿದ್ದ ಯೂಟ್ಯೂಬರ್ ಧ್ರುವ ರಾಠೀ ಅವರನ್ನು ಗುರುಗ್ರಾಮದ ನಿವಾಸದಲ್ಲಿ ವಶಕ್ಕೆ ಪಡೆದುಕೊಂಡಿದ್ದ ದೆಹಲಿ ಪೊಲೀಸರು, ಶನಿವಾರ(ಅ.10) ತಡರಾತ್ರಿ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.
ಎಸ್ಐಆರ್ನಲ್ಲಿ ನಡೆದ ಅಕ್ರಮಗಳ ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದೆ. ಈ ಪ್ರತಿಭಟನೆಯನ್ನು ತಡೆಯಲು ದೆಹಲಿ ಪೊಲೀಸರು ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದರು. ಇದರ ಭಾಗವಾಗಿ ಗುರುಗ್ರಾಮದ ಸೆಕ್ಟರ್ 56ರಲ್ಲಿರುವ ಧ್ರುವ್ ರಾಠಿ ಅವರ ನಿವಾಸದಿಂದ ಶನಿವಾರ ಬೆಳಿಗ್ಗೆ ಅವರನ್ನು ವಶಕ್ಕೆ ಪಡೆಯಲಾಗಿತ್ತು.
ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಸಹ ಪುನಃ ಜಂತರ್ ಮಂತರ್‌ಗೆ ತೆರಳಿ ಪ್ರತಿಭಟನೆಯಲ್ಲಿ ಭಾಗಿಯಾಗಲು ಯತ್ನಿಸಿದರೆ ಮತ್ತೆ ವಶಕ್ಕೆ ಪಡೆಯಬಹುದು. ಇಲ್ಲವೇ ಹೆಚ್ಚಿನ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಪೊಲೀಸ್ ಅಧಿಕಾರಿಗಳೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ
ಸಿವಿಲ್ ಉಡುಪಿನಲ್ಲಿದ್ದ ಸುಮಾರು 50 ಪೊಲೀಸ್ ಸಿಬ್ಬಂದಿ ಶನಿವಾರ ಬೆಳಿಗ್ಗೆ 8 ಗಂಟೆಗೆ ಧ್ರುವ್ ರಾಠಿ ಅವರ ಮನೆಗೆ ಬಂದು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿ ಎಕ್ಸ್ನಲ್ಲಿ ವಿಡಿಯೋ ಹಂಚಿಕೊಂಡಿತ್ತು.
ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಪ್ರತಿಭಟನೆಗೆ ದೆಹಲಿ ಪೊಲೀಸರು ಬ್ರೇಕ್ ಹಾಕಿದ್ದಾರೆ. ಅನುಮತಿ ನಿರಾಕರಣೆ ಹೊರತಾಗಿಯೂ ಪ್ರತಿಭಟನೆಗೆ ಮುಂದಾದ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ), ವಿರೋಧ ಪಕ್ಷಗಳ ನಾಯಕರು, ವಿದ್ಯಾರ್ಥಿಗಳು ಹಾಗೂ ಬೆಂಬಲಿಗರ ಸಹಿತ 7 ಸಾವಿರಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, ರಾತ್ರಿವೇಳೆ ಬಿಡುಗಡೆ ಮಾಡಿದರು.
ಸಿಜೆಪಿ ನಾಯಕ ಅಭಿಜಿತ್ ದಿಪೈ ಹಾಗೂ ಮುಖಂಡರಾದ ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರನ್ನು ವಿಮಾನದಲ್ಲೇ ಪೊಲೀಸರು ವಶಕ್ಕೆ ಪಡೆದರು. ಕಾಂಗ್ರೆಸ್, ಆಮ್ ಆದ್ಮ ಪಕ್ಷ (ಎಎಪಿ), ತೃಣಮೂಲ ಕಾಂಗ್ರೆಸ್ ಮತ್ತು ಎಡಪಕ್ಷಗಳ ಹಲವು ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮುಂದಾದಾಗ ಅವರನ್ನು ವಿವಿಧೆಡೆ ತಡೆದು ವಶಕ್ಕೆ ಪಡೆಯಲಾಯಿತು.
ಪೊಲೀಸರು ಕೈಗೊಂಡ ವ್ಯಾಪಕ ಕ್ರಮಗಳ ನಡುವೆಯೂ ಹಲವು ಕಡೆ ಪ್ರತಿಭಟನಾಕಾರರು ಬೀದಿಗಿಳಿದಿದ್ದರು. ಆದರೆ, ಅವರನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾದರು. ಪರಿಣಾಮ ಪ್ರತಿಭಟನೆಯ ಕೇಂದ್ರ ಬಿಂದು ಜಂತರ್ ಮಂತರ್ ದಿನವಿಡೀ ಬಹುತೇಕ ನಿರ್ಜನವಾಗಿತ್ತು, (ಏಜೆನ್ಸೀಸ್).