ವಿದೇಶಿ ನೆಲದ ಸಂಚಿಗೆ ಯುವಕರು ಕೈಗೊಂಬೆಯಾಗಲ್ಲ!..ಕಾಕ್ರೋಚ್​ ಪಾರ್ಟಿ ವಿರುದ್ಧ ಗುಡುಗಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು | Nitin Nabin

Nitin Nabin | ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್
Nitin Nabin | ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್
Published on
Nitin Nabin: ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್​ ಜನತಾ ಪಾರ್ಟಿ ನಡೆಸಿದ ಮೊದಲ ಪ್ರತಿಭಟನೆ ವಿರುದ್ಧ ಗುಡುಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್​, ದೇಶದ ಯುವಕರನ್ನು ನೆಗೆಟಿವ್ ರಾಜಕೀಯಕ್ಕೆ ಬಳಸಿಕೊಳ್ಳಲು ಬಿಡುವುದಿಲ್ಲ ಎಂದಿದ್ದಾರೆ. ರಾಂಚಿಯಲ್ಲಿ ಸಂವಾದ ನಡೆಸಿದ ಅವರು, ಭಾರತದ ಯುವ ಪೀಳಿಗೆಗೆ ನಿರ್ದೇಶನ ನೀಡಲು ಯಾರಿಗೂ ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರ ವಿರುದ್ಧ ಕಿಡಿಕಾರಿದ್ದಾರೆ.
ಯುವಕರ ಶ್ರಮ ಮತ್ತು ಶಕ್ತಿಯಿಂದಲೇ ದೇಶ ಮುನ್ನಡೆಯುತ್ತಿದೆ. ನಮ್ಮ ಯುವಕರನ್ನು ನೆಗೆಟಿವ್ ರಾಜಕೀಯಕ್ಕೆ ಬಳಸಿಕೊಳ್ಳಲು ನೋಡುತ್ತಿರುವವರಿಗೆ ನಾನು ಎಚ್ಚರಿಕೆ ನೀಡುತ್ತೇನೆ. ಭಾರತದ ಯುವ ಪೀಳಿಗೆ ಸದಾ ಧನಾತ್ಮಕ ರಾಜಕಾರಣದಲ್ಲೇ ತೊಡಗಿಸಿಕೊಳ್ಳಲಿದೆ. ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಪ್ರತಿಭಟನೆ ನಡೆಸಲು ಎಲ್ಲರಿಗೂ ಹಕ್ಕಿದೆ, ಆದರೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾಶಪಡಿಸಲು ನಾವು ಬಿಡುವುದಿಲ್ಲ ಎಂದಿದ್ದಾರೆ.

ವಿದೇಶಿ ನೆಲದ ಸಂಚಿಗೆ ಯುವಕರು ಬಲಿಯಾಗಲ್ಲ

ವಿದೇಶಿ ನೆಲದಲ್ಲಿ ಕುಳಿತುಕೊಂಡು ಭಾರತದ ಯುವಕರಿಗೆ ನಿರ್ದೇಶನ ನೀಡಬಹುದು ಎಂದು ಕೆಲವರು ಭಾವಿಸಿದ್ದಾರೆ. ಆದರೆ ಭಾರತದ ಯುವ ಜನಾಂಗ ಹಳ್ಳಿಗಳ ರಸ್ತೆಯಲ್ಲಿ, ರೈತರ ಜೊತೆ ಕಟ್ಟೆಗಳ ಮೇಲೆ, ಕೋಚಿಂಗ್ ಸೆಂಟರ್‌ಗಳಲ್ಲಿ ಮತ್ತು ಕಾಲೇಜು ಕ್ಯಾಂಪಸ್‌ಗಳಲ್ಲಿ ಬದುಕುತ್ತಿದ್ದಾರೆ. ಅವರು ಕೆಲವೇ ಕೆಲವು ಜನರ ಕೈಗೊಂಬೆಯಾಗಲು ಸಾಧ್ಯವೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ತಿಳಿಸಿದ್ದಾರೆ. ಡಿಜಿಟಲ್ ಮಾಧ್ಯಮವನ್ನು ದೇಶದ ಮತ್ತು ಯುವಕರ ಅಭಿವೃದ್ಧಿಗಾಗಿ ಧನಾತ್ಮಕವಾಗಿ ಬಳಸಿಕೊಳ್ಳಬಹುದು. ಆದರೆ ಯುವ ಕ್ರಾಂತಿಯನ್ನು ಹಾದಿ ತಪ್ಪಿಸಲು ಡಿಜಿಟಲ್ ಮಾಧ್ಯಮ ದುರ್ಬಳಕೆ ಮಾಡಿಕೊಂಡರೆ ಅದಕ್ಕೆ ಅವಕಾಶ ನೀಡುವುದಿಲ್ಲ. ವಿಕಸಿತ ಭಾರತ ನಿರ್ಮಾಣಕ್ಕಾಗಿ ದೇಶದ ಯುವಕರು ಎಚ್ಚೆತ್ತುಕೊಳ್ಳಬೇಕಿದೆ ಎಂದು ಕರೆ ನೀಡಿದರು.

ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

ಇತ್ತ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಯುವಕರು, ಸಿಬಿಎಸ್‌ಇ (CBSE) ಪರೀಕ್ಷೆಗಳು ಮತ್ತು ನೀಟ್-ಯುಜಿ (NEET-UG) ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ.

ವಿವಾದದ ಕೇಂದ್ರಬಿಂದು ಕಾಕ್ರೋಚ್ ಜನತಾ ಪಾರ್ಟಿ

ಬಾಸ್ಟನ್ ವಿಶ್ವವಿದ್ಯಾಲಯದಿಂದ ಪಬ್ಲಿಕ್ ರಿಲೇಶನ್ಸ್‌ನಲ್ಲಿ ಪದವಿ ಪಡೆದಿರುವ ಅಭಿಜೀತ್ ದಿಪ್ಕೆ, ತಾವು ಅಮೆರಿಕದಲ್ಲಿದ್ದಾಗಲೇ ಕಾಕ್ರೋಚ್ ಜನತಾ ಪಾರ್ಟಿ (Cockroach Janta Party) ಎಂಬ ವೆಬ್‌ಸೈಟ್ ಮತ್ತು ಸೋಶಿಯಲ್ ಮೀಡಿಯಾ ಪೇಜ್‌ಗಳನ್ನು ಆರಂಭಿಸಿ ಇತ್ತೀಚೆಗೆ ಸುದ್ದಿಯಾಗಿದ್ದರು. ಇದನ್ನು ಕೇವಲ ಒಂದು ರಾಜಕೀಯ ವ್ಯಂಗ್ಯ (Satire) ಎಂದು ಅವರು ಕರೆದಿದ್ದರು.
ನಿನ್ನೆ (ಶನಿವಾರ ಜೂನ್​ -6) ಬೆಳಗ್ಗೆ ಅಮೆರಿಕದಿಂದ ದೆಹಲಿಗೆ ಬಂದಿಳಿದ ದಿಪ್ಕೆ ನೇರವಾಗಿ ಜಂತರ್ ಮಂತರ್ ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲಿ ಅವರು ಮಾಡಿದ ಕೆಲವು ರಾಜಕೀಯ ಹೇಳಿಕೆಗಳು ಹಳೆಯ ಮತ್ತು ಸವಕಲು ಮಾತುಗಳಂತೆ ಇದ್ದವು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಲೇವಡಿ ಮಾಡಿದ್ದಾರೆ. ಆದಾಗ್ಯೂ, ಕೇವಲ ಕೆಲವೇ ವಾರಗಳಲ್ಲಿ ಈ ಕಾಕ್ರೋಚ್ ಜನತಾ ಪಾರ್ಟಿಯ ಸೋಶಿಯಲ್ ಮೀಡಿಯಾ ಖಾತೆಗಳು ದಶಕಗಳಿಂದ ಸಕ್ರಿಯವಾಗಿರುವ ರಾಜಕೀಯ ಪಕ್ಷಗಳಿಗಿಂತಲೂ ಹೆಚ್ಚಿನ (ಮಿಲಿಯನ್ ಗಟ್ಟಲೆ) ಫಾಲೋವರ್ಸ್ ಗಳಿಸುವಲ್ಲಿ ಯಶಸ್ವಿಯಾಗಿವೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net